ಕನ್ನಡಪ್ರಭ ವಾರ್ತೆ ಹಿರಿಯೂರು
ಪ್ರತಿಭಟನೆ ನಂತರ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿ ಕರವೇ ತಾಲೂಕು ಗೌರವಾಧ್ಯಕ್ಷ ಗೋ ಬಸವರಾಜ್ ಮಾತನಾಡಿ, ಕೆಆರ್ ಹಳ್ಳಿ ಗೇಟ್ ಬಳಿ ಇರುವ ಶಾಯಿ ಗಾರ್ಮೆಂಟ್ಸ್ ಹಾಗೂ ಎಎಂಡಿ ಗಾರ್ಮೆoಟ್ಸ್ ನಲ್ಲಿ ಸರಿಸುಮಾರು 2000 ದಿಂದ 3000 ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತಮ್ಮದೆ ಆದ ಕೌಟುಂಬಿಕ ತೊಂದರೆಗಳು ಇರುತ್ತವೆ. ಆದರೆ ಪಿಎಫ್ ಹಣವನ್ನು ಮೂರು ವರ್ಷದವರೆಗೂ ತೆಗೆದುಕೊಳ್ಳುವoತಿಲ್ಲ ಎಂಬ ಕೇಂದ್ರ ಸರ್ಕಾರದ ಕಾನೂನು ಕಾರ್ಮಿಕ ವಿರೋಧಿ ಕಾನೂನಾಗಿದೆ. ನಮ್ಮ ಹಣ ಪಡೆಯಲು ಇವರಿಗೇನು ತೊಂದರೆ ಎಂಬುದೇ ಅರ್ಥವಾಗುತ್ತಿಲ್ಲ. ಇವತ್ತಿನ ದಿನ ಮನುಷ್ಯನ ಆಯಸ್ಸನ್ನು ಇಂತಿಷ್ಟು ಎಂದು ಹೇಳುವಂತಿಲ್ಲ. ಇಂತಹ ಕಾಲದಲ್ಲಿ 3 ವರ್ಷದವರೆಗೂ ನಮ್ಮ ಹಣ ತೆಗೆದುಕೊಳ್ಳಲು ಅವಕಾಶವಿಲ್ಲ ಎಂದಾದರೆ ನಮ್ಮ ಹಣವನ್ನು ಕೇಂದ್ರ ಸರ್ಕಾರ ಏಕೆ ಹಿಡಿದುಕೊಳ್ಳಬೇಕು? ಕೇಂದ್ರ ಸರ್ಕಾರ ಈ ಕೂಡಲೇ ಪಿಎಫ್ ನ ಹೊಸ ಕಾಯ್ದೆಯನ್ನು ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಜಿಪಂ ಮಾಜಿ ಸದಸ್ಯ ಸಿಬಿ ಪಾಪಣ್ಣ ಮಾತನಾಡಿ ನಾನು ಈ ಭಾಗದಲ್ಲಿ ಜಿಪಂ ಸದಸ್ಯನಾಗಿ ಆಯ್ಕೆಯಾದಾಗ ಉದ್ಯೋಗ ಸೃಷ್ಟಿಯ ಕನಸಿಟ್ಟುಕೊಂಡು ಗಾರ್ಮೆಂಟ್ ಪ್ರಾರಂಭಕ್ಕೆ ಸಹಕಾರ ನೀಡಿದೆವು. ಆದರೆ ಸಾವಿರಾರು ಮಹಿಳೆಯರು ದುಡಿದ ಹಣವನ್ನು ಸಕಾಲಕ್ಕೆ ಪಡೆಯಲಾಗದಂತಹ ಕಾನೂನು ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸುತ್ತೇನೆ. ಉದ್ಯೋಗ ಸೃಷ್ಟಿಯ ಸುಳ್ಳು ಹೇಳಿಕೊಂಡು ಬಂದ ಪ್ರಧಾನಿ ನರೇಂದ್ರ ಮೋದಿಯವರು ಉದ್ಯೋಗ ಸೃಷ್ಟಿಸುವುದು ಇರಲಿ. ಮಾಡಿದ ಉದ್ಯೋಗದ ಹಣವನ್ನೇ ಪಡೆಯಲಾಗದಂತಹ ನಿಯಮ ರೂಪಿಸಿದೆ. ಅನಾರೋಗ್ಯಕ್ಕೊಳಗಾದ ಕಾರ್ಮಿಕರಿಗೆ ತಕ್ಷಣವೆ ಅವರು ದುಡಿದ ಹಣ ಅವರಿಗೆ ಸಿಗಬೇಕು. ಮೊದಲಿನಂತೆ ಪಿಎಫ್ ಫಂಡ್ ನಿಯಮ ಮುಂದುವರೆಸಿಕೊಂಡು ಹೋಗಬೇಕು. ಕಾರ್ಮಿಕರ ಪರವಾದ ಆದೇಶ ಬರಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ರಾಮಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಡಿಕೆಎಸ್ ದಾದಾಪೀರ್, ನಗರಾಧ್ಯಕ್ಷ ಮಹಮ್ಮದ್ ಜಾಕೀರ್, ನಗರ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಸುಹೇಲ್, ಗಾರ್ಮೆಂಟ್ ಕಾರ್ಮಿಕರಾದ ಭಾಗ್ಯಮ್ಮ, ಮಹಾಲಕ್ಷ್ಮಿ, ಗೌತಮಿ, ಮಮತ, ಜ್ಯೋತಿ, ರೇಣುಕಾ, ಹನುಮಕ್ಕ, ಉಮಾ, ಕವಿತಾ, ಲಕ್ಷ್ಮೀದೇವಿ, ಕಾವ್ಯ, ಮಮತಾ, ಜಾನಕಿ, ಸಂಧ್ಯಾರಾಣಿ, ಉಷಾ, ರಾಧಾ, ಕುಸುಮ, ಸಂಗೀತ, ಲಕ್ಷ್ಮಿ, ವಿಜಯಲಕ್ಷ್ಮಿ, ಆಫ್ರಿದ್, ರಂಜಿತ, ರಾಜಣ್ಣಗೌಡ್ರು, ಗಿರೀಶ್ ಮುಂತಾದವರು ಹಾಜರಿದ್ದರು.