ನೌಕರರ ಶ್ರದ್ಧೆಯಿಂದ ತರಳಬಾಳು ಸಂಸ್ಥೆಗೆ ಕೀರ್ತಿ

KannadaprabhaNewsNetwork |  
Published : Sep 24, 2025, 01:00 AM IST
ಶ್ರದ್ಧಾಂಜಲಿ ಅಂಗವಾಗಿ ನಡೆದ ಹಿರಿಯ ವಿದ್ಯಾರ್ಥಿಗಳು ಮತ್ತು ನಿವೃತ್ತ ನೌಕರರ ಸಮಾವೇಶದಲ್ಲಿ ಭಾಗಿಯಾಗಿದ್ದ ಗಣ್ಯರು.ಶಿವಕುಮಾರ ಶ್ರೀ ಮೆರವಣಿಗೆ ತರಳಬಾಳು ಶ್ರೀ ಹಾಗೂ ಶಾಸಕ ಎಂ. ಚಂದ್ರಪ್ಪ ಚಾಲನೆ ನೀಡಿದರು. | Kannada Prabha

ಸಾರಾಂಶ

ಶ್ರದ್ಧಾಂಜಲಿ ಅಂಗವಾಗಿ ನಡೆದ ಹಿರಿಯ ವಿದ್ಯಾರ್ಥಿಗಳು ಮತ್ತು ನಿವೃತ್ತ ನೌಕರರ ಸಮಾವೇಶದಲ್ಲಿ ಭಾಗಿಯಾಗಿದ್ದ ಗಣ್ಯರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು, ನೌಕರರ ನಿಷ್ಠೆ ಮತ್ತು ಶ್ರದ್ಧೆಯಿಂದ ತರಳಬಾಳು ಸಂಸ್ಥೆಗೆ ಬಲ ಬಂದಿದೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.

ಶ್ರದ್ಧಾಂಜಲಿ ಅಂಗವಾಗಿ ಆಯೋಜಿಸಿದ್ದ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಮತ್ತು ನಿವೃತ್ತ ನೌಕರರ ಸಮಾವೇಶದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ನಮ್ಮ ಸಂಸ್ಥೆಯಲ್ಲಿ ಕ್ರಿಯಾಶೀಲ ನೌಕರರು ಇದ್ದಾರೆ ಎಂದು ಶ್ಲಾಘಿಸಿದರು.

ಸಂಸ್ಥೆ ವಿಶಾಲವಾಗಿ ಬೆಳೆದಿದೆ. ನೂರಾರು ಶಿಕ್ಷಕರು ಸೇವೆಯಿಂದ ನಿವೃತ್ತರಾಗಿದ್ದಾರೆ. ಅವರು ಇಚ್ಛೆಪಟ್ಟಲ್ಲಿ ಸಂಸ್ಥೆಯು ಅವರ ಸೇವೆಯನ್ನು ಬಳಸಿಕೊಳ್ಳಲು ಮುಂದಾಗಿದೆ. ನೌಕರರು ನಿವೃತ್ತಿ ಹೊಂದಿ ಈಗ ವಾಸಿಸುತ್ತಿರುವ ಸ್ಥಳಕ್ಕೆ ಹತ್ತಿರ ಇರುವ ಶಾಲೆಗಳಲ್ಲಿ ತಮ್ಮ ಸೇವೆಯನ್ನು ಮುಂದುವರೆಸಬಹುದು. ತಮಗೆ ಬಿಡುವಾದಾಗ, ವಾರದಲ್ಲೊಮ್ಮೆ, ಎರಡು ಬಾರಿ ಮಕ್ಕಳಿಗೆ ಬೋಧಿಸಿ, ಅಲ್ಲಿನ ಕಿರಿಯ ಶಿಕ್ಷಕರಿಗೆ ಮಾರ್ಗದರ್ಶನ ಮಾಡುತ್ತ ಸೇವೆ ಸಲ್ಲಿಸಬಹುದಾಗಿದೆ ಎಂದು ಶ್ರೀಗಳು ತಿಳಿಸದರು.

ಹಳೆಯ ವಿದ್ಯಾರ್ಥಿಗಳು ಸಿರಿಗೆರೆಗೆ ಬಂದು ಈ ಸಮಾವೇಶದಲ್ಲಿ ಭಾಗಿಯಾಗಿರುವುದು ನಮಗೆ ಸಂಭ್ರವನ್ನುಂಟು ಮಾಡಿದೆ. ಬಹಳ ದಿನಗಳ ನಂತರ ಮಕ್ಕಳು ಮನೆಗೆ ಬಂದಂತಹ ಅನುಭವದ ಸಂತಸ ತಮಗಾಗಿದೆ ಎಂದರು.

ಸಮಾವೇಶದಲ್ಲಿ ಭಾಗಿಯಾಗಿದ್ದ ಹರಿಹರ ಶಾಸಕ ಬಿ.ಪಿ.ಹರೀಶ್‌ ಮಾತನಾಡಿ, ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು ದೂರದೃಷ್ಟಿ ಹೊಂದಿದ್ದ ಮಹಾದಾರ್ಶನಿಕರಾಗಿದ್ದರು. ಸಮಾಜವನ್ನು ಮೇಲಕ್ಕೆ ಕೊಂಡೊಯ್ಯಬೇಕೆಂಬ ಅವರ ಮಹಾದಾಸೆ ಅವರದಾಗಿತ್ತು. ಶಿಕ್ಷಣ ಕ್ಷೇತ್ರವನ್ನು ಅವರು ತಮ್ಮ ಕಾರ್ಯಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡು ಸೇವೆ ಸಲ್ಲಿಸಿದರು. ಇದರಿಂದ ಲಕ್ಷಾಂತರ ಜನರ ಬದುಕು ಹಸನಾಗಿದೆ ಎಂದರು.

