ಕೇಂದ್ರದ ಬಜೆಟ್‌ಲ್ಲಿ ರಾಜ್ಯಕ್ಕೆ ಮಲತಾಯಿ ಧೋರಣೆ ತೋರಿಲ್ಲ-ಸಂಸದ ಬೊಮ್ಮಾಯಿ

KannadaprabhaNewsNetwork |  
Published : Jul 28, 2024, 02:07 AM IST
ಪೋಟೋ ಇದೆ. | Kannada Prabha

ಸಾರಾಂಶ

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಿಲ್ಲ. ಕಾಂಗ್ರೆಸಿಗರು ಮೊದಲು ಬಜೆಟ್ ಪೂರ್ಣ ಪಾಠ ಓದಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಿಲ್ಲ. ಕಾಂಗ್ರೆಸಿಗರು ಮೊದಲು ಬಜೆಟ್ ಪೂರ್ಣ ಪಾಠ ಓದಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದ ಬಜೆಟ್‌ನಲ್ಲಿ ಯಾವ ಇಲಾಖೆಗೆ ಎಷ್ಟು ದುಡ್ಡು ಬಂದಿದೆ ಎಂದು ಕಾಂಗ್ರೆಸ್ಸಿನವರು ಮೊದಲು ಪೂರ್ಣ ಬಜೆಟ್ ಓದಲಿ. ಅದೇ ಅಕೌಂಟ್‌ಗೆ ಹಿಂದೆ ಯುಪಿಎ ಸರ್ಕಾರ ಇದ್ದಾಗ ಎಷ್ಟು ಹಣ ಬಂದಿತ್ತು ಎಂಬುದನ್ನೂ ನೋಡಲಿ. ರಾಜ್ಯಕ್ಕೆ ಕೇಂದ್ರದಿಂದ ಅನುದಾನವೇ ಬಂದಿಲ್ಲ ಎಂದು ಕಾಂಗ್ರೆಸ್ಸಿನವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಎಂದರು ಕಿಡಿಕಾರಿದರು.

ಕೇಂದ್ರದಿಂದ ವಿವಿಧ ಯೋಜನೆಗಳಿಗೆ ಕರ್ನಾಟಕಕ್ಕೆ ₹ 44,870 ಕೋಟಿ ಕೊಟ್ಟಿದ್ದಾರೆ. ಉದಾಹರಣೆಗೆ ಕಳೆದ ಮೂರು ವರ್ಷಗಳಿಂದ ರಾಜ್ಯದ ರೈಲ್ವೆ ಯೋಜನೆಗೆ ಪ್ರತಿ ವರ್ಷ ಸುಮಾರು ₹ 7000 ಕೋಟಿ ಬರುತ್ತಿದೆ. ಯುಪಿಎ ಅವಧಿಯಲ್ಲಿ ಕೇವಲ ವಾರ್ಷಿಕ ₹ 700 ಬರುತ್ತಿತ್ತು. ಅಲ್ಲದೇ ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಹಾಗೂ ಭೂಸ್ವಾಧೀನ ಮಾಡಿ ಕೊಡದಿರುವುದಕ್ಕೆ ಯೋಜನೆಗಳು ವಿಳಂಬವಾಗುತ್ತಿವೆ. ಈ ಬಗ್ಗೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ ರಾಜ್ಯದ ಸಂಸದರ ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಅವರು ರಾಜ್ಯದ ಪಾಲಿನ ಹಣ ಹಾಗೂ ಭೂಸ್ವಾಧೀನ ಮಾಡಿಕೊಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸೋಮವಾರ ಎಲ್ಲ ಮಾಹಿತಿ ಬಿಡುಗಡೆ ಮಾಡುವೆ ಎಂದರು ಬೊಮ್ಮಾಯಿ.

ಭದ್ರಾ ಮೇಲ್ದಂಡೆ ಯೋಜನೆಗೆ ₹ 5000 ಕೋಟಿ ಕೊಡಬೇಕಿದೆ. ಕೇಂದ್ರ ಸಚಿವರನ್ನು ಭೇಟಿ ಮಾಡಿ ಅದನ್ನು ಕೇಳಿದ್ದೇವೆ. ಅವರು ಹಣಕಾಸು ಇಲಾಖೆ ಅನುಮತಿ ಪಡೆದು ನೀಡುವುದಾಗಿ ತಿಳಿಸಿದ್ದಾರೆ. ಪ್ರಯತ್ನ ಮಾಡಿದರೆ ಕೇಂದ್ರದಿಂದ ಹಣ ಬರುತ್ತದೆ. ಆದರೆ, ಕಾಂಗ್ರೆಸ್ಸಿನವರು ಅಪಾದನೆ ಮಾಡಿಕೊಂಡು ಕೂತಿದ್ದಾರೆ ಎಂದರು.ಬಿಜೆಪಿಯವರು ಮನೆ ಮುರುಕರು ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಅವರು, ಒಂದೂವರೆ ವರ್ಷದಲ್ಲಿ ಮನೆ ಮುರುಕರು ಯಾರು? ಎಂದು ಜನಕ್ಕೆ ಗೊತ್ತಾಗಿದೆ. ಮನೆ‌ಮುರುಕರು ಯಾರು ಅಂತ ಜನ ತೀರ್ಮಾನ ಮಾಡುತ್ತಾರೆ. ಜನ ಸರ್ಟಿಫಿಕೆಟ್ ಕೊಡುತ್ತಾರೆ ಎಂದು ಹೇಳಿದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