ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕಲಾಮಂದಿರದಲ್ಲಿ ಶ್ರೀಹರ್ಷ ಸೇವಾ ಫೌಂಡೇಷನ್ ಆಶ್ರಯದಲ್ಲಿ ಕೆ.ಎಂ.ಹರ್ಷ ನಾಲ್ಕನೇ ವರ್ಷದ ಪುಣ್ಯ ಸಂಸ್ಮರಣಾರ್ಥ ಮಣ್ಣಿನ ಸಂರಕ್ಷಣೆ ನಮ್ಮೇಲ್ಲರ ಹೊಣೆ ಎಂಬ ಘೋಷವಾಕ್ಯದಡಿ ಮಂಡ್ಯ ಜಿಲ್ಲೆಯನ್ನು ಸಾವಯವ ಜಿಲ್ಲೆಯಾಗಿ ಪರಿವರ್ತಿಸುವ ಅಭಿಯಾನ ಮತ್ತು ನಮ್ಮ ಆಹಾರ ನಮ್ಮ ಆರೋಗ್ಯ ನಮ್ಮ ಜವಾಬ್ದಾರಿ ಕುರಿತು ಜಾಗೃತಿ ಕಾರ್ಯಾಗಾರಕ್ಕೆ ಸಗಣಿಗೆ ಜೀವಾಮೃತ ನೀಡುವ ಮೂಲಕ ಗಣ್ಯರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಅಧಿಕಾರಿಗಳಾಗಿ ನಾವು ರೈತರಿಗೆ ಇದು-ಅದು ಮಾಡಿ ಎನ್ನುವುದು ಸುಲಭ. ಬೋಧನೆಗಿಂತ ನಾವೇ ಸಾವಯವ ಕೃಷಿಯಲ್ಲಿ ಎಂತಹ ಸವಾಲುಗಳು ಎದುರಾಗುತ್ತವೆ ಎನ್ನುವುದನ್ನು ಕಂಡುಕೊಂಡೆವು. ೨೫ ವರ್ಷಗಳ ಹಿಂದೆ ಬ್ಯಾಂಕ್‌ನಲ್ಲಿ ೧೦ ಲಕ್ಷ ರು. ಸಾಲ ಪಡೆದು, ಎರೆಹುಳುಗೊಬ್ಬರ ತಯಾರಿಕೆ ಘಟಕ ಸ್ಥಾಪಿಸಿದೆವು, ನಾವು ಮಾಡಿದ್ದನ್ನು ಕಂಡು ಆಗ ಜನರು ನಗುತ್ತಿದ್ದರು. ಈಗ ಅದೇ ಜನರಿಗೆ ಎರೆಹುಳು ಗೊಬ್ಬರದ ಮಹತ್ವ ಗೊತ್ತಾಗಿದೆ ಎಂದರು.ಇಂದಿನ ರೈತರು ಮತ್ತು ಪ್ರಜ್ಞಾವಂತರು ಬ್ರೆಜಿಲ್ ಬಯೋರ್ಚಾ ಸಾವಯವ ಕೃಷಿಯ ಬಗ್ಗೆ ವಿಚಾರ ಮಾಡಬೇಕು. ಬಯೋರ್ಚಾ ವಿಧಾನ ೩ ಸಾವಿರ ವರ್ಷಗಳ ಹಿಂದಿನಿಂದ ನಿಂತಿದೆ, ಸಾವಯವ ಕೃಷಿಗೆ ಬಹಳ ಉಪಯುಕ್ತ, ನೀವೇ ಗೂಗಲ್‌ನಲ್ಲಿ ಅದರ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.
ಸಾವಯಕ ಕೃಷಿಯಲ್ಲಿ ಜೀವಾಮೃತ, ಎರೆಹುಳುಗೊಬ್ಬರ, ನಾಟಿ ದನಗಳ ಸಗಣಿ ಬಳಸುವುದು ಒಳ್ಳೆಯದು. ಇದರಿಂದ ಮಣ್ಣಿನಲ್ಲಿರುವ ಸಾರಯುಕ್ತ ಅಂಶಗಳು ಹೆಚ್ಚಾಗುತ್ತವೆ. ಜೀವಾಮೃತ ಮಣ್ಣಿನ ಫಲವತತ್ತೆಯನ್ನು ಹೆಚ್ಚಿಸುತ್ತದೆ. ರಾಸಾಯಿನಿಕ ಬಳಸಿದರೆ ಮಣ್ಣಿನಲ್ಲಿರುವ ಜೀವಾಮೃತ ಸಾಯುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಫೌಂಡೇಶನ್ ಅಧ್ಯಕ್ಷ ಮಹದೇವ ಕಾರಸವಾಡಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನಮಠದ ಪೀಠಾಧ್ಯಕ್ಷ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾಮಠ ಹಾಸನ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ, ಲಯನ್ಸ್ ಸಂಸ್ಥೆ ಜಿಲ್ಲಾ ಮಾಜಿ ರಾಜ್ಯಪಾಲ ಡಾ.