ಕೇಂದ್ರದ ಆಯವ್ಯಯ ಆರ್ಥಿಕ ಸುಭದ್ರತೆ ಒದಗಿಸಿದೆ: ಡಾ. ಮಂಜುನಾಥ್‌

KannadaprabhaNewsNetwork |  
Published : Feb 09, 2026, 01:15 AM IST
8ಕೆಆರ್ ಎಂಎನ್ 1.ಜೆಪಿಜಿರಾಮನಗರದ ಬಿಜೆಪಿ ಕಚೇರಿಯಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಪ್ರಪಂಚದ ಬೇರೆ ದೇಶಗಳ ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರದ ಆಯವ್ಯಯ ಆರ್ಥಿಕ ಸುಭದ್ರತೆ ಒದಗಿಸಿದ್ದು, ಇದು ದೂರದೃಷ್ಟಿ ಮಾತ್ರವಲ್ಲದೆ ಯುವಶಕ್ತಿ ಮತ್ತು ಪ್ರಗತಿಯ ಬಜೆಟ್ ಆಗಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು

ರಾಮನಗರ: ಪ್ರಪಂಚದ ಬೇರೆ ದೇಶಗಳ ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರದ ಆಯವ್ಯಯ ಆರ್ಥಿಕ ಸುಭದ್ರತೆ ಒದಗಿಸಿದ್ದು, ಇದು ದೂರದೃಷ್ಟಿ ಮಾತ್ರವಲ್ಲದೆ ಯುವಶಕ್ತಿ ಮತ್ತು ಪ್ರಗತಿಯ ಬಜೆಟ್ ಆಗಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಬಜೆಟ್ ನಲ್ಲಿ ಸ್ವಾವಲಂಬನೆಯನ್ನು ಗುರಿಯಾಗಿಟ್ಟುಕೊಂಡು, ಉದ್ಯೋಗ ಸೃಷ್ಟಿ, ಕೃಷಿ ಉತ್ಪಾದಕತೆ ಮತ್ತು ನಾಗರಿಕರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಒತ್ತು ಕೊಡಲಾಗಿದೆ. ವಿಶ್ವದ ಯಾವುದೇ ದೇಶ ಆರ್ಥಿಕ ಪ್ರಗತಿಯನ್ನು ತೋರಿಸುತ್ತಿಲ್ಲ. ಆದರೆ, ಭಾರತ ಮಾತ್ರ ಆರ್ಥಿಕ ಪ್ರಗತಿಯತ್ತ ಸಾಗುತ್ತಿದೆ. ಇಲ್ಲಿನ ಜಿಡಿಪಿ ಹೆಚ್ಚಳವಾಗುತ್ತಿದ್ದರೆ, ಹಣದುಬ್ಬರ ಕಡಿಮೆಯಾಗುತ್ತಿದೆ. 2027ನೇ ಸಾಲಿನಲ್ಲಿ ಭಾರತ ವಿಶ್ವದ ಮೂರನೇ ಆರ್ಥಿಕ ಶಕ್ತಿಯುತ ದೇಶವಾಗಿ ಹೊರ ಹುಮ್ಮುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.

ಅಸ್ಥಿರ ಜಾಗತಿಕ ಪರಿಸ್ಥಿತಿಯಲ್ಲಿಯೂ ಕೇಂದ್ರ ಸರ್ಕಾರವು ಸುಮಾರು ಶೇ.7ರಷ್ಟು ಆರ್ಥಿಕ ಬೆಳವಣಿಗೆಯನ್ನು ಸಾಧಿಸಿದೆ. 2026-27ರ ವೇಳೆಗೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.4.3ಕ್ಕೆ ಇಳಿಸಲಾಗಿದೆ. ಇದು ಕಳೆದ ವರ್ಷದ ಶೇ.4.5ಕ್ಕಿಂತ ಕಡಿಮೆಯಾಗಿದೆ. ಇನ್ನು ಸಾಲ ಮತ್ತು ಜಿಡಿಪಿ ಅನುಪಾತವನ್ನು ಶೇ.55.6ಕ್ಕೆ ಇಳಿಸಲಾಗಿದ್ದು, 2030-31ರ ವೇಳೆಗೆ ಇದನ್ನು ಶೇ.50ಕ್ಕೆ ತರುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

16ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಗಳಿಗೆ ಶೇ.41ರಷ್ಟು ತೆರಿಗೆ ಪಾಲು ಮತ್ತು 1.4 ಲಕ್ಷ ಕೋಟಿ ಅನುದಾನ ನೀಡಲಾಗುತ್ತಿದೆ. ಇದರ ಪ್ರಕಾರ ಕರ್ನಾಟಕ ರಾಜ್ಯಕ್ಕೆ ಹೆಚ್ಚುವರಿಯಾಗಿ 7380 ಕೋಟಿ ಅನುದಾನ ಹರಿದು ಬರಲಿದೆ. ಯುಪಿಎ ಸರ್ಕಾರದಲ್ಲಿ 85 ಸಾವಿರ ಕೋಟಿ ಬಂದಿದ್ದರೆ, ಎನ್ ಡಿಎ ಸರ್ಕಾರದಲ್ಲಿ 6 ಲಕ್ಷ ಕೋಟಿ ಬಂದಿದೆ ಎಂದು ಹೇಳಿದರು.

ತೆರಿಗೆದಾರರ ಮೇಲಿನ ನಂಬಿಕೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ 12 ಲಕ್ಷದವರೆಗೆ ಶೂನ್ಯ ಆದಾಯ ತೆರಿಗೆ ಸೌಲಭ್ಯ ಮುಂದುವರೆಸಲಾಗಿದೆ. ಕ್ಯಾನ್ಸರ್ ಸೇರಿದಂತೆ 17 ಔಷಧಗಳ ಮೇಲಿನ ಕಸ್ಟಮ್ಸ್ ಸುಂಕ ರದ್ದುಗೊಳಿಸಲಾಗಿದೆ. ಅಲ್ಲದೆ 7 ಅಪರೂಪದ ಕಾಯಿಲೆಗಳ ಮೇಲಿನ ಆಮದು ಸುಂಕಕ್ಕೂ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದರು.

ದೇಶವನ್ನು ಜಾಗತಿಕ ಬಯೋಫಾರ್ಮಾ ಹಬ್ ಮಾಡಲು ಮುಂದಿನ 5 ವರ್ಷಗಳಿಗಾಗಿ 10 ಸಾವಿರ ಕೋಟಿ ಮೀಸಲಿಡಲಾಗಿದೆ. ಪ್ರಮುಖ ನಗರಗಳ ನಡುವೆ ವೇಗದ ಸಂಪರ್ಕಕ್ಕಾಗಿ ಹೈದರಾಬಾದ್ - ಬೆಂಗಳೂರು, ಚೆನ್ನೈ - ಬೆಂಗಳೂರು ಮಾರ್ಗ ಸೇರಿದಂತೆ 7 ಹೊಸ ಹೈಸ್ಪೀಡ್ ರೈಲು ಕಾರಿಡಾರ್ ಗಳನ್ನು ಘೋಷಿಸಲಾಗಿದೆ ಎಂದು ಹೇಳಿದರು.

ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ 500 ಕೋಟಿ ವೆಚ್ಚದಲ್ಲಿ 100 ಹಾಸಿಗೆ ಸಾಮರ್ಥ್ಯದ ಪಾಲಿ ಟ್ರಾಮಾ ಸೆಂಟರ್ ಮಂಜೂರಾಗಿದೆ. 5 ಸಾವಿರ ಹೊರ ರೋಗಿಗಳಿಗೆ ಚಿಕಿತ್ಸೆ ನೀಡುವ ಓಪಿಡಿ ಬ್ಲಾಕ್ ಗೆ 430 ಕೋಟಿ ಸೇರಿ ಒಟ್ಟು 930 ಕೋಟಿ ಮಂಜೂರಾಗಿದೆ. ಅಲ್ಲದೆ, ಜಾರ್ಖಂಡ್ ರಾಜ್ಯದ ರಾಂಚಿ ಹಾಗೂ ಅಸ್ಸಾಂ ರಾಜ್ಯದ ತೇಜ್ ಪುರ್ ಗೆ ನಿಮ್ಹಾನ್ಸ್ ಆಸ್ಪತ್ರೆ ಘೋಷಣೆಯಾಗಿದೆ. ಇನ್ನು ಪ್ರತಿಯೊಂದು ಜಿಲ್ಲಾಸ್ಪತ್ರೆಗಳಲ್ಲಿ ಟ್ರಾಮಾ ಸೆಂಟರ್ ಮತ್ತು ಎಮರ್ಜೆನ್ಸಿ ಕೇರ್ ತೆರೆಯಲು ಬಜೆಟ್ ನಲ್ಲಿ ಘೋಷಣೆಯಾಗಿದೆ ಎಂದು ಮಂಜುನಾಥ್ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಮೋಹನ್ ವಿಶ್ವ, ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ಎಸ್. ಆರ್. ನಾಗರಾಜು, ರುದ್ರದೇವರು, ಶ್ರೀನಿವಾಸ್, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಮುಖಂಡರಾದ ಡಾ.ಭರತ್ ಕೆಂಪಣ್ಣ, ಸುಗ್ಗನಹಳ್ಳಿ ರಾಮಕೃಷ್ಣಯ್ಯ ಮತ್ತಿತರರು ಇದ್ದರು.

