ಶಶಿಕಾಂತ ಮೆಂಡೆಗಾರ
ಕಳೆದ ವರ್ಷ ಡಿಸೆಂಬರ್‌ನಲ್ಲಿ ಆವರಿಸಿದ್ದ ವಿಪರೀತ ಶೀತಗಾಳಿ ಹಾಗೂ ಚಳಿಯ ದಾಖಲೆಯನ್ನು ಈ ಬಾರಿಯ ಡಿಸೆಂಬರ್ ಮೀರಿಸಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಹೆಚ್ಚಾಗಿರುವ ಶೀತಗಾಳಿಗೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿನ ಜನತೆ ತತ್ತರಿಸಿದ್ದಾರೆ. 2025 ಡಿ.8ರಂದು 13ರಷ್ಟಿದ್ದ ತಾಪಮಾನ ಕ್ರಮೇಣವಾಗಿ ಕುಸಿಯುತ್ತಿದ್ದು, ಡಿ.13ರಂದು 7ಡಿಗ್ರಿ ಸೆಲ್ಸಿಯಸ್‌ಗೆ ಕುಸಿತವಾಗಿದೆ. ಅತಿಯಾಗಿ ಬೀಸುತ್ತಿರುವ ತೀವ್ರ ಶೀತಗಾಳಿಯು ಗುಮ್ಮಟ ನಗರಿಯನ್ನು ನಡುಗಿಸಿದೆ. ಮಕ್ಕಳಿಗೆ ಹಾಗೂ ಇಳಿ ವಯಸ್ಸಿನವರಿಗೆ ಮನೆಯಿಂದ ಹೊರಬಾರಲಾರದಷ್ಟು ಶೀತವುಂಟಾಗಿದ್ದು, ಎಲ್ಲೆಲ್ಲೂ ಶೀತಜ್ವರ, ಕೆಮ್ಮು, ನೆಗಡಿ ಜೋರಾಗಿದೆ.
ಎಚ್ಚರಿಸಿದ ಹವಾಮಾನ ಇಲಾಖೆ:ಮುಂದಿನ ವಾರದಲ್ಲಿ ಇನ್ನೂ ವಾತಾವರಣ ಬದಲಾಗಲಿದ್ದು, ತಾಪಮಾನ ಇನ್ನಷ್ಟು ಕುಸಿಯಲಿದೆ. ಕನಿಷ್ಠ ತಾಪಮಾನ 4 ಡಿಗ್ರಿ ಸೆಲ್ಸಿಯಸ್‌ನಿಂದ 6 ಡಿಗ್ರಿ ವರೆಗೂ ಕುಸಿಯಬಹುದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಸಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ವಿಜಯಪುರ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಡಿ.13ರಿಂದ ಡಿ.19ರವರೆಗೆ 4ರಿಂದ 6 ಡಿಗ್ರಿ ವರೆಗೆ ಉಷ್ಣಾಂಶ ಕುಸಿಯಲಿದೆ ಎಂಬ ಮುನ್ಸೂಚನೆಯನ್ನೂ ನೀಡಿದೆ. ಈ ಬಾರಿ 4ಡಿಗ್ರಿಗೆ ಉಷ್ಣಾಂಶ ಕುಸಿದಿದ್ದೇ ಆದರೆ, ವಿಜಯಪುರದ ಇತಿಹಾಸದಲ್ಲೇ ಅತೀ ತಾಪಮಾನ ದಾಖಲಾಗಲಿದೆ.
