- ಶಾಸಕರ ಕಚೇರಿ ಮುಂಭಾಗದಲ್ಲಿ ವಿವಿಧ ಇಲಾಖೆಗಳ ಸವಲತ್ತುಗಳ ವಿತರಣೆ ಕಾರ್ಯಕ್ರಮ
ರಾಜ್ಯದ ಕಾಂಗ್ರೆಸ್ ಸರ್ಕಾರ ಬಡವರ, ಶೋಷತರ ಪರವಾಗಿ ನಿಂತಿದ್ದು ಸಮಾಜದ ಕಟ್ಟಕಡೆ ವ್ಯಕ್ತಿಗಳಿಗೂ ಸರ್ಕಾರದ ಸೌಲಭ್ಯ ತಲುಪಿಸುತ್ತಿದೆ ಎಂದು ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಮಂಗಳವಾರ ಶಾಸಕರ ಕಚೇರಿ ಆವರಣದಲ್ಲಿ ಗ್ರಾಮೀಣ ಕೈಗಾರಿಕೆ ಇಲಾಖೆ, ದೇವರಾಜು ಅರಸು ಅಭಿವೃದ್ಧಿ ನಿಗಮ, ಮೀನುಗಾರಿಕೆ ಇಲಾಖೆ, ತಾಪನಿಂದ ಫಲಾನುಭವಿಗಳಿಗೆ ವಿವಿಧ ಕಿಟ್ ವಿತರಿಸಿ ಮಾತನಾಡಿದರು. ಸರ್ಕಾರ ದೂರ ದೃಷ್ಠಿ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಕಟ್ಟಡ ಕಾರ್ಮಿಕರು ಅಸಂಘಟಿತ ಕಾರ್ಮಿಕರಾಗಿದ್ದಾರೆ. ಕಟ್ಟಡ ಕಟ್ಟುವ ಕಾರ್ಮಿಕರೇ ನಿಜವಾದ ವಾಸ್ತು ಶಿಲ್ಪಿಗಳಾಗಿದ್ದಾರೆ. 2007 ರಲ್ಲಿ ಆಸ್ಕರ್ ಫರ್ನಾಂಡಿಸ್ ಕೇಂದ್ರದಲ್ಲಿ ಮಂತ್ರಿಯಾಗಿದ್ದಾಗ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪಿಸಿದ್ದರು. ಮಲ್ಲಿಕಾರ್ಜುನ ಖರ್ಗೆ ಮಂತ್ರಿಯಾಗಿದ್ದಾಗ ಕಾರ್ಮಿಕ ಕಲ್ಯಾಣ ನಿಧಿಗೆ ಸಾಕಷ್ಟು ಹಣ ಬಿಡುಗಡೆ ಮಾಡಿದರು.ಈಗ ಕಟ್ಟಡ ಕಾರ್ಮಿಕರಿಗೆ ಹಲವು ಸೌಲಭ್ಯಗಳಿವೆ. ಕಟ್ಟಡ ಕಾರ್ಮಿಕರು ಇದನ್ನು ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಕೊರೋನ ಬಂದ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರು, ಆಟೋ ಚಾಲಕರು ಸೇರಿದಂತೆ ಅನೇಕ ಶ್ರಮ ಜೀವಿಗಳು ಉದ್ಯೋಗ ಇಲ್ಲದೆ ಕಷ್ಟಕ್ಕೆ ಸಿಕ್ಕಿದ್ದರು. ಆ ಸಂದರ್ಭದಲ್ಲಿ ನಾನು ಮನೆಯಲ್ಲಿ ಕೂರದೆ ಬಡವರ ಕಷ್ಠಗಳಿಗೆ ಸ್ಪಂದಿಸಿದ್ದೆ. ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಬಡವರಿಗೆ ಊಟ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಚುನಾವಣೆಗೂ ಮುಂಚೆ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದಂತೆ ಪಂಚ ಗ್ಯಾರಂಟಿ ಜಾರಿಗೆ ತಂದಿದೆ. ವರ್ಷಕ್ಕೆ ₹50 ರಿಂದ 60 ಸಾವಿರ ಕೋಟಿ ಗ್ಯಾರಂಟಿಗಾಗಿ ಖರ್ಚು ಮಾಡುತ್ತಿದ್ದೇವೆ. ನೇರವಾಗಿ ಮಹಿಳೆಯರ ಖಾತೆಗೆ 2 ಸಾವಿರ ಜಮಾ ಆಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯಿಂದ ಟೂಲ್ಸ್ ಕಿಟ್,ಸೇಪ್ಟಿ ಕಿಟ್ ಳನ್ನು 367 ಫಲಾನುಭವಿಗಳಿಗೆ ನೀಡಲಾಯಿತು. ದೇವರಾಜು ಅರಸು ನಿಗಮದಿಂದ 10 ಫಲಾನುಭವಿಗಳಿಗೆ ಹೊಲಿಗೆ ಯಂತ್ರ,ಕೈಗಾರಿಕೆ ಇಲಾಖೆಯಿಂದ 40 ಫಲಾನುಭ ವಿಗಳಿಗೆ ಗಾರೆ ಕಿಟ್, ಮರಕೆಲಸದ ಕಿಟ್ ಮತ್ತಿತರರ ಉಪಕರಣ ನೀಡಲಾಯಿತು. ಮೀನುಗಾರಿಕೆ ಇಲಾಖೆಯಿಂದ 16 ಫಲಾನುಭವಿಗಳಿಗೆ ಸಲಕರಣೆ ಕಿಟ್, ಬಲೆ, ಉಕ್ಕಡ, ನಾಲ್ಕು ಚಕ್ರದ ವಾಹನವನ್ನು ನೀಡಲಾಯಿತು.ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಪಂಪ್, ಮೋಟಾರ್ ಪೈಪ್, ಹೊಲಿಗೆ ಯಂತ್ರ ಗಳನ್ನು ವಿತರಿಸಲಾಯಿತು.ತಾಪಂ ಅನುದಾನದಲ್ಲಿ ಅಂಗನವಾಡಿ ಕೇಂದ್ರಗಳಿಗೆ ವಾಟರ್ ಪಿಲ್ಟರ್, ಕುಕ್ಕರ್ ಗ್ಯಾಸ್ ಸ್ಟೌ ಹಾಗೂ 5 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗೆ ಹೊಸದಾಗಿ ಆದೇಶ ಪತ್ರ ನೀಡಲಾಯಿತು.