ಶಿಕಾರಿಪುರ: ಸಂಪೂರ್ಣ ಜಗತ್ತನ್ನು ಬೆಳಕಿನ ಕಡೆಗೆ ತೆಗೆದುಕೊಂಡು ಹೋಗುವ ಶಕ್ತಿ ಡಾ.ಬಿ.ಆರ್.ಅಂಬೇಡ್ಕರ್ ರವರು ರಚಿಸಿದ ಸಂವಿಧಾನಕ್ಕೆ ಇದೆ ಎಂದು ಇಲ್ಲಿನ ಪುರಸಭಾ ಅಧ್ಯಕ್ಷೆ ಸುನಂದ ಮಂಜುನಾಥ್ ಬಾಳೆಕಾಯಿ ಹೇಳಿದರು.
ಅಂಬೇಡ್ಕರ್ ಅವರನ್ನು ಅಂದು ಅಸ್ಪೃಶ್ಯತೆಯಿಂದಾಗಿ ಹೋರದಬ್ಬಲ್ಪಟ್ಟವರು. ಅವರನ್ನೇ ಕರೆದು ತಬ್ಬಿಕೊಳ್ಳುವ ಸ್ಥಿತಿ ಬಂತು. ಶಾಲೆಯಿಂದ ಹೊರ ಹಾಕಿದವರು, ಅವರ ಹೆಸರಿನಲ್ಲಿ ಶಾಲಾ ಕಾಲೇಜು ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವಂತಾಯಿತು. ಬೃಹತ್ ಪ್ರಜಾಪ್ರಭುತ್ವ ದೇಶಕ್ಕೆ ಕಾನೂನು, ಸಂವಿಧಾನವನ್ನು ಬರೆದು ಅವರೇ ಪ್ರಥಮ ಕಾನೂನು ಸಚಿವರಾಗಿದ್ದು ದೇಶದ ಹೆಮ್ಮೆ ಎಂದರು.
ಬಾಬು ಜಗಜೀವನ್ ರಾಂ, ಹಸಿರು ಕ್ರಾಂತಿಯ ಹರಿಕಾರರಾಗಿದ್ದು, ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಭಾರತಕ್ಕೆ ಮೃಷ್ಠಾನ್ನ ಬಡಿಸಿದ ಮಹಾಪುರುಷ ಎಂದು ಹೇಳಿದರು.ಉಪನ್ಯಾಸಕ ಕೆ.ಎಚ್.ಪುಟ್ಟಪ್ಪ ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜನ್ಮದಿನವನ್ನು ವಿಶ್ವ ಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಭಾರತದ ಪ್ರಪ್ರಥಮ ಸ್ವತಂತ್ರ ಸರ್ಕಾರದಲ್ಲಿ ಕಾನೂನು ಮಂತ್ರಿ ಆಗಿ, ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಅನೇಕ ದೇಶಗಳ ಸಂವಿಧಾನಗಳ ಕಾನೂನು ಪದ್ಧತಿಗಳ ಅಧ್ಯಯನ ಮಾಡಿ, ಜ್ಞಾನ ಶಿಖರವಾದ ಅವರು ದೇಶಕ್ಕೆ ಬೃಹತ್ ಲಿಖಿತ ಸಂವಿಧಾನವನ್ನು ರಚಿಸಿದ್ದಾರೆ. ಅಂಬೇಡ್ಕರ್ ವಿಚಾರಧಾರೆಗಳನ್ನು ದೇಶದ ಪ್ರತಿಯೊಬ್ಬ ನಾಗರಿಕರು ತಿಳಿಯಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದ ಆರಂಭದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಗಳ ಮೆರವಣಿಗೆ ಮಾಡಲಾಯಿತು.