ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ಕೊಕ್ಕೆ: ಸಿದ್ದರಾಮಯ್ಯ

KannadaprabhaNewsNetwork |  
Published : Feb 09, 2026, 02:30 AM IST
ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. | Kannada Prabha

ಸಾರಾಂಶ

ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಮನರೇಗಾ ಯೋಜನೆ ಜಾರಿಗೆ ತಂದಿದ್ದರು. ಈಗ ಈ ಯೋಜನೆಯನ್ನು ರದ್ದು ಮಾಡಿ ವಿಬಿ-ಜಿ ರಾಮ್‌ ಜಿ ಕಾಯ್ದೆ ಮಾಡಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಜನರು ನಿರುದ್ಯೋಗಿಗಳಾಗಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹುಬ್ಬಳ್ಳಿ: ರಾಜ್ಯದಲ್ಲಿ ನೀರಾವರಿ ಯೋಜನೆಗಳು ಕೇಂದ್ರ ಸರ್ಕಾರದಿಂದಾಗಿಯೇ ನನೆಗುದಿಗೆ ಬಿದ್ದಿವೆ. ಬಿಜೆಪಿಗರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರು ಮಹದಾಯಿ ಯೋಜನೆ ರಾಜ್ಯ ಸರ್ಕಾರ ಜಾರಿ ಮಾಡುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಪರಿಸರ ಇಲಾಖೆ ಅನುಮತಿ ಕೊಡದೇ ಇರುವುದರಿಂದ ಕಾಮಗಾರಿ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಬಿಜೆಪಿಗರ ಈ ಮಾತನ್ನು ನಂಬಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಶಿರಗುಪ್ಪಿ ಗ್ರಾಮದಲ್ಲಿ ಜಲ ಸಂಪನ್ಮೂಲ ಇಲಾಖೆ ಹಾಗೂ ಕರ್ನಾಟಕ ನೀರಾವರಿ ನಿಗಮ ನಿಯಮಿತ ಸಹಯೋಗದಲ್ಲಿ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿ ಶಂಕುಸ್ಥಾಪನೆ ಮತ್ತು ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನಾ, ಭೂಮಿಪೂಜೆ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಹದಾಯಿ ಯೋಜನೆಯಂತೆ, ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗೆ 2003ರಲ್ಲಿಯೇ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ. ಆದರೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಮಾಡದ ಹಿನ್ನೆಲೆಯಲ್ಲಿ ಈ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ತೆಲಂಗಾಣ, ಆಂಧ್ರಪ್ರದೇಶ ನಡುವಿನ ತಿಕ್ಕಾಟ ಇದೆ. ಅದು ನಮಗೇನು ಸಂಬಂಧ?. ಇನ್ನು ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಹಾಕಿದ ಅರ್ಜಿ ನವೆಂಬರ್ ತಿಂಗಳಲ್ಲಿಯೇ ವಜಾ ಆಗಿದ್ದರೂ, ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಿಲ್ಲ. ಇನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ₹5,300 ಕೋಟಿ ಕೊಡುವುದಾಗಿ ಬಜೆಟ್‌ನಲ್ಲಿ ಘೋಷಿಸಿತ್ತು. ಆದರೀಗ 3 ವರ್ಷವಾದರೂ, ಬಿಡಗಾಸು ಬಂದಿಲ್ಲ. ಆಗಿನ ಸಿಎಂ ಬೊಮ್ಮಾಯಿ ಇದರ ಮುಂದುವರಿದ ಭಾಗವಾಗಿ ಇದನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುತ್ತೇವೆ ಎಂದು ಹೇಳಿದ್ದರು. ಅದು ಆಗಿಲ್ಲ ಎಂದು ಕಿಡಿಕಾರಿದರು.