ಸಮಾವೇಶದಲ್ಲಿ ಭಾಗಿಯಾಗಿದ್ದ ಮೈಸೂರಿನ ಸಿಎಫ್‌ಟಿಆರ್‌ಐ ವಿಜ್ಞಾನಿ ರುದ್ರಗೌಡ ಪೊಲೀಸ್‌ ಪಾಲೀಲ್‌, ದಾವಣಗೆರೆಯ ಪಶು ವೈದ್ಯಕೀಯ ಇಲಾಖೆಯ ಅಪರ ನಿರ್ದೇಶಕ ಪಿ. ಮಹೇಶ್‌ ಗೌಡ, ಹುಣಸೂರಿನ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಬಿ.ವಿ. ವಸಂತಕುಮಾರ್‌, ಬೆಂಗಳೂರು ಸಿಐಡಿ ವಿಭಾಗದ ಪೊಲೀಸ್‌ ಅಧಿಕಾರಿ ಎಚ್.‌ ಜಯರಾಜ್‌, ದಾವಣಗೆರೆ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.‌ ಆರ್.‌ ವಿಶಾಲಾಕ್ಷಿ, ಚನ್ನಗಿರಿ ಕ್ಷೇತ್ರ ಶಿಕ್ಷಣಾಧಿಕಾರರಿ ಜಯಣ್ಣ, ಹಾಸನ ಸರ್ಕಾರಿ ವೈದ್ಯಕೀಯ ಕಾಲೇಜಿನ ಸ್ತ್ರೀರೋಗ ತಜ್ಞೆ ಡಾ. ಬಿ.ಎಸ್.‌ ಗಿರಿಜಾ ತಾವು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಓದಿದ ನೆನಪುಗಳ ಬುತ್ತಿ ಬಿಚ್ಚಿಟ್ಟರು. ಒಬ್ಬೊಬ್ಬರು ಒಂದೊಂದು ಯಶೋಗಾಥೆಯನ್ನು ತೆರೆದಿಟ್ಡು ಶಿವಕುಮಾರ ಶ್ರೀಗಳನ್ನು ಬಣ್ಣಿಸಿದರು.

ಕಳೆದ ಒಂದು ವರ್ಷದ ಅವಧಿಯಲ್ಲಿ ಸಂಸ್ಥೆಯ ಸೇವೆಯಿಂದ ನಿವೃತ್ತರಾದ ಶಿಕ್ಷಕರು ಮತ್ತು ನೌಕರರನ್ನು ಸತ್ಕರಿಸಲಾಯಿತು. ಶಿವಕುಮಾರ ಶ್ರೀ ಪುತ್ಥಳಿ ಮೆರವಣಿಗೆ

ಶ್ರದ್ಧಾಂಜಲಿ ನಿಮಿತ್ತ ಮಠದ ಐಕ್ಯ ಮಂಟಪದಿಂದ ಏರ್ಪಡಿಸಲಾಗಿದ್ದ ಭವ್ಯ ಮೆರವಣಿಗೆ ಸಂದರ್ಭದಲ್ಲಿ ಬಂದ ಮಳೆಯ ಕಾರಣದಿಂದ ಮೆರವಣಿಗೆಗೆ ಕ್ಷಣಹೊತ್ತು ಅಡ್ಡಿಯಾಯಿತು. ಮಠದ ಮುಖ್ಯದ್ವಾರದಲ್ಲಿ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಹಾಗೂ ಶಾಸಕ ಎಂ.ಚಂದ್ರಪ್ಪ ಮೆರವಣಿಗೆ ಚಾಲನೆ ನೀಡಿದರು. ಹಲವು ಕಡೆಯಿಂದ ಬಂದಿದ್ದ ಭಕ್ತರು ಮೆರವಣಿಗೆ ಆರಂಭವಾಗುತ್ತಿದ್ದಂತೆ ಕುಣಿದು ಕುಪ್ಪಳಿಸಿದರು, ಶಿವ ಧ್ವಜಗಳನ್ನು ಮುಗಿಲೆತ್ತರಕ್ಕೇರಿಸಿ ಸಂಭ್ರಮಿಸಿದರು. ಕಿಲೋಮೀಟರ್‌ನಷ್ಟು ದೂರ ಸಾಗಿದ ಮೆರವಣಿಗೆಯಲ್ಲಿ ಹಲವು ಕಲಾತಂಡಗಳು ಭಾಗವಹಿಸಿದ್ದವು. ಮಠಕ್ಕೆ ಪಿಇಟಿಎ ಸಂಸ್ಥೆ ನೀಡುತ್ತಿರುವ ಶಿವಕುಂಜರ ಆನೆಯು ಮೆರವಣಿಗೆಯಲ್ಲಿ ಪಾಲುಗೊಂಡು ಜನರ ಆಕರ್ಷಣೆಗೆ ಪಾತ್ರವಾಯಿತು. ಮಹಿಳಾ ವೀರಗಾಸೆ ತಂಡದಲ್ಲಿನ ಬಾಲೆಯರು ಕುಣಿತ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

PREV

Recommended Stories

ಉಡುಪಿ-ಉಚ್ಚಿಲ ದಸರಾ: ನಿತ್ಯ ಸಾವಿರಾರು ಮಹಿಳೆಯರಿಂದ ಕುಂಕುಮಾರ್ಚನೆ
ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಭವನ ಉದ್ಘಾಟನೆ