ಕನ್ನಡಪ್ರಭ ವಾರ್ತೆ ಅರಸೀಕೆರೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಸ್. ನಾರಾಯಣ ಮಾತನಾಡಿ, ಭಾರತ ಸ್ವಾತಂತ್ರ್ಯ ರಾಷ್ಟ್ರವಾದ ನಂತರ 1946ರಲ್ಲಿ ಸಂವಿಧಾನ ರಚನಾ ಸಭೆ ಡಾ. ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿ ಹಲವು ಬಾರಿ ಸಭೆ ಸೇರಿ 1948ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದ ಕರಡನ್ನು ಪೂರ್ಣಗೊಳಿಸಿದರು. ಅದನ್ನು 26 ನವೆಂಬರ್ 1949 ರಂದು ರಚನಾಸಭೆಯ ಮುಂದೆ ಮಂಡಿಸಿದರು ಅಂದೇ ಸಭೆಯಲ್ಲಿ ಅಂಗೀಕರಿಸಲಾಯಿತು. ಹಾಗಾಗಿ ನವಂಬರ್ 26ರ ದಿನವನ್ನು ಸಂವಿಧಾನ ದಿವಸ್ ಎಂದು ಆಚರಿಸಲಾಗುತ್ತಿದೆ. 1949 ನವೆಂಬರ್ 26ರಂದು ಅಂಗೀಕರಿಸಿದ ಈ ಸಂವಿಧಾನವನ್ನು ಜನವರಿ 26 1950ರಂದು ಜಾರಿಗೊಳಿಸಲಾಯಿತು. ಜಾರಿಗೊಳಿಸಿದ ನವೆಂಬರ್ 26 ದಿನಾಂಕದಂದು ದೇಶಾದ್ಯಂತ ಗಣರಾಜ್ಯ ದಿನ ಎಂದು ಆಚರಿಸಲಾಗುತ್ತದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಅರ್ಥಶಾಸ್ತ್ರದ ಮುಖ್ಯಸ್ಥ ಡಾ. ಭಾಸ್ಕರ್ ಮಾತನಾಡಿ, ಭಾರತ ಸಂವಿಧಾನವು ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವುದರ ಜೊತೆಗೆ ಭಾರತದ ಪ್ರತಿಯೊಬ್ಬ ಪ್ರಜೆಗೂ ಸರ್ವ ಸಮಾನತೆಯನ್ನು ಕಲ್ಪಿಸಿಕೊಟ್ಟಿದೆ. ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರ ಮಹತ್ವದ್ದಾಗಿದೆ. ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆದಿರುವುದು ಔಚಿತ್ಯಪೂರ್ಣವಾಗಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು.ಇದೇ ಸಂದರ್ಭದಲ್ಲಿ ಮಾತನಾಡಿದ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ. ಶಿವಕುಮಾರ್, ಸಂವಿಧಾನವನ್ನು ಪ್ರತಿಯೊಬ್ಬರು ಗೌರವಿಸಬೇಕು ಮತ್ತು ಪಾಲಿಸಬೇಕು ಎಂದು ಕರೆ ನೀಡಿದರು. ಡಾ. ಹರೀಶ್ ಕುಮಾರ್ ಸಂವಿಧಾನವು ಪ್ರತಿಯೊಬ್ಬ ಭಾರತೀಯನು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಿಂದ ಬದುಕಲು ಅನುವು ಮಾಡಿಕೊಟ್ಟಿದೆ. ಸಂವಿಧಾನದಿಂದಾಗಿ ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಾಭಿಮಾನದಿಂದ ಬದುಕಲು ಸಹಕಾರಿಯಾಗಿದೆ ಎಂದರು.
ರಾಜ್ಯಶಾಸ್ತ್ರ ಉಪನ್ಯಾಸಕರಾದ ರತ್ನಮ್ಮ ಸಂವಿಧಾನದ ಪೂರ್ವ ಪೀಠಿಕೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರಲ್ಲದೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.ಇದೇ ಸಂದರ್ಭದಲ್ಲಿ ಐಕ್ಯುಎಸಿ ಸಂಚಾಲಕ ಡಾ. ಸುನಿಲ್ ದೈಹಿಕ ಶಿಕ್ಷಣ ನಿರ್ದೇಶಕ ಹರೀಶ್ ಸೇರಿದಂತೆ ಎಲ್ಲಾ ಬೋಧಕರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಉಪಹಾರವ ವ್ಯವಸ್ಥೆ ಮಾಡಿದ ಪ್ರಾಂಶುಪಾಲರು ಎಲ್ಲರಿಗೂ ಶುಭಕೋರಿದರು.