ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಂಸದ ಬಿ.ವೈ.ರಾಘವೇಂದ್ರ ಅವರು ಕಾಮಗಾರಿ ಮುಗಿಯುವ ಮೊದಲೇ ಅಧಿಕಾರಿಗಳ ಪ್ರಮಾಣಪತ್ರವಿಲ್ಲದೇ ಗಡಿಬಿಡಿಯಲ್ಲಿ ಟೇಪು ಕಟ್ ಮಾಡುತ್ತಿದ್ದಾರೆ ಎಂದು ಆಯನೂರು ಮಂಜುನಾಥ್ ಆರೋಪಿಸಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಸದ ಬಿ.ವೈ.ರಾಘವೇಂದ್ರ ಭಾನುವಾರ ಶಿಷ್ಟಾಚಾರವನ್ನು ಉಲಂಘಿಸಿ ಬೈಪಾಸ್ ರಸ್ತೆ ಸೇತುವೆ ಕಾಮಗಾರಿಯನ್ನು ಉದ್ಘಾಟಿಸಿದ್ದಾರೆ. ಸೇತುವೆ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಕೇಳಿದರೆ ಸರಿಯಾದ ಉತ್ತರ ನೀಡಿಲ್ಲ. ಕಾರ್ಯಕ್ರಮಕ್ಕೆ ಬಿಜೆಪಿಯ ಶಾಸಕರಾದ ರುದ್ರೇಗೌಡರಾಗಲಿ, ಡಿ.ಎಸ್.ಅರುಣ್ ಅವರನ್ನಾಗಲಿ ಕರೆದಿಲ್ಲ. ಅಧಿಕಾರಿಗಳನ್ನು ಕೇಳಿದರೆ, ನಮಗೆ ಗೊತ್ತೇ ಇಲ್ಲ ಎನ್ನುತ್ತಾರೆ ಎಂದು ದೂರಿದರು.
ಬಿಜೆಪಿ ಅನುಕೂಲಕ್ಕೆ:ಇಡೀ ಶಿವಮೊಗ್ಗದಲ್ಲಿ ನಡೆಯುತ್ತಿರುವ ಕಾಮಗಾರಿಗಳೆಲ್ಲವೂ ಬಿಜೆಪಿ ನಾಯಕರ ಮನೆ, ಇಲ್ಲವೇ ಆಸ್ತಿಗಳ ಸುತ್ತ ತಿರುಗಿ ಅತ್ಯಂತ ಶೀಘ್ರವಾಗಿ ನಡೆಯುತ್ತವೆ. ರಿಂಗ್ ರೋಡ್ ಆಗಲಿ, ರಸ್ತೆಗಳಾಗಲಿ, ಬಿಜೆಪಿ ನಾಯಕರಿಗೆ ಅನುಕೂಲ ಆಗುವಂತೆ ರೂಪುಗೊಳ್ಳುತ್ತವೆ. ಈ ಕಾಮಗಾರಿಗಳು ಪೂರ್ಣ ಮುಗಿಯದೇ ಇದ್ದರೂ ಕೂಡ ಏಕೆ ಅವಸರದಿಂದ ಉದ್ಘಾಟನೆ ಮಾಡುತ್ತಾರೋ ಗೊತ್ತಿಲ್ಲ. ಇದು ಜನರ ದುಡ್ಡು, ಜನರ ಪಾಲ್ಗೊಳ್ಳುವಿಕೆ ಮುಖ್ಯವಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ, ಸರ್ಕಾರಿ ಯಾವುದೇ ಅಧಿಕಾರಿಗಳನ್ನು ಇದರಲ್ಲಿ ಪಾಲ್ಗೊಳ್ಳುವಂತೆ ನಡೆದುಕೊಂಡಿಲ್ಲ ಎಂದು ಕಟುವಾಗಿ ಟೀಕಿಸಿದರು.
ಸಿಗಂದೂರು ಸೇತುವೆಗೆ ಬಿಜೆಪಿಯ ರಾಷ್ಟ್ರೀಯ ನಾಯಕ ನಿತಿನ್ ಗಡ್ಕರಿ ಅವರೇ ಶಂಕುಸ್ಥಾಪನೆ ಮಾಡಿದ್ದರು. ಆ ಕೆಲಸ ಎಲ್ಲಿ ಆಗಿದೆ? ಅಲ್ಲೇಕೆ ವೇಗವಾಗಿ ಮಾಡುತ್ತಿಲ್ಲ? ತಾಳಗೊಪ್ಪದಿಂದ ಲಯನ್ ಸಫಾರಿಯವರೆಗೆ ಚತುಷ್ಪಥ ರಸ್ತೆಗೆ ₹650 ಕೋಟಿ ಎಂದು ಹೇಳಲಾಗುತ್ತಿದೆ. ಹಿಂದೆ ₹6 ಸಾವಿರ ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಎಂದಿದ್ದರು. ಹೀಗೇ ಒಂದೊಂದು ಕಾಮಗಾರಿಗೆ ಪದೇಪದೆ ಪ್ರತ್ಯೇಕವಾಗಿ ಹೆಸರಿಸುತ್ತ ತಾವು ಬಹಳ ಸಂಖ್ಯೆಯಲ್ಲಿ ಕಾಮಗಾರಿಗಳನ್ನು ಮಾಡಿರುವೆ ಎಂದು ಸಂಸದರು ಹೇಳಲು ಹೊರಟಂತೆ ಇದೆ ಎಂದು ವಾಗ್ದಾಳಿ ನಡೆಸಿದರು.ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ವೈ.ಎಚ್.ನಾಗರಾಜ್ ಪ್ರಮುಖರಾದ ಹಿರಣ್ಣಯ್ಯ, ಜಿ.ಪದ್ಮನಾಭ್, ಶಿ.ಜು.ಪಾಶ, ಧೀರರಾಜ್ ಹೊನ್ನವಿಲೆ, ಲೋಕೇಶ್, ಆಯನೂರು ಸಂತೋಷ್, ಕೃಷ್ಣ, ಐಡಿಯಲ್ ಗೋಪಿ ಇದ್ದರು.
- - - -18ಎಸ್‌ಎಂಜಿಕೆಪಿ02: ಆಯನೂರು ಮಂಜುನಾಥ್