ಕುವೆಂಪು ರಾಮಾಯಣದಲ್ಲಿ ಸರ್ವೋದಯದ ಕಲ್ಪನೆ

KannadaprabhaNewsNetwork |  
Published : Oct 30, 2026, 03:00 AM IST
ಫೋಟೋವಿವರ- (28ಎಚ್‌ಪಿಟಿ8)  ಕನ್ನಡ ವಿಶ್ವವಿದ್ಯಾಲಯದ ಪಂಪಸಭಾಂಗಣದಲ್ಲಿ ಬುಧವಾರ ನಡೆದ`ಕುವೆಂಪು ದೃಷ್ಟಿಯಲ್ಲಿ ವಾಲ್ಮೀಕಿ ಆದರ್ಶಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮೈಸೂರಿನ ಖ್ಯಾತ ಸಾಹಿತಿ ಡಾ. ಅನುಸೂಯ ಕೆಂಪನಹಳ್ಳಿ ಮಾತನಾಡಿದರು | Kannada Prabha

ಸಾರಾಂಶ

ಮಹರ್ಷಿ ವಾಲ್ಮೀಕಿ ದೇಶಕ್ಕೆ ಮಹತ್ವದ ರಾಮಾಯಣ ಮಹಾಕಾವ್ಯ ನೀಡಿದ್ದಾರೆ. ಈ ಕೃತಿಯು ಭಾರತೀಯ ಜೀವನಮೌಲ್ಯ ಮತ್ತು ಸಂಸ್ಕೃತಿಯ ಹಲವು ಆಯಾಮ ಪರಿಚಯಿಸುತ್ತದೆ.