ಕೃಷ್ಣೇಗೌಡ, ೨ನೇ ಉಪರಾಜ್ಯಪಾಲ ಸಿದ್ದೇಗೌಡ, ಪಿಎಸ್‌ಟಿ ಅಧ್ಯಕ್ಷ ಜಯಕುಮಾರ್, ರಾಮನಗರ ರೋಟರಿ ಸಂಸ್ಥೆ ಜಿಲ್ಲಾ ನಾಮಿನಿ ರಾಜ್ಯಪಾಲ ಆರ್.ಕುಮಾರಸ್ವಾಮಿ, ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ, ಧರ್ಮಸ್ಥಳ ಚೇತನ, ನವೋದಯ ಶಿಕ್ಷಣ ತಜ್ಞೆ ಕನ್ನಿಕಾ, ಪ್ರಾಧ್ಯಾಪಕ ಎಂ.ಆರ್.ಮಂಜುನಾಥ್ ಮುತ್ತೇಗೆರೆ, ಅನುಪಮಾ ಮತ್ತಿತರರಿದ್ದರು.ಐದು ವರ್ಷಗಳಲ್ಲಿ ಸಾವಯವ ಕೃಷಿ ಜಿಲ್ಲೆಯನ್ನಾಗಿ ಮಾಡಿ: ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ
ಜಿಲ್ಲೆಯ ರೈತರು ಸಾವಯವ ಕೃಷಿಯಲ್ಲಿ ಏಕಾಏಕಿ ದೊಡ್ಡ ಪ್ರಯತ್ನಗಳನ್ನು ಮಾಡುವುದು ಬೇಡ. ಸಣ್ಣ ಸಣ್ಣ ಪ್ರಯತ್ನಗಳಿಂದಲೇ ಮುಂದುವರೆಯಿರಿ. ಆ ಮೂಲಕ ಮುಂದಿನ ಐದು ವರ್ಷಗಳಲ್ಲಿ ಮಂಡ್ಯ ಜಿಲ್ಲೆಯನ್ನು ಸಾವಯವ ಕೃಷಿ ಜಿಲ್ಲೆಯಾಗಿ ಹೊರಹೊಮ್ಮುವಂತೆ ಮಾಡಬೇಕು. ನಮ್ಮ ಜಿಲ್ಲೆಯನ್ನು ಸಾವಯವ ಜಿಲ್ಲೆಯಾಗಿಸಿ ಇಡೀ ದೇಶಕ್ಕೆ ಮಾದರಿಯಾಗಿ ತೋರಿಸಬೇಕು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.
ನಾವೆಲ್ಲರೂ ಸೇರಿ ಸಾವಯವ ಕೃಷಿಯನ್ನು, ಜಿಲ್ಲೆಯ ಪ್ರತಿಯೊಬ್ಬ ರೈತರ ಜಮೀನಿನಲ್ಲಿ ಅಳವಡಿಸಬೇಕು. ಮಣ್ಣಿನ ಸಂರಕ್ಷಣೆಗೆ ಅಗತ್ಯವಿರುವ ಉಪಕ್ರಮಗಳನ್ನು ಅನುಸರಿಸಬೇಕು. ಸಗಣಿ ಮಹತ್ವವನ್ನು ಅರಿತು ಗೊಬ್ಬರವನ್ನು ತಯಾರಿಸುವುದನ್ನು ಅರಿಯಬೇಕು. ಗೋವುಗಳು, ಜಾನುವಾರುಗಳನ್ನು ಹೆಚ್ಚು ಹೆಚ್ಚು ಸಾಕಣೆ ಮಾಡಲು ಪ್ರಾಮುಖ್ಯತೆ ನೀಡಬೇಕು. ಇದರಿಂದ ಗೊಬ್ಬರವೂ ಸಿಗುತ್ತದೆ. ಹಾಲೂ ಸಿಗುತ್ತದೆ. ಸಾವಯವ ಕೃಷಿ ಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ರಾಜ್ಯ ಸರ್ಕಾರ ಮಣ್ಣು, ಬೆಳೆ, ಕ್ರಿಮಿಕೀಟ, ಬರಗಾಲ, ಮಣ್ಣಿನ ಸಂರಕ್ಷಣೆ ಅವಶ್ಯಕತೆ ಸಾವಯವ ಕೃಷಿಗೆ ಒತ್ತು ಪ್ರತ್ಯೇಕ ಕೃಷಿ ಆಯವ್ಯಯ ಮಂಡಿಸಲು ಮುಂದಿನ ವರ್ಷದ ಬಜೆಟ್‌ನಲ್ಲಿ ನಿರ್ಧರಿಸಿದೆ. ಸಾವಯವ ಕೃಷಿ ಮಾಡುವವರಿಗೆ ಪ್ರೋತ್ಸಾಹ ನೀಡಬೇಕು. ಮಣ್ಣು ಸತ್ತರೆ ಆಹಾರ ಬೆಳೆಯಲಾಗದು. ಅದಕ್ಕಾಗಿ ಮಣ್ಣಿಗೆ ಜೀವ ತುಂಬುವ ಕೆಲಸಕ್ಕೆ ಎಲ್ಲರೂ ಕಂಕಣ ತೊಡುವಂತೆ ತಿಳಿಸಿದರು.