ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜೀವನದಲ್ಲಿ ಯಾವುದೇ ರೀತಿಯ ಸಂಶಯ, ಸಂದೇಹಗಳು ಎದುರಾದಲ್ಲಿ ನಮ್ಮ ಸಂವಿಧಾನ ಓದಿದರೆ ಉತ್ತರ ಸಿಗುತ್ತದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ, ಶಾಲಾ ಶಿಕ್ಷಣ ಮತ್ತು ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲರನ್ನೂ ಸಮಾನತೆಯಿಂದ ಕಾಣಲು, ಎಲ್ಲ ರೀತಿಯ ನ್ಯಾಯ ಒದಗಿಸಲು ಮಾರ್ಗಸೂಚಿಯಾಗಿರುವ ನಮ್ಮ ಸಂವಿಧಾನವನ್ನು ಮಕ್ಕಳು ಸೇರಿದಂತೆ ಎಲ್ಲರೂ ಓದಿ, ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.
ಸಂವಿಧಾನಕ್ಕೆ ಸಾಕಷ್ಟು ಆಯಾಮಗಳಿದ್ದು, ಇದನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಇದರ ಮಹತ್ವ ತಿಳಿಯಲು ಸಾಕಷ್ಟು ಚಿಂತನೆ ನಡೆಸಬೇಕು. ನಾನು ಐಎಎಸ್ ಮಾಡುವಾಗ ಪ್ರತಿ ಸಲ ಸಂವಿಧಾನ ಓದಿದಾಗಲೂ ಹೊಸ ಹೊಸ ಅರ್ಥ ಮತ್ತು ಪ್ರೇರಣೆ ಲಭಿಸುತ್ತಿತ್ತು. ನಮ್ಮ ಮಕ್ಕಳು ಸಂವಿಧಾನದ ಮೂಲಭೂತ ಉದ್ದೇಶ, ಹಕ್ಕುಗಳು, ಬಾಧ್ಯತೆಗಳನ್ನು ತಿಳಿದುಕೊಳ್ಳಬೇಕು. ಅಧಿಕಾರಿಗಳಾದ ನಮಗೆ ಎಲ್ಲರನ್ನೂ ಸಮಾನತೆಯಿಂದ ಕಾಣುವ, ಎಲ್ಲ ರೀತಿಯ ನ್ಯಾಯ ಒದಗಿಸಲು ಕಲಿಸಿಕೊಟ್ಟ ಸಂವಿಧಾನದ ಮಾರ್ಗದಲ್ಲಿ ನಡೆಯುವ ಮೂಲಕ ಮಾದರಿಯಾಗಬೇಕು ಎಂದರು.ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರಾದ ಡಾ. ಬಸವರಾಜಪ್ಪ ಎಂ. ವಿಶೇಷ ಉಪನ್ಯಾಸ ನೀಡಿ ಮಾತನಾಡಿ, 1930ರ ನ.26ರಂದು ದೇಶ ಪೂರ್ಣ ಸ್ವರಾಜ್ಯ ಘೋಷಿಸಿದ್ದು, ಇದರ ಸ್ಮರಣಾರ್ಥ 1949ರ ನ.26ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು.
ಸಮಾಜದ ಸ್ವಾಸ್ಥ್ಯ ಕಾಪಾಡಲು ನಮ್ಮ ಸರ್ಕಾರ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ ಜಾರಿಗೊಳಿಸಿದೆ. ಸಂವಿಧಾನವನ್ನು ಅರ್ಥ ಮಾಡಿಕೊಂಡರೆ ಡಾ. ಬಿ.ಆರ್. ಅಂಬೇಡ್ಕರ್‌ರವರನ್ನು ಅರ್ಥ ಮಾಡಿಕೊಂಡಂತೆ. ಪ್ರತಿ ಮನೆಗಳಲ್ಲಿ ಸಂವಿಧಾನ ಪುಸ್ತಕ ಇರಬೇಕು ಎಂದರು.ಬಹಳ ಜನರ ಪರಿಶ್ರಮದಿಂದ ಸಂವಿಧಾನ ಕರಡು ರಚನೆಯಾಗಿದ್ದು, ಇದರ ಆತ್ಮ ಮಾತ್ರ ಅಂಬೇಡ್ಕರ್ ಆಗಿದ್ದಾರೆ. ಕೇವಲ ರಾಜಕೀಯ ಮಾತ್ರವಲ್ಲ, ಸಾಮಾಜಿಕ ,ಆರ್ಥಿಕ ಸ್ವಾತಂತ್ರ‍್ಯ ಬರಬೇಕು ಎಂಬುದು ಅವರ ಸದಾಶಯವಾಗಿತ್ತು ಎಂದರು.