ಹೊಸಪೇಟೆ: ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣವು ಭಾರತೀಯ ಸಂಸ್ಕೃತಿ, ಧರ್ಮ, ನೀತಿ, ಮಾನವೀಯ ಮೌಲ್ಯ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳ ಮಹತ್ವದ ವಿಚಾರ ಒಳಗೊಂಡ ವಿಶ್ವಕೋಶದಂತಿದೆ ಎಂದು ಮೈಸೂರಿನ ಖ್ಯಾತ ಸಾಹಿತಿ ಡಾ.ಅನುಸೂಯ ಕೆಂಪನಹಳ್ಳಿ ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಬುಧವಾರ ವಾಲ್ಮೀಕಿ ಅಧ್ಯಯನ ಪೀಠದಿಂದ ನಡೆದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಕುವೆಂಪು ದೃಷ್ಟಿಯಲ್ಲಿ ವಾಲ್ಮೀಕಿ ಆದರ್ಶಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹರ್ಷಿ ವಾಲ್ಮೀಕಿ ದೇಶಕ್ಕೆ ಮಹತ್ವದ ರಾಮಾಯಣ ಮಹಾಕಾವ್ಯ ನೀಡಿದ್ದಾರೆ. ಈ ಕೃತಿಯು ಭಾರತೀಯ ಜೀವನಮೌಲ್ಯ ಮತ್ತು ಸಂಸ್ಕೃತಿಯ ಹಲವು ಆಯಾಮ ಪರಿಚಯಿಸುತ್ತದೆ. ಕುವೆಂಪು ತಮ್ಮ ಶ್ರೀರಾಮಾಯಣ ದರ್ಶನಂ ಕೃತಿಯಲ್ಲಿ ವಾಲ್ಮೀಕಿ ರಾಮಾಯಣದ ಕಥೆ ಪುನರಾವರ್ತಿಸುವುದಕ್ಕಿಂತ ಅದಕ್ಕೆ ಹೊಸ ಅರ್ಥ ಮತ್ತು ವೈಜ್ಞಾನಿಕ ದೃಷ್ಟಿಕೋನ ನೀಡುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.ವಾಲ್ಮೀಕಿ ರಾಮಾಯಣದಲ್ಲಿ ಸಜ್ಜನರಿಗೆ ದೊರೆಯುವ ಅವಕಾಶ ಮತ್ತು ಆದರ್ಶಗಳಿಗೆ ಒತ್ತು ನೀಡಿದರೆ ಕುವೆಂಪು ದೃಷ್ಟಿಯಲ್ಲಿ ಕೆಟ್ಟವರೆಂದು ಪರಿಗಣಿಸಲ್ಪಟ್ಟವರಿಗೂ ಬದುಕಿನಲ್ಲಿ ಸುಧಾರಣೆ ಹೊಂದುವ ಅವಕಾಶವಿದೆ. ಕೆಟ್ಟವರನ್ನೂ ಒಳಗೊಂಡಂತೆ ಎಲ್ಲರೂ ಉತ್ತಮವಾಗಿ ಬದುಕಬೇಕು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬಂತೆ ಸಮನ್ವಯ, ಸರ್ವೋದಯ ಎಂಬ ಉದಾತ್ತ ಆಶಯ ಪ್ರತಿಪಾದಿಸಿದ್ದಾರೆ ಎಂದು ಹೇಳಿದರು.ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ, ರಾಮಾಯಣವು ಕನ್ನಡದ ವಿವಿಧ ಕವಿಗಳ ದೃಷ್ಟಿಕೋನಕ್ಕೆ ಅನುಗುಣವಾಗಿ ವಿಭಿನ್ನ ರೂಪಗಳಲ್ಲಿ ಅಭಿವ್ಯಕ್ತಿಗೊಂಡಿದೆ. ಭಾರತದಲ್ಲಿ ಮಾತ್ರವಲ್ಲದೆ ಭಾರತದಾಚೆಯ ದ್ವೀಪ ರಾಷ್ಟ್ರಗಳಲ್ಲಿಯೂ ರಾಮಾಯಣದ ಪ್ರಭಾವ ಹರಡಿರುವುದನ್ನು ಕಾಣಬಹುದು ಎಂದರು.ಕುವೆಂಪು ಮೂಲ ರಾಮಾಯಣದ ಆಶಯಗಳಿಗೆ ಧಕ್ಕೆಯಾಗದಂತೆ ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನದಲ್ಲಿ ಕೃತಿ ರಚಿಸಿದ್ದಾರೆ. ಇದು ಅವರ ಸಹನೆ, ತಾಳ್ಮೆ ಹಾಗೂ ಎಲ್ಲವನ್ನೂ ಸ್ವೀಕರಿಸುವ ವಿಶಾಲ ಮನೋಭಾವ ತೋರಿಸುತ್ತದೆ ಎಂದು ಹೇಳಿದರು.ರಾಮಾಯಣದ ಪಾತ್ರ ಹಾಗೂ ಅವು ನೀಡುವ ಸಂದೇಶ ಮತ್ತೆ ಮತ್ತೆ ಸ್ಮರಿಸಿಕೊಳ್ಳಬೇಕು. ಆ ಪಾತ್ರ ಮಾನವ ಕುಲದ ಒಳಿತಿಗಾಗಿ ನೀಡುವ ಸಂದೇಶ ಇಂದಿನ ಸಮಾಜದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಮತ್ತು ಭವಿಷ್ಯದ ಪೀಳಿಗೆಗೆ ಯಾವ ಮೌಲ್ಯ ತಲುಪಿಸಬಹುದು ಎಂಬುದನ್ನು ಅರಿತುಕೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ ಮಹರ್ಷಿ ವಾಲ್ಮೀಕಿ ಸಾಹಿತ್ಯಿಕ ಕೊಡುಗೆ ಮತ್ತು ಶ್ರಮದ ಮಹತ್ವ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು. ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ವಾಲ್ಮೀಕಿ ಅಧ್ಯಯನ ಪೀಠದ ಸಂಚಾಲಕ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಮಾತನಾಡಿ, ವಾಲ್ಮೀಕಿ ಮರುಚಿಂತನೆ ಎಂಬ ವಿಷಯ ಕೇಂದ್ರವಾಗಿಟ್ಟುಕೊಂಡು ಮುಂದಿನ ದಿನಗಳಲ್ಲಿ ಅನೇಕ ಪ್ರಸಿದ್ಧ ಲೇಖಕರಿಂದ ಲೇಖನ ಬರೆಸುವ ಹಾಗೂ ವಿಚಾರ ಸಂಕಿರಣ ಆಯೋಜಿಸುವ ಯೋಜನೆ ಇದೆ ಎಂದರು.ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವಿಜಯಕುಮಾರ್ ಎಚ್.ಜಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಗೋವಿಂದಮ್ಮ ವಂದಿಸಿದರು. ಮಂಜುಳಾ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು