ಕೇಂದ್ರದಿಂದ ಕೃಷಿ ಕ್ಷೇತ್ರದ ಪ್ರಗತಿಗೆ ಆದ್ಯತೆ

KannadaprabhaNewsNetwork |  
Published : Jul 19, 2025, 01:00 AM IST
ಫೋಟೋ 18 ಟಿಟಿಎಚ್ 01: ತೀರ್ಥಹಳ್ಳಿಯ ಪ್ರವಾಸಿಮಂದಿರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿ ನಡೆಸಿದರು. ಶಾಸಕ ಆರಗ ಜ್ಞಾನೇಂದ್ರ ಇತರರಿದ್ದರು. | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದು, 2025-26 ನೇ ಸಾಲಿಗೆ 1.27 ಲಕ್ಷ ಕೋಟಿ ರು. ಮೊತ್ತವನ್ನು ಕಾಯ್ದಿರಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ತೀರ್ಥಹಳ್ಳಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದು, 2025-26 ನೇ ಸಾಲಿಗೆ 1.27 ಲಕ್ಷ ಕೋಟಿ ರು. ಮೊತ್ತವನ್ನು ಕಾಯ್ದಿರಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಮೊತ್ತ ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಮುಂಗಡ ಪತ್ರದ ಶೇ.6 ರಷ್ಟುಗಿದ್ದು, ಈವರೆಗೆ ಯಾವುದೇ ಸರ್ಕಾರ ಇಷ್ಟು ದೊಡ್ಡ ಮೊತ್ತವನ್ನು ನೀಡಿದ ಉದಾಹರಣೆ ಇಲ್ಲ. 2013-14ರಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಕೃಷಿಗೆ ಕೇವಲ 22 ಸಾವಿರ ಕೋಟಿ ರು. ಅನುದಾನವನ್ನು ನೀಡಿತ್ತು. ಆದರೆ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 1.27 ಲಕ್ಷ ಕೋಟಿ ರುಗಳ ಅನುದಾನವನ್ನು ಕಾಯ್ದಿರಿಸುವ ಮೂಲಕ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದೆ ಎಂದು ತಿಳಿಸಿದರು.

ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಆಹಾರ ಧಾನ್ಯ ಉತ್ಪಾದನೆಯೂ ಹೆಚ್ಚಳವಾಗಿರುವುದು ಗಮನಾರ್ಹವಾಗಿದ್ದು, 265 ಮಿಲಿಯನ್‌ ಟನ್‌ನಿಂದ 350 ಟನ್ನಿಗೆ ಏರಿಕೆಯಾಗಿದೆ. ಸರ್ಕಾರ ಕೃಷಿಕರಿಗೆ ನೀಡುತ್ತಿರುವ ಸಬ್ಸಿಡಿ ಅನುದಾನ 1.4 ಲಕ್ಷ ಕೋಟಿಯಿಂದ 3.50 ಲಕ್ಷ ಕೋಟಿಗೆ ಏರಿಕೆಯಾಗಿದ್ದು, ಕಳೆದ ಹತ್ತು ವರ್ಷಗಳಲ್ಲಿ ನೀಡಿರುವ ಸಬ್ಸಿಡಿ 36.94 ಕೋಟಿ ಆಗಿದೆ. ರೈತರ ಹಿತದೃಷ್ಟಿಯಿಂದ ಈ ಮೊದಲು ಇಷ್ಟು ದೊಡ್ಡ ಮೊತ್ತವನ್ನು ಯಾವ ಸರ್ಕಾರವೂ ನೀಡಿಲ್ಲಾ ಎಂದು ವಿವರಿಸಿದರು.ಈಚೆಗೆ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಧಾನಮಂತ್ರಿ ಧನಧಾನ್ಯ ಕೃಷಿ ಯೋಜನೆಯಡಿ ಕೃಷಿಯ ಅಭಿವೃದ್ಧಿಗೆ ಮುಂದಿನ ಆರು ವರ್ಷಗಳ ಅವಧಿಗೆ ವಿಶೇಷ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿ 100 ಜಿಲ್ಲೆಗಳ ವ್ಯಾಪ್ತಿಯಲ್ಲಿ ಆಹಾರ ಧಾನ್ಯ ಉತ್ಪಾದನೆಗೆ 1.44 ಸಾವಿರ ಕೋಟಿ ರು. ವೆಚ್ಚದಲ್ಲಿ ಕಾರ್ಯಕ್ರಮ ರೂಪಿಸಲಾಗಿದ್ದು, ಪ್ರತಿ ರಾಜ್ಯದಲ್ಲಿ ಒಂದು ಜಿಲ್ಲೆ ಇದರ ವ್ಯಾಪ್ತಿಗೆ ಬರಲಿದೆ ಎಂದು ಹೇಳಿದರು.

ಅಡಕೆ ಬೆಳೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಕೃಷಿ ಸಚಿವರು ಸಾಗರಕ್ಕೆ ಆಗಮಿಸಿದ ವೇಳೆ ನಮ್ಮ ಮನವಿಗೆ ಸ್ಪಂದಿಸಿದ್ದು, ಕಾರ್ಬನ್ ದೋಟಿ ಖರೀದಿಸಲು ದೊಡ್ಡ ಮೊತ್ತದ ಸಬ್ಸಿಡಿಯನ್ನು ನೀಡಿದ್ದಾರೆ. ಇದರ ಅನ್ವಯ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ.50% ಸಾಮಾನ್ಯ ವರ್ಗದವರಿಗೆ ಶೇ 32% ಸಬ್ಸಿಡಿ ದೊರೆಯಲಿದೆ. ಬೆಳೆ ವಿಮೆ ಮಾಡಿಸಿಕೊಳ್ಳಲು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅವಕಾಶವಿದ್ದು, ಜುಲೈ ಕೊನೆಯ ಒಳಗಾಗಿ ವಿಮೆ ಮಾಡಿಸಿಕೊಳ್ಳುವಂತೆಯೂ ಕರೆ ನೀಡಿದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಅಡಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ರೂಪವಾಗಿ ಕಾರ್ಬನ್ ದೋಟಿ ಖರೀದಿಸಲು ಸಬ್ಸಿಡಿ ಹಣವನ್ನು ಹೆಚ್ಚಿಸಿರುವುದು ಸಹಕಾರಿಯಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಸಂಸದ ಬಿ.ವೈ.ರಾಘವೇಂದ್ರರಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಜ್ಯ ಸರ್ಕಾರವೇ ಭ್ರಷ್ಟಾಚಾರಕ್ಕೆ ಇಳಿದಿದ್ದು, ರಾಜ್ಯದ ವ್ಯವಸ್ಥೆ ಈ ಮಟ್ಟಕ್ಕೆ ಬಂದಿದೆ. ಭ್ರಷ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವುದನ್ನು ಈ ಕ್ಷೇತ್ರದಲ್ಲಿ ವಿರೋಧಿಸಲಾಗುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.ಪತ್ರಿಕಾಗೋಷ್ಠಿಯಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಮುಖಂಡರಾದ ಆಶೋಕಮೂರ್ತಿ, ಪ್ರಶಾಂತ್ ಕುಕ್ಕೆ, ಸಾಲೇಕೊಪ್ಪ ರಾಮಚಂದ್ರ, ಸಂದೇಶ್ ಜವಳಿ ಮುಂತಾದವರು ಇದ್ದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು