ಹಾವೇರಿ: ಭಾರತದ ಸಂವಿಧಾನ ಜಗತ್ತಿನಲ್ಲೇ ಅಗ್ರಮಾನ್ಯ ಸಂವಿಧಾನಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯದ ಧ್ಯೇಯಗಳನ್ನು ಪ್ರತಿಪಾದಿಸುವ ಈ ಸಂವಿಧಾನ ಜಗತ್ತಿಗೇ ದಾರಿದೀವಿಗೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಹೇಳಿದರು.ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನ ಕಾಲದ ಅಗತ್ಯಕ್ಕೆ ತಕ್ಕಂತೆ ಬದಲಾವಣೆ, ತಿದ್ದುಪಡಿಗಳನ್ನು ಕಾಣುತ್ತಿದ್ದರೂ ಮೂಲಭೂತ ಸ್ವರೂಪವನ್ನು ಉಳಿಸಿಕೊಂಡು ಭಾರತೀಯತ್ವವನ್ನು ಮೆರೆಯುತ್ತಿದೆ ಎಂದರು.ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರವರು ಪ್ರತಿಪಾದಿಸಿರುವ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವದಲ್ಲಿ ನಂಬಿಕೆಯನ್ನು ಸ್ಥಾಪಿಸಲು ನಾವು ಬದ್ಧರಾಗಿದ್ದೇವೆ. ಗಣತಂತ್ರದ ಅತಿದೊಡ್ಡ ಹಬ್ಬವನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಿ ಅಸಮಾನತೆ ರಹಿತ ಸಮಾಜ ನಿರ್ಮಾಣಕ್ಕೆ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗ ತನ್ನ ಹೊಣೆಗಾರಿಕೆ ಮತ್ತು ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕಾಗಿದೆ. ಇದೇ ಸಂವಿಧಾನಕ್ಕೆ ಸಲ್ಲಿಸಬಹುದಾದ ದೊಡ್ಡ ಗೌರವ. ಈ ನಿಟ್ಟಿನಲ್ಲಿ ನಾವೆಲ್ಲ ಸಂಕಲ್ಪಮಾಡೋಣ ಎಂದರು.ವೈದ್ಯಕೀಯ ವಿಜ್ಞಾನಗಳ ಸಂಸ್ಥೆ: ಜಿಲ್ಲೆಯಲ್ಲಿ ₹500 ಕೋಟಿ ವೆಚ್ಚದಲ್ಲಿ ಸುಜ್ಜಿತವಾಗಿ ನಿರ್ಮಾಣ ಮಾಡಲಾದ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಲೋಕಾರ್ಪಣೆಗೊಳಿಸಲಾಗಿದೆ. ರಾಜ್ಯದಲ್ಲೇ ಮಾದರಿ ವೈದ್ಯಕೀಯ ಕಾಲೇಜ್ ಇದಾಗಿದೆ. ಜಿಲ್ಲೆಗೆ ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡುವುದಾಗಿ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಜಿಲ್ಲೆಯ ಜನತೆಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯ 330 ಹಾಸಿಗೆಗಳನ್ನು 500 ಹಾಸಿಗೆಗೆ ಉನ್ನತೀಕರಿಸಲಾಗಿದೆ. ಶೀಘ್ರದಲ್ಲೇ ಜಿಲ್ಲೆಗೆ ಎಂಆರ್‌ಐ ಯಂತ್ರ ಬರಲಿದೆ. ಇದರಿಂದ ರೋಗಿಗಳು ಚಿಕಿತ್ಸೆಗೆ ದಾವಣಗೆರೆ ಹಾಗೂ ಹುಬ್ಬಳ್ಳಿಗೆ ಹೋಗುವುದು ತಪ್ಪಲಿದೆ ಎಂದರು.ಜಿಲ್ಲಾಧಿಕಾರಿಗಳಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ಉತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿ ಪಡೆದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರನ್ನು ಗಣ್ಯರು ಸನ್ಮಾನಿಸಿದರು. ಕ್ರೀಡೆ, ಶಿಕ್ಷಣ, ಸಮಾಜ ಸೇವೆ, ಪರಿಸರ ರಕ್ಷಣೆ, ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ 28 ಜನ ಸಾಧಕರನ್ನು, ಎಸ್.ಎಲ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.