ಅಂಬೇಡ್ಕರ್‌ರವರು ಪ್ರಪಂಚದ ಎಲ್ಲ ಧರ್ಮಗಳನ್ನು ಅಧ್ಯಯನ ಮಾಡಿದ್ದರು. ನಮ್ಮ ನಾಗರೀಕತೆ, ಬುಡಕಟ್ಟು ಕುಲಚಿನ್ಹೆಗಳನ್ನು ಸಂವಿಧಾನದ ಮುಖಪುಟದಲ್ಲಿ ಬಳಸಿದ್ದಾರೆ. ಸಂವಿಧಾನದ ಮೂಲಪ್ರತಿ ಹಸ್ತಾಕ್ಷರದಲ್ಲಿದ್ದು ದೇಶದಲ್ಲಿ ಇದರ 3 ಮೂಲಪ್ರತಿಗಳಿವೆ ಎಂದರು.ಭಾರತ ಸಂವಿಧಾನದಲ್ಲಿ 22 ಭಾಗಗಳು, 395 ವಿಧಿಗಳು, 12 ವೇಳಾಪಟ್ಟಿಯಿದ್ದು ಇದನ್ನು ರಚಿಸಲು 2 ವರ್ಷ 11 ತಿಂಗಳು, 18 ದಿನಗಳನ್ನು ತೆಗೆದುಕೊಳ್ಳಲಾಗಿದೆ. ವಿವಿಧ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ಭಾರತೀಯತೆಗೆ ಸರಿಹೊಂದುವಂತೆ ರಚಿಸಲಾಗಿದೆ ಎಂದ ಅವರು, ಸಂವಿಧಾನವನ್ನು ಅಲಂಕರಿಸಿದ ಕನ್ನಡಿಗರು, ಕರಡು ಸಮಿತಿಯಲ್ಲಿ ಇದ್ದ ಕನ್ನಡಿಗರು, ಹಾಗೂ ಸಂವಿಧಾನ ವಿನ್ಯಾಸದಲ್ಲಿ ಅಳವಡಿಸಲಾಗಿರುವ ಪೌರಾಣಿಕ, ಐತಿಹಾಸಿಕ, ಭೌಗೋಳಿಕ, ಧಾರ್ಮಿಕ ದೃಶ್ಯಗಳನ್ನು ದೃಶ್ಯೀಕರಿಸುವ ಚಿತ್ರಗಳ ಕುರಿತು ಪಿಪಿಟಿ ಮೂಲಕ ವಿಶೇಷ ಮಾಹಿತಿ ನೀಡಿದರು.
ಸಂವಿಧಾನದ ಭಾಗಗಳಲ್ಲಿ ಸಿಂಧೂ ಕಣಿವೆ ನಾಗರೀಕ ಮುದ್ರೆ, ಗುರುಕುಲದ ದೃಶ್ಯ, ರಾಮಾಯಣದ ಒಂದು ದೃಶ್ಯ, ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ಹೇಳುವಾಗ ಭಗವದ್ಗೀತೆಯ ಕೃಷ್ಣಾರ್ಜುನರ ದೃಶ್ಯ, ಬುದ್ದನ ಪ್ರಥಮ ಉಪದೇಶದ ಚಿತ್ರ, ಮಹಾವೀರನ ಅಹಿಂಸಾ ತತ್ವ ದೃಶ್ಯ, ಬೌದ್ಧ ಸನ್ಯಾಸಿಗಳೊಂದಿಗೆ ಅಶೋಕನ ಚಿತ್ರ, ಗಂಧರ್ವರ ದೃಶ್ಯ, ರಾಜ ವಿಕ್ರಮಾದಿತ್ಯ, ನಳಂದ ವಿಶ್ವವಿದ್ಯಾಲಯ, ನಟರಾಜನ ವಿಗ್ರಹ, ಮೊಗಲ್ ಆಸ್ಥಾನದ ವಾಸ್ತುಶಿಲ್ಪ, ಶಿವಾಜಿ, ಗುರುಗೋವಿಂದ್, ಲಕ್ಷ್ಮಿ ಬಾಯಿ, ಟಿಪ್ಪು ಸುಲ್ತಾನ್, ಗಾಂಧೀಜಿ ದಂಡಿ ಸತ್ಯಾಗ್ರಹ, ಹೀಗೆ ವಿವಿಧ ಐತಿಹಾಸಿಕ, ಭೌಗೋಳಿಕತೆಯ ಚಿತ್ರಗಳನ್ನು ಬಳಸಲಾಗಿದೆ ಎಂದು ವಿವರಿಸಿದರು.ಪಾಲಿಕೆ ಆಯುಕ್ತರಾದ ಕೆ.ಮಾಯಣ್ಣಗೌಡ ಮಾತನಾಡಿ, ನಮ್ಮ ವೈವಿಧ್ಯಮಯವಾದ ದೇಶದಲ್ಲಿ ಶಾಂತಿ, ಸಾಮರಸ್ಯ, ಸಹಬಾಳ್ವೆ, ಬ್ರಾತೃತ್ವ, ಘನತೆಯಿಂದ ಬದುಕಲು ಅನುವು ಮಾಡಿಕೊಟ್ಟಿರುವ ಸಂವಿಧಾನವನ್ನು ಅಂಬೇಡ್ಕರ್‌ರವರು ನಮಗೆ ನೀಡಿದ್ದು, ನಾವೆಲ್ಲರೂ ಒಂದೇ ಎಂದು ಸಾರಿದ್ದಾರೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಬೋಧಿಸಲಾಯಿತು.ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಓ ಹೇಮಂತ್ ಎನ್, ಡಿವೈಎಸ್‌ಪಿ ಬಾಬು ಅಂಜಿನಪ್ಪ, ಶಿವಮೊಗ್ಗ ಎಸಿ ಸತ್ಯನಾರಾಯಣ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಿ.ಮಲ್ಲೇಶಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಹಾಜರಿದ್ದರು.