ಕನ್ನಡ ಕರಡು ತಿದ್ದುಪಡಿ ಕಮ್ಮಟದಲ್ಲಿ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅಭಿಮತ
ಕನ್ನಡಪ್ರಭ ವಾರ್ತೆ ಸಿರಿಗೆರೆ
ಕನ್ನಡ ಭಾಷೆ ಅತ್ಯಂತ ಪುರಾತನವಾದದ್ದು, ಈ ಭಾಷೆಯ ಸೌಂದರ್ಯ ಕಾಪಾಡಬೇಕಾದರೆ ತಪ್ಪಿಲ್ಲದ ಭಾಷೆ ಪ್ರಯೋಗ ಅತ್ಯಂತ ಅವಶ್ಯಕ ಎಂದು ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಹೇಳಿದರು.ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಶ್ರೀತರಳಬಾಳು ಜಗದ್ಗುರು ಬೃಹನ್ಮಠ ಸಹಯೋಗದಲ್ಲಿ ಶ್ರೀಗುರುಶಾಂತೇಶ್ವರ ದಾಸೋಹ ಭವನದಲ್ಲಿ ಆಯೋಜಿಸಿದ್ದ “ಕನ್ನಡ ಕರಡು ತಿದ್ದುಪಡಿ ಕಮ್ಮಟ” ಉದ್ಘಾಟಿಸಿ ಮಾತನಾಡಿದರು.
ಪುರಾತನ ಕಾಲದಿಂದ ಸಾವಿರಾರು ಭಾಷೆಗಳು ಚಿತ್ರಗಳ ಮೂಲಕ ಲಿಪಿಯನ್ನು ಆರಂಭಿಸಿ ಹಂತ ಹಂತವಾಗಿ ಅವು ಬೆಳೆದು ಅಕ್ಷರ ರೂಪ ತಾಳಿವೆ. ಈ ಅಕ್ಷರ ರೂಪ ತಪ್ಪುಗಳಿಲ್ಲದೆ ಬಳಕೆಯಾದಾಗ ಆ ಭಾಷೆಯ ಸೌಂದರ್ಯ ವೃದ್ಧಿಯಾಗುತ್ತದೆ ಎಂದು ಕಿವಿ ಮಾತು ಹೇಳಿದ ಅವರು, ಪುರಾತನ ಲಿಪಿಗಳಲ್ಲಿ ಕನ್ನಡವೂ ಒಂದು. ಇದನ್ನು ಜಗತ್ತಿನ ಭಾಷೆಗಳ ರಾಣಿ ಎಂದು ವಿನೋಬಾ ಭಾವೆಯವರು ಹೇಳಿದ್ದಾರೆ ಎಂಬುದನ್ನು ಅವರು ಸ್ಮರಿಸಿದರು.
ಡಿಟಿಪಿ ಮಾಡುವವರು ಹಾಗೂ ಲೇಖಕರು ತಮ್ಮ ಹಸ್ತಪ್ರತಿಗಳನ್ನು ತಿದ್ದುವಾಗ ಅತ್ಯಂತ ಎಚ್ಚರಿಕೆಯಿಂದ ಈ ಲೇಖನ ಚಿಹ್ನೆಗಳನ್ನು ತಿದ್ದುಪಡಿ ಮಾಡುವ ವಿಧಾನವನ್ನು ಸಮರ್ಥವಾಗಿ ಕಲಿತಿರಬೇಕು ಎಂದು ಅವರು ಹೇಳಿದರು.
ಪುಸ್ತಕಗಳು ಮನುಷ್ಯನಿಗೆ ಬದುಕು ಕಲಿಸುತ್ತದೆ. ಬದುಕು ಎಂದರೆ ಬರೀ ಬದುಕುವುದಲ್ಲ. ಬದುಕಿಗೊಂದು ಅರ್ಥ ಬರಬೇಕಾದರೆ ಅಧ್ಯಯನ ಬಹಳ ಮುಖ್ಯ. ಹಾಗಾಗಿ ಪುಸ್ತಕಗಳು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ. ನಾವು ಓದುವ ಅಭಿರುಚಿ ಬೆಳೆಸಬೇಕು. ಪುಸ್ತಕ ಪ್ರೀತಿಯನ್ನು ಬೆಳೆಸಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಶ್ರೀತರಳಬಾಳು ಜಗದ್ಗುರು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ಪುಸ್ತಕ ಪ್ರಾಧಿಕಾರದ ವತಿಯಿಂದ ಗೌರವಿಸಲಾಯಿತು.
ಆರಂಭದಲ್ಲಿ ಶಾಲಾ ಮಕ್ಕಳು ವಚನ ಗೀತೆಗಳನ್ನು ಹಾಡಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು.--