ಕನ್ನಡಪ್ರಭ ವಾರ್ತೆ ಬೇಲೂರು ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ತಮ್ಮ ಹುಟ್ಟೂರು ಹುಲಿಕಲ್ ಆದರೂ ಸಾಕು ಮಗ ಬಳ್ಳೂರು ಉಮೇಶ್ ಜೊತೆಗೆ ಬೇಲೂರು ತಾಲೂಕಿನ ಬಳ್ಳೂರು ಗ್ರಾಮದಲ್ಲಿ ವಾಸವಿದ್ದು ತಮ್ಮ ಸರಳತೆಯಿಂದ ತಾಲೂಕಿನ ಜನತೆಯ ಪ್ರೀತಿಗೆ ಪಾತ್ರರಾಗಿದ್ದರು.
ವೃಕ್ಷಮಾತೆ ಸಾಲುಮರದ ತಿಮ್ಮಕ್ಕಮವರು ತಮ್ಮ ಜೀವನದ ಏಳು ಬೀಳುಗಳ ನಡುವೆ ಶತಾಯುಷಿ ಜೀವನವನ್ನು ಸಂತೃಪ್ತಿಯಾಗಿ ಕಳೆದು ಇಹಲೋಕವನ್ನು ತ್ಯಜಿಸಿದ್ದಾರೆ. ಎರಡು ದಶಕಗಳ ಹಿಂದೆ ತಿಮ್ಮಕ್ಕನವರಿಗೆ ಬೇಲೂರು ತಾಲೂಕಿನ ಪರಿಸರ ಪ್ರೇಮಿ ಬಳ್ಳೂರು ಉಮೇಶ್ ಅವರು ಸಾಲುಮರದ ತಿಮ್ಮಕ್ಕನವರ ಸಾಧನೆಯನ್ನು ಕೇಳಿ ತಿಳಿದು ತಾನು ಅವರಂತೆ ಮರ ಗಿಡಗಳನ್ನು ಬೆಳೆಸಬೇಕು ಎಂದು ಅವರ ಆಶೀರ್ವಾದ ಪಡೆಯಲು ಹುಲಿಕಲ್‌ಗೆ ತೆರಳಿ ತಿಮ್ಮಕ್ಕನಿಗೆ ಪರಿಚಯವಾದರು. ನಂತರದಲ್ಲಿ ವಾರಕ್ಕೊಮ್ಮೆ ತಿಂಗಳಿಗೊಮ್ಮೆ ಹುಲಿಕಲ್ಲಿಗೆ ಹೋಗಿ ಅವರ ಆರೋಗ್ಯ ವಿಚಾರಿಸಿ ಬರುತ್ತಿದ್ದರು. ಒಮ್ಮೆ ತೀರ ಅನಾರೋಗ್ಯ ಸ್ಥಿತಿಯಲ್ಲಿದ್ದ ತಿಮ್ಮಕ್ಕನವರನ್ನು ಬೆಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ನಂತರದಲ್ಲಿ ತಿಮ್ಮಕ್ಕನವರ ಆರೋಗ್ಯಕ್ಕೆ ಹೆಚ್ಚಿನ ಗಮನಕೊಡಲು ಅವರನ್ನು ತಮ್ಮ ಸಗ್ರಾಮ ಬಳ್ಳೂರಿಗೆ ಕರೆದುಕೊಂಡು ಬಂದರು. ತಾಯಿ ಮಗನ ಬಾಂಧವ್ಯ ಹೆಮ್ಮರವಾಗಿ ಬೆಳೆದು ಸಾಕು ಮಗನಾಗಿ ನಂತರ ಸ್ವಂತ ಮಗನಾಗಿ ಅವರ ಆರೈಕೆ ಮಾಡಿದರು.ಸಾಲುಮರದ ತಿಮ್ಮಕ್ಕನವರ ದಿನನಿತ್ಯದ ದಿನಚರಿಯ ಜೊತೆಗೆ ಅವರ ಆಹಾರ, ಪೋಷಾಕಿನ ಜೊತೆಗೆ ರಾಜ್ಯಾದ್ಯಂತ ನಡೆಯುತ್ತಿದ್ದ ಸಭೆ, ಸನ್ಮಾನ ಸಮಾರಂಭಗಳಿಗೆ ಹೆಚ್ಚಿನ ಕಾಳಜಿ ವಹಿಸಿ ಅವರನ್ನು ಕರೆದುಕೊಂಡು ಹೋಗಿ ಬರುತ್ತಿದ್ದರು. "ಎತ್ತಣ ಮಾಮರ ಎತ್ತಣ ಕೋಗಿಲೆ " ಎಂಬಂತೆ ಸಾಲುಮರದ ತಿಮ್ಮಕ್ಕ ಹಾಗೂ ಉಮೇಶ್ ಅವರ ನಡುವಿನ ಮಾತೃ ಪ್ರೇಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದರಲ್ಲೂ ಕಳೆದ ಐದಾರು ತಿಂಗಳಿಂದ ತಿಮ್ಮಕ್ಕನವರು ತೀವ್ರ ಅನಾರೋಗ್ಯಗೊಂಡ ಸಂದರ್ಭದಲ್ಲಿ ಬಳ್ಳೂರು ಉಮೇಶ್ ಎಡಬಿಡದೆ ದಿನನಿತ್ಯ ಅವರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಬೇಲೂರು ತಾಲೂಕಿನಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದ ಸಾಲುಮರದ ತಿಮ್ಮಕ್ಕನವರ ಮರಣದ ಬಗ್ಗೆ ಸಾರ್ವಜನಿಕರು ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ಅನಕ್ಷರಸ್ಥರಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿ ಗೌರವ ಡಾಕ್ಟರೇಟ್‌ಗೆ ಪಾತ್ರರಾಗಿದ್ದ ಅವರಿಗೆ ಪದ್ಮಶ್ರೀ ಸೇರಿದಂತೆ ಅತ್ಯುನ್ನತ ಪ್ರಶಸ್ತಿಗಳು ಲಭಿಸಿದ್ದವು. ತಿಮ್ಮಕ್ಕನವರು ಎಷ್ಟು ಮುಗ್ಧರಾಗಿದ್ದರೆಂದರೆ, ತಮಗೆ ಪ್ರಶಸ್ತಿ ನೀಡಿದ ರಾಷ್ಟ್ರಪತಿಗಳ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದ್ದರು. ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕೂಡ ಅಷ್ಟೇ ಮುಗ್ಧತೆಯಿಂದ ಅವರ ಆಶೀರ್ವಾದ ಸ್ವೀಕರಿಸಿದ್ದನ್ನು ತಾಲೂಕಿನ ಜನತೆ ಈಗಲೂ ಮೆಲುಕು ಹಾಕುತ್ತಾರೆ.ಛಾಯಾಗ್ರಾಹಕರ ಸಂಘದ ಮಾಜಿ ಅಧ್ಯಕ್ಷ ಮಲ್ಲೇಶ್ ಮಾತನಾಡಿ, ಬಹುಕಾಲ ಮಕ್ಕಳಾಗದ ದಂಪತಿ ತಮ್ಮ ನೋವು ಮರೆಯಲು ಹುಲಿಕಲ್ ರಾಜ್ಯ ಹೆದ್ದಾರಿ 94 ರಲ್ಲಿ ಇವರು ಬೆಳೆಸಿದ 385 ಆಲದ ಮರಗಳು ಇಂದಿಗೂ ಪರಿಸರ ಪ್ರೇಮಕ್ಕೆ ಸಾಕ್ಷಯಾಗಿದೆ. ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಾಗಿವೆ. ಇವರಿಂದ ಪ್ರೇರಣೆ ಪಡೆದು ನೂರಾರು ಯುವಕರು ವೃಕ್ಷ ಸಂವರ್ಧನೆ ಮಾಡಿದ್ದಾರೆ. ಅರಣ್ಯ ಇಲಾಖೆ ಸಾಲು ಮರದ ತಿಮ್ಮಕ್ಕ ಅವರ ಹೆಸರಲ್ಲಿ ವೃಕ್ಷೋದ್ಯಾನವನಗಳನ್ನು ನಿರ್ಮಿಸಿರುವುದು ಶ್ಲಾಘನೀಯ ಎಂದರು.
ಸಾಲುಮರದ ತಿಮ್ಮಕ್ಕನವರ ನಿಧನಕ್ಕೆ ಶಾಸಕ ಎಚ್ ಕೆ ಸುರೇಶ್, ಮಾಜಿ ಶಾಸಕ ಕೆ ಎಸ್ ಲಿಂಗೇಶ್, ಮಾಜಿ ಸಚಿವ ಬಿ ಶಿವರಾಂ, ಮಾಜಿ ಪುರಸಭಾ ಅಧ್ಯಕ್ಷ ತೀರ್ಥ ಕುಮಾರಿ, ಡಾ. ರಾಜ್ ಅಭಿಮಾನಿ ಸಂಘದ ತೀರ್ಥಂಕರ್, ಕರವೇ ಅಧ್ಯಕ್ಷ, ಚಂದ್ರಶೇಖರ್, ಕಾರ್ಯದರ್ಶಿ ಖಾದರ್, ಕಸಾಪ ಅಧ್ಯಕ್ಷ ಮಾನ ಮಂಜೇಗೌಡ, ಡಾ. ನಾರಾಯಣಸ್ವಾಮಿ, ಡಾ. ಸಂತೋಷ್, ಚಂದ್ರಮೌಳಿ ತಾಲೂಕಿನ ಅಪಾರ ಪರಿಸರ ಪ್ರೇಮಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.*ಹೇಳಿಕೆ-1ಪರಿಸರ ಲೋಕ ಅನಾಥವಾಗಿದೆ
ತಿಮ್ಮಕ್ಕನವರು ಇಂದು ವಿಶ್ವಮಾನ್ಯರಾಗಿದ್ದಾರೆ. ಬಿಬಿಸಿ ಸುದ್ದಿವಾಹಿನಿ ನಡೆಸಿದ ಜಗತ್ತಿನ 100 ಪ್ರಭಾವಿ ಮಹಿಳೆಯರ ಸಮೀಕ್ಷೆಯಲ್ಲಿ ಸಾಲು ಮರದ ತಿಮ್ಮಕ್ಕ ಸ್ಥಾನ ಪಡೆದಿದ್ದರು. ತಿಮ್ಮಕ್ಕ ಅವರ ಜೀವನ, ಸೇವೆಯ ಮೇಲೆ ಅಧ್ಯಯನ ನಡೆಸಿ ಪ್ರೌಢ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದಿದ್ದು ಇವರ ಮರಣದಿಂದ ಪರಿಸರ ಲೋಕ ಅನಾಥವಾಗಿದೆ.
- ಬೋಜೆಗೌಡ- ಕರವೇ ಅಧ್ಯಕ್ಷ