ಕನ್ನಡಪ್ರಭ ವಾರ್ತೆ ಕೋಲಾರಆದಿಮ ಕೇಂದ್ರ ಇಡೀ ಸಮಾಜಕ್ಕೆ ಕಲೆಯ ರಸದೌತಣ ಉಣಬಡಿಸುತ್ತಿದೆ. ಸಾಮರಸ್ಯದ ಅರ್ಥಪೂರ್ಣ ಸಂದೇಶ ಕೊಡುತ್ತಿದೆ. ಕಲೆಗೆ ಜಾತಿ ಇಲ್ಲ. ಕಲೆ ಹುಟ್ಟುತ್ತದೆ, ಕಟ್ಟಲು ಸಾಧ್ಯವಿಲ್ಲ. ನಿಷ್ಕಲ್ಮಶವಾದ ಸಮಾಜವನ್ನು, ಬಹುಜನರ ಹಿತವನ್ನು ಮನದಲ್ಲಿ ಇಟ್ಟುಕೊಂಡು ಸಮಾಜದ ಅನುಭವಗಳು ನಮ್ಮ ಅನುಭವಗಳಾಗಿ ಹುಟ್ಟುವುದೇ ನಿಜವಾದ ಸಾಹಿತ್ಯ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದರು.ಹಾಡು ಕುಣಿದಾಡು, ಗೆಜ್ಜೆ ಮಾತಾಡು ಎಂಬ ಘೋಷವಾಕ್ಯದೊಂದಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಾಗೂ ಆದಿಮ ಸಾಂಸ್ಕೃತಿಕ ಕೇಂದ್ರದಿಂದ ತೇರಹಳ್ಳಿ ಬೆಟ್ಟದ ಶಿವಗಂಗೆಯಲ್ಲಿ ನಡೆದ ೨೧೫ನೇ ಹುಣ್ಣಿಮೆ ಹಾಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೆಟ್ಟದ ಮೇಲೆ ಸಾಂಸ್ಕೃತಿಕ ಕೇಂದ್ರ
ಆದಿಮ ಕೇಂದ್ರವು ರಾಜ್ಯದಲ್ಲೇ ವಿಶಿಷ್ಟವಾದ ಛಾಪು ಮೂಡಿಸಿದೆ. ಬೆಟ್ಟದ ಮೇಲೊಂದು ಸಾಂಸ್ಕೃತಿಕ ಕೇಂದ್ರ ನಿರ್ಮಿಸಿ ಕೋಲಾರದ ಸೃಜನಶೀಲ ಸಾಹಿತಿಗಳು, ಕಲಾವಿದರು, ಕಲಾರಸಿಕರು ಹುಣ್ಣಿಮೆಯ ಸವಿ ಸವಿಯುವ ಅವಕಾಶ ಮಾಡಿಕೊಡುತ್ತಿದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಮಾತನಾಡಿ, ಎಲ್ಲಿ ಕಲೆಗೆ ನೆಲೆ ಇರುತ್ತದೆಯೋ ಅಲ್ಲಿ ಶಾಂತಿ, ಸುಖ, ನೆಮ್ಮದಿ ಇರಲು ಸಾಧ್ಯ. ಕಲೆ ಹಾಗೂ ಕಲಾವಿದರನ್ನು ನಾವು ಯಾವತ್ತೂ ಕೈಬಿಡಬಾರದು. ಪ್ರೋತ್ಸಾಹಿಸಿ ಉತ್ತೇಜನ ನೀಡಬೇಕು ಎಂದರು.ಜಿಲ್ಲಾವಾರು ಕಾರ್ಯಕ್ರಮಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಶುಭಾ ಧನಂಜಯ್ ಮಾತನಾಡಿ, ‘ಸಂಗೀತ, ನೃತ್ಯ ಕಲಾವಿದರನ್ನು ಗುರುತಿಸಿ ಉತ್ತೇಜನ ನೀಡುವ ಉದ್ದೇಶದಿಂದ ಜಿಲ್ಲಾವಾರು ಕಾರ್ಯಕ್ರಮಗಳನ್ನು ರೂಪಿಸುವ ಯೋಜನೆ ಇದೆ. ಯುವ ಕಲಾವಿದರಿಗೆ ಶಿಷ್ಯವೇತನ, ಹಿರಿಯ ಕಲಾವಿದರಿಗೆ ಮಾಸಾಶನ ನೀಡಲು ಶಿಪಾರಸ್ಸು ಮಾಡಲಾಗುತ್ತಿದೆ ಎಂದು ಹೇಳಿದರು.ವಿದ್ವಾನ್ ಕೊಳ್ಳೇಗಾಲ ಗೋಪಾಲಕೃಷ್ಣ ಹಾಗೂ ಸುಣ್ಣಕಲ್ ವೆಂಕಟರಾಮಪ್ಪ ಅವರನ್ನು ಸನ್ಮಾನಿಸಲಾಯಿತು. ಆದಿಮ ಅಧ್ಯಕ್ಷ ಎನ್.ಮುನಿಸ್ವಾಮಿ, ಉಪ ವಿಭಾಗಾಧಿಕಾರಿ ಡಾ.ಮೈತ್ರಿ, ತಹಸೀಲ್ದಾರ್ ನಯನಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್. ಗೀತಾ ಇದ್ದರು.