ಕನ್ನಡಪ್ರಭ ವಾರ್ತೆ ಮೈಸೂರು
ಬಿಡಬೇಡಿ ಬಿಡಬೇಡಿ ನೀರು ಬಿಡಬೇಡಿ, ಏತಕ್ಕಾಗಿ ಹೋರಾಟ ನೀರಿಗಾಗಿ ಹೋರಾಟ, ಕಾವೇರಿ ನಮ್ಮ ತಾಯಿ ಕಾವೇರಿ ಉಳಿಸಿ ಎನ್ನುವ ಘೋಷಣೆ ಕೂಗುತ್ತಾ ರಸ್ತೆ ತಡೆ ನಡೆಸಲು ಯತ್ನಿಸಿದಾಗ ಪೊಲೀಸರು ಅಡ್ಡಿಪಡಿಸಲು ಮುಂದಾದಾಗ ಪೊಲೀಸರನ್ನು ಲೆಕ್ಕಿಸದೆ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಖಾಲಿ ಬಿಂದಿಗೆ ಹಿಡಿದು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ, ರಸ್ತೆ ತಡೆ ನಡೆಸಿದರು. ನೂರಾರು ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತವು.ಚಳವಳಿ ನೇತೃತ್ವವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ನೀರು ನಿರ್ವಹಣಾ ಮಂಡಳಿ ಮುಂದೆ ರಾಜ್ಯದ ನೀರಾವರಿ ಸಚಿವರು ರಾಮಲಿಂಗರೆಡ್ಡಿ ಕಾವೇರಿ ಅಚ್ಚುಕಟ್ಟು ಭಾಗದ ಸಮಸ್ಯೆ ಕುರಿತು ವಾಸ್ತವ ಸಂಗತಿ ಮಂಡಿಸಿಲ್ಲ. ಇವರ ನಿರ್ಲಕ್ಷತನ ನೀರು ಬಿಡುವಂತೆ ಆದೇಶ ಬರಲು ಕಾರಣವಾಯಿತು. ಕೂಡಲೇ ಕಾವೇರಿ ಪ್ರಾಧಿಕಾರದ ಮುಂದೆ ಪುನರ್ ಪರಿಶೀಲನ ಅರ್ಜಿ ಸಲ್ಲಿಸಲಿ. ಯಾವುದೇ ಕಾರಣಕ್ಕೂ ನೀರು ಬಿಡಬಾರದು ನೀರು ಹರಿಸಿದರೆ ಕಾವೇರಿಕೊಳ್ಳದ ರೈತರು ಸಂಘ ಸಂಸ್ಥೆಗಳು ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಾದ ಕೆ.ಆರ್.ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿಗಳಲ್ಲಿ ಪ್ರಸ್ತುತ ಇರುವ ನೀರು ನಮ್ಮ ರಾಜ್ಯದ ಕುಡಿಯುವ ನೀರಿನ ಅಗತ್ಯತೆಗೆ ಬೆಳೆದು ನಿಂತ ರೈತರ ಬೆಳೆಗಳ ರಕ್ಷಣೆಗೆ ಮಾತ್ರ ಇದೆ. ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಕಾವೇರಿ ನೀರನ್ನೇ ನೆಚ್ಚಿಕೊಂಡಿರುವ ನಗರಗಳು ಮತ್ತು ಗ್ರಾಮಗಳ ಕುಡಿಯುವ ನೀರಿನ ಅಭಾವವನ್ನು ನೀಗಿಸುವುದು ಕಷ್ಟ ಸಾಧ್ಯ ಎಂದರು.
ಪ್ರತಿಭಟನೆಯಲ್ಲಿ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮಾರ್ಬಳ್ಳಿ ನೀಲಕಂಠಪ್ಪ, ವರಕೋಡು ನಾಗೇಶ್, ಲಕ್ಷ್ಮೀಪುರ ವೆಂಕಟೇಶ್, ಕೆ.ಜಿ. ಗುರುಸ್ವಾಮಿ, ಕುರುಬೂರು ಸಿದ್ದೇಶ್, ಪಿ. ಪರಶಿವಮೂರ್ತಿ, ಕಾಟೂರು ನಾಗೇಶ್, ಅಂಬಳೆ ಮಂಜುನಾಥ್, ವಾಜಮಂಗಲ ಮಹಾದೇವ, ಜಯರಾಮು, ಶಿವಣ್ಣ, ಮಹೇಶ್, ಮಿಲಿಟರಿ ಕುಮಾರ್, ನಂಜುಂಡಸ್ವಾಮಿ, ರಂಗರಾಜು, ಪ್ರಭಾಕರ್, ಉಮೇಶ್, ಬಾಲು, ಸತೀಶ್, ಗಿರಿಯಣ್ಣ ಸೇರಿದಂತೆ 100ಕ್ಕೂ ಹೆಚ್ಚು ರೈತರು ಇದ್ದರು.