ಕೋಟ್ .................

ಕ್ಯಾನ್ಸರ್ ರೋಗಿಗಳಿಗೆ ಅಗತ್ಯ ಔಷಧಿ ಹಾಗೂ ಚಿಕಿತ್ಸಾ ಉಪಕರಣಗಳ ಮೇಲಿನ ಕಸ್ಟಮ್ಸ್ ಡ್ಯೂಟಿ ಕಡಿತಗೊಳಿಸುವ ಕುರಿತು, ತಾವು ಪಾರ್ಲಿಮೆಂಟ್‌ನಲ್ಲಿ ವಿಷಯ ಪ್ರಸ್ತಾಪಿಸಿದ್ದೆ. ಅಲ್ಲದೆ, ಹಣಕಾಸು ಸಚಿವರನ್ನು ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಿದ್ದೆ. ನನ್ನ ಮನವಿಗೆ ಸ್ಪಂದಿಸಿ ಇಡೀ ದೇಶಕ್ಕೆ ಅನ್ವಯವಾಗುವಂತೆ ಕಸ್ಟಮ್ಸ್ ಡ್ಯೂಟಿಯನ್ನು ರದ್ದುಗೊಳಿಸಿದ್ದಾರೆ.

- ಡಾ.ಸಿ.ಎನ್.ಮಂಜುನಾಥ್, ಸಂಸದರು

ಬಾಕ್ಸ್ ....................

ರಾಜ್ಯ ಸರ್ಕಾರ ಮೆಟ್ರೋ ದರ

ಏರಿಸದಂತೆ ಬಿಎಂಆರ್‌ಸಿಎಲ್‌ಗೆ ಪತ್ರ ಬರೆಯಲಿ

ರಾಮನಗರ:

ನಮ್ಮ ಮೆಟ್ರೋದ ವಾರ್ಷಿಕ ದರ ಶೇ. 5ರಷ್ಟು ಹೆಚ್ಚಳ ಮಾಡಬೇಕೆಂಬ ನಿಯಮವೇ ಇದೆ. ರಾಜ್ಯ ಸರ್ಕಾರ ದರ ಹೆಚ್ಚಳ ನಿರಾಕರಿಸಿ ಬಿಎಂಆರ್ ಸಿಎಲ್ ಗೆ ಪತ್ರ ಬರೆದಲ್ಲಿ ದರ ಏರಿಕೆ ಆಗುವುದೇ ಇಲ್ಲ ಎಂದು ಸಂಸದ ಡಾ.ಮಂಜುನಾಥ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಟ್ರೋ ಎಕ್ಸಿಕ್ಯುಷನ್‌ ವರೆಗೆ ಮಾತ್ರ ಕೇಂದ್ರ ಸರ್ಕಾರದ ಜವಾಬ್ದಾರಿ. ಎಕ್ಸಿಕ್ಯುಷನ್ ಆಗಿ ರನ್ನಿಂಗ್ ಆದ ಮೇಲೆ ಅದರ ನಿರ್ವಹಣೆ ಮತ್ತು ಆಡಳಿತ ಎಲ್ಲವೂ

ರಾಜ್ಯ ಸರ್ಕಾರದ ಅಧೀನಕ್ಕೆ ಬರುತ್ತದೆ. ನಿಯಮದ ಪ್ರಕಾರ ಶೇಕಡ 5ರಷ್ಟು ದರ ಏರಿಕೆ ಮಾಡದಂತೆ ರಾಜ್ಯ ಸರ್ಕಾರ ಪತ್ರ ಬರೆದಲ್ಲಿ ದರ ಹೆಚ್ಚಳ ಆಗುವುದಿಲ್ಲ ಎಂದರು.

ಕಳೆದ ವರ್ಷವೇ ಶೇಕಡ 7ರಷ್ಟು ದರ ಹೆಚ್ಚಳವಾಗಿದ್ದು, ಇದೀಗ ಮತ್ತೆ ದರ ಏರಿಕೆಯಾದರೆ ಪ್ರಯಾಣಿಕರ ಮೇಲೆ ಆರ್ಥಿಕ ಹೊರೆ ಬೀಳುತ್ತದೆ. ರಾಜ್ಯ ಸರ್ಕಾರವು ಬಿಎಂಆರ್ ಸಿಎಲ್ ಗೆ ಪತ್ರ ಬರೆದರೆ ದರ ಏರಿಕೆಗೆ ಬ್ರೇಕ್ ಬೀಳಲಿದೆ ಎಂದು ಮಂಜುನಾಥ್ ಹೇಳಿದರು.

8ಕೆಆರ್ ಎಂಎನ್ 1.ಜೆಪಿಜಿ

ರಾಮನಗರದಲ್ಲಿ ಸಂಸದ ಡಾ. ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’