ಕನ್ನಡಪ್ರಭ ವಾರ್ತೆ ಬೇಲೂರು
ಮಂಗಳವಾರ ಬೆಳಗ್ಗೆ 11.05ರ ಮಿಥುನ ಲಗ್ನದಲ್ಲಿ ಆರಂಭಗೊಂಡ ಶ್ರೀ ಚನ್ನಕೇಶವ ಸ್ವಾಮಿಯವರ ದಿವ್ಯ ಬ್ರಹ್ಮ ರಥೋತ್ಸವವು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಜರುಗಿತು. ಮಹಾ ರಥೋತ್ಸವ ನಡೆಸಲು ಕಳೆದ 20 ದಿನಗಳಿಂದಲೂ ಸಕಲ ಸಿದ್ಧತೆಗಳೊಂದಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ದೇಶ ವಿದೇಶ ಹಾಗೂ ರಾಜ್ಯ ಹೊರ ರಾಜ್ಯಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ದಿವ್ಯ ಬ್ರಹ್ಮ ರಥವನ್ನು ಗೋವಿಂದ..... ಗೋವಿಂದ..... ಎಂಬ ಘೋಷಣೆಯೊಂದಿಗೆ ಬಯಲು ರಂಗಮಂದಿರ ಮೂಲೆಗೆ ಎಳೆದು ತರುವ ಮೂಲಕ ಯಶಸ್ವಿಯಾಗಿ ನೆರವೇರಿಸಲಾಯಿತು.
ದಿವ್ಯ ಬ್ರಹ್ಮ ರಥೋತ್ಸವ ಆರಂಭಕ್ಕೂ ಮುನ್ನ ಸಾಂಪ್ರದಾಯದಂತೆ ದೊಡ್ಡ ಮೇದೂರು ಕಾಜಿ ಖಾದ್ರಿ ಕುಟುಂಬದಿಂದ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಸ್ಮರಿಸಿದರು.ರಥೋತ್ಸವ ನಡೆಯುವ ವೇಳೆ ತಾಲೂಕಿನ ಭಕ್ತಾದಿಗಳು ರಥಕ್ಕೆ ದವನ ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿ ಮೆರೆದರು.
ಮಾಜಿ ಸಚಿವ, ಶಾಸಕ ಎಚ್.ಡಿ. ರೇವಣ್ಣ. ಶಾಸಕ ಎಚ್.ಕೆ. ಸುರೇಶ್. ಮಾಜಿ ಸಚಿವ ಬಿ.ಶಿವರಾಂ. ಪುರಸಭೆ ಅಧ್ಯಕ್ಷೆ ಉಷಾ ಸತೀಶ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ. ರಾಮಾನುಜ ಸ್ವಾಮೀಜಿ. ತಹಸೀಲ್ದಾರ್ ಶ್ರೀಧರ್ ಕಂಕನವಾಡಿ. ಮಾಜಿ ಧರ್ಮದರ್ಶಿ ಯುಟಿ ಕೇಶವಮೂರ್ತಿ, ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಕೆ.ಎನ್. ಯೋಗೇಶ್ ಸೇರಿದಂತೆ ಪುರಸಭೆ ಮಾಜಿ ಅಧ್ಯಕ್ಷರಾದ ಜಿ.ಶಾಂತಕುಮಾರ್, ಬಿ.ಗಿರೀಶ್ , ಎ.ಆರ್. ಅಶೋಕ್, ಎಂ.ಆರ್. ವೆಂಕಟೇಶ್, ತೀರ್ಥ ಕುಮಾರಿ, ತೋಚ ಅನಂತ ಸುಬ್ಬರಾಯ, ಸದಸ್ಯರಾದ ಬಿ.ಸಿ. ಜಗದೀಶ್, ಶೈಲೇಶ್, ದೇಗುಲ ಕಾರ್ಯ ನಿರ್ವಹಣಾಧಿಕಾರಿ ಯೋಗೇಶ್ ಸೇರಿ ಇತರರು ಹಾಜರಿದ್ದರು.