ಪಿ.ಎಸ್‌.ರಂಗನಾಥ್‌ ಸಂಪಾದಕತ್ವದ ‘ಅರಬ್ಬರ ನಾಡಿನಲ್ಲಿ ಕನ್ನಡಿಗರು’ ಕೃತಿ ಲೋಕಾರ್ಪಣೆ

KannadaprabhaNewsNetwork | Published : Jan 16, 2024 1:45 AM

ಸಾರಾಂಶ

ಪಿ.ಎಸ್‌.ರಂಗನಾಥ್‌ ಸಂಪಾದಕತ್ವದ ‘ಅರಬ್ಬರ ನಾಡಿನಲ್ಲಿ ಕನ್ನಡಿಗರು’ ಕೃತಿ ಲೋಕಾರ್ಪಣೆ ಮಾಡಲಾಯಿತು. ಎಲ್ಲೇ ಹೋದರೂ ನಮ್ಮ ಸಂಸ್ಕೃತಿ, ಪರಂಪರೆ, ಮೌಲ್ಯಗಳನ್ನು ಪಸರಿಸಬೇಕು ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಯಾವ ದೇಶಕ್ಕೆ ತೆರಳಿದರೂ ತಾಯಿ ಬೇರಿನ ಬಗ್ಗೆ ಮಮತೆ ಕಡಿಮೆ ಆಗಬಾರದು. ಎಲ್ಲೇ ಹೋದರೂ ನಮ್ಮ ಸಂಸ್ಕೃತಿ, ಪರಂಪರೆ, ಮೌಲ್ಯಗಳನ್ನು ಪಸರಿಸಬೇಕು ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿರೇಶಾನಂದ ಸರಸ್ವತಿ ಸ್ವಾಮೀಜಿ ಕರೆ ನೀಡಿದರು.

ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಸ್ಕತ್‌ ನಿವಾಸಿ ಪಿ.ಎಸ್‌.ರಂಗನಾಥ್‌ ಸಂಪಾದಕತ್ವದ ‘ಅರಬ್ಬರ ನಾಡಿನಲ್ಲಿ ಕನ್ನಡಿಗರು’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿಯನ್ನು ನಮ್ಮ ಮಕ್ಕಳು, ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಜೊತೆಗೆ ವಿದೇಶೀಯರಿಗೂ ಕಲಿಸಬೇಕು. ಯಾವುದೇ ದೇಶಕ್ಕೆ ತೆರಳಿದರೂ ತಾಯಿ ಬೇರಿನ ಬಗ್ಗೆ ಮಮತೆ ಕಡಿಮೆ ಆಗಬಾರದು. ಎಲ್ಲೇ ಹೋದರೂ ನಮ್ಮ ಸಂಸ್ಕೃತಿ, ಪರಂಪರೆ, ಮೌಲ್ಯಗಳನ್ನು ಪಸರಿಸಬೇಕು. ಒಮನ್‌ ರಾಷ್ಟ್ರದ ವಸ್ತುಸ್ಥಿತಿಯನ್ನು ಈ ಕೃತಿ ಸೊಗಸಾಗಿ ಕಟ್ಟಿಕೊಟ್ಟಿದೆ. ಇದಕ್ಕಾಗಿ ರಂಗನಾಥ್‌ ಅವರನ್ನು ಅಭಿನಂದಿಸುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಒಮನ್‌ನಲ್ಲಿ ಭಾರತೀಯರು ಪರಿಶ್ರಮಪಡುತ್ತಿದ್ದು ಸಂತೋಷದಿಂದ, ನಿರಾಳವಾಗಿದ್ದಾರೆ. ಅರಬ್‌ ರಾಷ್ಟ್ರಗಳು ಉಷ್ಣಾಂಶದ ವೈಪರೀತ್ಯ, ಪ್ರಾಕೃತಿಕ ಸಂಪನ್ಮೂಲಗಳ ಕೊರತೆಯ ನಡುವೆಯೇ ಅಭಿವೃದ್ಧಿ ಹೊಂದುತ್ತಿವೆ. ಅಲ್ಲಿನ ರಸ್ತೆಗಳು ಶುಭ್ರವಾಗಿದ್ದು ಜನರು ಕಾನೂನು ಪಾಲಿಸುತ್ತಾರೆ. ಇದನ್ನು ನಿಜಕ್ಕೂ ನಾವು ಕಲಿತುಕೊಳ್ಳಬೇಕು. ವಿದೇಶಗಳ ಒಳ್ಳೆಯ ಸಂಗತಿಗಳನ್ನು ನಮಗೆ ತಿಳಿಸಿ, ಕೇಳುವುದಕ್ಕೆ ಸಾಕಷ್ಟು ಮನಸ್ಸುಗಳು ಸಿದ್ಧವಿವೆ ಎಂದು ಅಭಿಪ್ರಾಯಪಟ್ಟರು.

ಸೊಗಸಾದ ಪುಸ್ತಕ:

ಪತ್ರಕರ್ತ ವಿಶ್ವೇಶ್ವರ ಭಟ್‌ ಮಾತನಾಡಿ, 5 ರಿಂದ 20 ವರ್ಷ ಉದ್ಯೋಗ ನಿಮಿತ್ತ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ನಾನು ನೋಡಿದ್ದೇನೆ. ಆದರೆ ತಾವು ನೆಲೆಸಿದ ದೇಶಗಳ ಬಗ್ಗೆ ತಾಯ್ನಾಡಿನ ಕನ್ನಡಿಗರಿಗೆ ಪರಿಚಯಿಸಿದವರು ಬಹಳ ಕಡಿಮೆ. ರಂಗನಾಥ್‌ ಅವರು ಒಮನ್‌ ದೇಶದ ಬಗ್ಗೆ ಸೊಗಸಾದ ಪುಸ್ತಕ ನೀಡಿದ್ದಾರೆ. ಅರಬ್‌ ರಾಷ್ಟ್ರಗಳಲ್ಲೇ ಅತ್ಯಂತ ಪ್ರಾಕೃತಿಕ ಸಂಪತ್ತನ್ನು ಒಮನ್‌ ಹೊಂದಿದೆ. ತರಬತ್‌ ಪ್ರದೇಶವೊಂದರಲ್ಲೇ 30ಕ್ಕೂ ಅಧಿಕ ಜಲಪಾತಗಳಿವೆ ಎಂದು ನೆನಪಿಸಿಕೊಂಡರು.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ। ಮಹೇಶ್‌ ಜೋಷಿ, ಸಾಹಿತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್‌, ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ। ಆರತಿ ಕೃಷ್ಣ, ಸಂಶೋಧಕ ಡಾ। ಕೆ.ಜಿ.ಲಕ್ಷ್ಮೀನಾರಾಯಣಪ್ಪ, ಬ್ರಾಹ್ಮಿನ್ಸ್‌ ಕೆಫೆಯ ರಾಧಾಕೃಷ್ಣ ಅಡಿಗ ಉಪಸ್ಥಿತರಿದ್ದರು.

Share this article