ಯಾವಾಗ ಎಷ್ಟಿತ್ತು:ಕಳೆದ ಎರಡು ವರ್ಷಗಳ ಹಿಂದೆ 2023 ಜನವರಿ 9ರಂದು 6.5ರಷ್ಟು ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈ ಬಾರಿ ಡಿ.13ರಂದು ಕನಿಷ್ಠ ತಾಪಮಾನ 7ಕ್ಕೆ ಇಳಿದಿದೆ. ಹಾಗೂ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇನ್ನಷ್ಟು ಕುಸಿತವಾಗುವ ಸಂಭವವಿದೆ ಎಂದು ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ವೀಕ್ಷಕ ರಾಜು ಕಾಮರೆಡ್ಡಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ಚಳಿಗೆ ಹೆದರಿ ಹೊರಬಾರದ ಜನ:
ಡಿ.8ರಿಂದಲೇ ಗುಮ್ಮಟ ನಗರಿಯಲ್ಲಿ ಉಷ್ಣಾಂಶ ಕುಸಿತವಾಗುತ್ತಿರುವುದರಿಂದ ಬೆಳಗ್ಗೆ 11 ಗಂಟೆಯಾದರೂ ತೀವ್ರ ಶೀತಗಾಳಿ ಬೀಸುತ್ತಿದೆ. ಸಂಜೆ 4ಗಂಟೆಯಿಂದಲೇ ಕೋಲ್ಡ್ ವೇವ್ ಇರುವುದರಿಂದ ಜನರು ಹೊರಬರಲು ಹೆದರುವಂತಾಗಿದೆ. ಇನ್ನು ನಗರದಲ್ಲಿ ಎಲ್ಲಿ ನೋಡಿದರೂ ಚಳಿ ಚಳಿ ತಾಳೆನು ಈ ಚಳಿಯ ಎಂದು ಮಹಿಳೆಯರು ಹಾಗೂ ಪುರುಷರು ಬೆಂಕಿ ಕಾಯಿಸಿಕೊಳ್ಳುವ ದೃಶ್ಯಗಳೇ ಕಾಣಸಿಗುತ್ತಿವೆ.ಅಧಿಕ ಮಳೆಯೂ ಕಾರಣ:
ಮಳೆಗಾಲದಲ್ಲಿ ವಾರ್ಷಿಕವಾಗಿ ಸರಾಸರಿ ಸುರಿಯುವ ಮಳೆಗಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಭೂಮಿಯಲ್ಲಿ ತಂಪಾದ ವಾತಾರಣ ಹೆಚ್ಚಾಗುವುದರಿಂದಲೂ ಚಳಿ ಹೆಚ್ಚಲಿದೆ. ಒಂದೆಡೆ ಕೃಷ್ಣೆ ಹಾಗೂ ಮತ್ತೊಂದೆಡೆ ಭೀಮೆ ಸೇರಿ ಜಿಲ್ಲೆಯ ಎರಡೂ ಬದಿಗಳಲ್ಲಿ ನದಿಗಳು ಹರಿಯುವುದರಿಂದ ಸಹಜವಾಗಿ ಮಧ್ಯದಲ್ಲಿರುವ ಭಾಗದಲ್ಲಿ ತಾಪಮಾನ ಕುಸಿಯುತ್ತದೆ.ವೈದ್ಯರ ಸಲಹೆಗಳು:
ಚಳಿ ಹೆಚ್ಚಾಗಿರುವುದರಿಂದ ಅನಗತ್ಯವಾಗಿ ಯಾರೂ ಹೊರಗಡೆ ಓಡಾಡಬಾರದು. ಅವಶ್ಯಕತೆಯಿದ್ದವರು ಸ್ವೆಟರ್, ಕ್ಯಾಪ್, ಹ್ಯಾಂಡ್ ಗ್ಲೌಸ್ ಸೇರಿದಂತೆ ಬೆಚ್ಚಗಿನ ಉಡುಪುಗಳನ್ನು ಧರಿಸಿ ಓಡಾಡಬೇಕು. ಬೆಳಗ್ಗೆ ಹಾಗೂ ರಾತ್ರಿ ಮನೆಯ ಕಿಟಕಿಗಳನ್ನು ಮುಚ್ಚುವುದರಿಂದ ಹಾಗೂ ನಲದ ಮೇಲೆ ಮಲಗುವುದನ್ನು ತಪ್ಪಿಸುವುದರಿಂದ ಶೀತ, ಕೆಮ್ಮು, ಜ್ವರದಂತಹ ಕಾಯಿಲೆಗಳು ಬಾರದಂತೆ ತಡೆಯಬಹುದಾಗಿದೆ. ಚಳಿಯಲ್ಲಿ ತಣ್ಣೀರು ಸ್ನಾನ ಮಾಡುವುದನ್ನೂ ಸಹ ತಪ್ಪಿಸವುದು ಒಳಿತು.ಕಳೆದ ಬಾರಿ ಡಿಸೆಂಬರ್‌ನಲ್ಲಿ ಶೇ.12 ರಷ್ಟಿದ್ದ ತಾಪಮಾನ ಈ ಬಾರಿ ಡಿಸೆಂಬರ್ 13ರಂದು 7ಕ್ಕೆ ಇಳಿದಿದೆ. ಈ ಅಂದಾಜಿನ ಪ್ರಕಾರ ಮುಂದಿನ ವಾರ ಇನ್ನೂ ತಾಪಮಾನ ಕುಸಿತವಾಗಲಿದೆ. ಚಳಿಗಾಲದಲ್ಲಿ ಎಲ್ಲರೂ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಚಳಿಯಿಂದ ಪಾರಾಗಬೇಕು..ಡಾ.ಬಿ.ಟಿ.ನಾಡಗೌಡ, ಹವಾಮಾನ ಶಾಸ್ತ್ರಜ್ಞರು, ವಿಜಯಪುರ