ಏಳು ವರ್ಷಗಳಿಂದ ಕಳಸಾ ಬಂಡೂರಿ ಯೋಜನೆ ಅನುಮತಿ ಸಿಗದಿರುವುದರಿಂದ ನನೆಗುದಿಗೆ ಬಿದ್ದಿದೆ. ಈ ಹಿಂದೆ ಯಡಿಯೂರಪ್ಪ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಮಹದಾಯಿ, ಕಳಸಾ ಬಂಡೂರಿ ಜಾರಿ ಮಾಡುತ್ತೇವೆ. ಇದನ್ನು ರಕ್ತದಲ್ಲಿ ಬರೆದುಕೊಡುತ್ತೇವೆ ಎಂದಿದ್ದರು. ಆದರೆ, ಭರವಸೆ ಈಡೇರಿಸಲಿಲ್ಲ. ಬಳಿಕ ಬಸವರಾಜ ಬೊಮ್ಮಾಯಿ ಅವರು ಈ ನಿಟ್ಟಿನಲ್ಲಿ ಏನೂ ಕೆಲಸ ಮಾಡಲಿಲ್ಲ. ಆಗ ಕೇಂದ್ರದಲ್ಲೂ ಬಿಜೆಪಿ ಅಧಿಕಾರದಲ್ಲಿತ್ತು. ಆ ಸಂದರ್ಭದಲ್ಲಿಯೂ ಅವರಿಂದ ಈ ಕೆಲಸ ಆಗಿಲ್ಲ. ಸುಖಾಸುಮ್ಮನೆ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳಸಾ-ಬಂಡೂರಿ ನಾಲಾ ತಿರುವು, ಮಹದಾಯಿ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ₹1100 ಕೋಟಿ ಮೀಸಲಿರಿಸಿ, ಟೆಂಡರ್ ಕರೆದು ಏಜೆನ್ಸಿ ಕೂಡ ಫಿಕ್ಸ್ ಮಾಡಿದೆ. ಕೇಂದ್ರದ ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕರೆ, ನಾಳೆಯೇ ಕೆಲಸ ಪ್ರಾರಂಭಿಸುತ್ತೇವೆ. ಆದರೆ, ಗೋವಾ, ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ, ಅರಣ್ಯ ಇಲಾಖೆ ಅನುಮತಿ ಕೊಡಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸಾಧ್ಯವಾಗುತ್ತಿಲ್ಲ. ಅವರು ಈ ಕಾರ್ಯಕ್ರಮಕ್ಕೆ ಬಂದಿದ್ದರೆ ಈ ಬಗ್ಗೆ ಕೇಳುತ್ತಿದ್ದೆ. ಅವರು ರಾಜ್ಯ ಸರ್ಕಾರದ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ ಎಂದರು.

ಮನರೇಗಾ ಮರು ಜಾರಿಗೆ ಹೋರಾಟ: ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಮನರೇಗಾ ಯೋಜನೆ ಜಾರಿಗೆ ತಂದಿದ್ದರು. ಈಗ ಈ ಯೋಜನೆಯನ್ನು ರದ್ದು ಮಾಡಿ ವಿಬಿ-ಜಿ ರಾಮ್‌ ಜಿ ಕಾಯ್ದೆ ಮಾಡಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಜನರು ನಿರುದ್ಯೋಗಿಗಳಾಗಲಿದ್ದಾರೆ. ಅಲ್ಲದೇ, ಈ ಯೋಜನೆಗೆ ಮೊದಲು ಕೇಂದ್ರದಿಂದ ಶೇ. 90ರಷ್ಟು ಪಾವತಿಯಾಗುತ್ತಿತ್ತು. ಆದರೀಗ ಅದನ್ನು ಶೇ. 60ಕ್ಕೆ ಇಳಿಸಿ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆ ಹಾಕುತ್ತಿದೆ ಎಂದು ದೂರಿದರು.

ವಿಬಿ-ಜಿ ರಾಮ್‌ ಜಿ ಹೆಸರಲ್ಲಿ ರಾಮಾಯಣ ರಾಮ, ದಶರಥ ರಾಮ, ಕೌಶಲ್ಯ ರಾಮನೂ ಇಲ್ಲ. ಆದರೆ, ಬಿಜೆಪಿಗರು ಧರ್ಮದ ಅರ್ಥ ಕಲ್ಪಿಸುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ಆದರೆ ನಾವು ಮನುಷ್ಯ ಧರ್ಮ ನಂಬಿದವರು. ಹೀಗಾಗಿ ವಿಬಿ-ಜಿ ರಾಮ್‌ ಜಿ ವಿರುದ್ಧ ಹೋರಾಟ ಗಟ್ಟಿಗೊಳಿಸಿ ಮನರೇಗಾ ಮರುಸ್ಥಾಪನೆ ಒತ್ತಾಯಿಸಲಾಗುವುದು. ಈ ನಿಟ್ಟಿನಲ್ಲಿ ಜನರು ಸಹಕಾರ ನೀಡಬೇಕು ಎಂದರು.ನಾವು ನಂಬಿಕೆ ಇಟ್ಟಿಕೊಂಡಿದ್ದು ಮನುಷ್ಯ ಧರ್ಮ, ಮಾನವೀಯತೆ ಧರ್ಮ. ಬಸವಣ್ಣನವರು ಇವನಾರವ ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯ ಎಂದು ಹೇಳಿದ್ದಾರೆ. ಆದರೆ ಬಿಜೆಪಿಯವರು ಇವನಾರವ ಇವನಾರವ ಎಂದಷ್ಟೇ ಎನ್ನುತ್ತಾರೆ. ಇವ ನಮ್ಮವ, ಇವ ನಮ್ಮವ ಎನ್ನುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರದ ಸೌಲಭ್ಯ ಪಡೆದು ಮೇದಾರ ಸಮಾಜ ಸದೃಢಗೊಳ್ಳಲಿ-ಸ್ವಾಮೀಜಿ
ಬುದ್ಧಿ, ಮನಸ್ಸು ಸಕಾರಾತ್ಮಕ ಚಿಂತನೆಗಳ ಒಳಗೊಂಡಿರಬೇಕು-ಸಂಸದ ಬೊಮ್ಮಾಯಿ