ಕನ್ನಡ ಸಾಹಿತ್ಯದ ಕೊಡುಗೆ ಅಪಾರ-ತಹಸೀಲ್ದಾರ ಸೋಮನಕಟ್ಟಿ

KannadaprabhaNewsNetwork |  
Published : Nov 20, 2026, 02:15 AM IST
19ಎಚ್.ಎಲ್.ವೈ-1: ಬುಧವಾರ ಸಂಜೆ ತಾಲೂಕಾಡಳಿತ ಸೌಧದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ಕನ್ನಡ ಜಿಲ್ಲಾ ಘಟಕ ಹಾಗೂ ಹಳಿಯಾಳ ತಾಲೂಕು ಘಟಕದ ಸಹಯೋಗದಲ್ಲಿ ಕನ್ನಡ ಕಾರ್ತಿಕ ‘ಅನುದಿನ ಅನುಸ್ಪಂದನ-2026’ರ ನವೆಂಬರ್ ತಿಂಗಳ ಸಾಹಿತ್ಯ ಪಯಣದ ಅಂಗವಾಗಿ ಆಯೋಜಿಸಿದ ಕವನ ರಚನಾ ಸ್ಪರ್ಧೆ ಹಾಗೂ ಕವಿಗೋಷ್ಠಿ ಕಾರ್ಯಮಕ್ಕೆ ಚಾಲನೆ ನೀಡಿ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಮಾತನಾಡಿದರು.  | Kannada Prabha

ಸಾರಾಂಶ

ಕನ್ನಡ ಸಾಹಿತ್ಯವು ವಿಶ್ವ ಸಾಹಿತ್ಯದ ಭೂಪಟದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿದೆ.

ಕಸಾಪ ಸಹಯೋಗದಲ್ಲಿ ಕನ್ನಡ ಕಾರ್ತಿಕ ‘ಅನುದಿನ ಅನುಸ್ಪಂದನ-2026’ರ ತಿಂಗಳ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಹಳಿಯಾಳ

ಕನ್ನಡ ಸಾಹಿತ್ಯವು ವಿಶ್ವ ಸಾಹಿತ್ಯದ ಭೂಪಟದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿದೆ. ಪಂಪ, ರನ್ನ, ಪೊನ್ನ, ಜನ್ನರಿಂದ ಆರಂಭಗೊಂಡ ಕನ್ನಡ ಸಾಹಿತ್ಯದ ಶ್ರೀಮಂತ ಪರಂಪರೆಯು ವಚನ, ದಾಸ, ಆಧುನಿಕ, ದಲಿತ ಹಾಗೂ ಬಂಡಾಯ ಸಾಹಿತ್ಯದ ಮೂಲಕ ಬೆಳೆದು ನಾಡಿನ ಚಿಂತನೆ, ಸಂಸ್ಕೃತಿ ಮತ್ತು ಸಾಮಾಜಿಕ ಪ್ರಜ್ಞೆಗೆ ಅಪಾರ ಕೊಡುಗೆ ನೀಡಿದೆ ಎಂದು ತಹಸೀಲ್ದಾರ ಫಿರೋಜ್ ಷಾ ಸೊಮನಕಟ್ಟಿ ಹೇಳಿದರು.

ಬುಧವಾರ ಸಂಜೆ ತಾಲೂಕಾಡಳಿತ ಸೌಧದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ಕನ್ನಡ ಜಿಲ್ಲಾ ಘಟಕ ಹಾಗೂ ಹಳಿಯಾಳ ತಾಲೂಕು ಘಟಕದ ಸಹಯೋಗದಲ್ಲಿ ಕನ್ನಡ ಕಾರ್ತಿಕ ‘ಅನುದಿನ ಅನುಸ್ಪಂದನ-2026’ರ ನವೆಂಬರ್ ತಿಂಗಳ ಸಾಹಿತ್ಯ ಪಯಣದ ಅಂಗವಾಗಿ ಆಯೋಜಿಸಿದ ಕವನ ರಚನಾ ಸ್ಪರ್ಧೆ ಹಾಗೂ ಕವಿಗೋಷ್ಠಿ ಕಾರ್ಯಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾವ್ಯದಿಂದ ಯಶಸ್ಸು, ಕಾವ್ಯದಿಂದ ಅರ್ಥ, ಕಾವ್ಯದಿಂದ ವ್ಯವಹಾರ ಜ್ಞಾನ, ಕಾವ್ಯದಿಂದ ಶಿವನ ಆಶೀರ್ವಾದ ದೊರೆಯುತ್ತದೆ ಎಂದ ಅವರು, ಸತ್ಯ, ಶಾಂತಿ, ಪ್ರೀತಿ ಹಾಗೂ ಮಾನವೀಯ ಮೌಲ್ಯಗಳ ಬೆಳವಣಿಗೆಯಲ್ಲಿ ಸಾಹಿತ್ಯದ ಪಾತ್ರವನ್ನು ವಿವರಿಸಿದರು. ತಮ್ಮ ‘ಒಡೆದ ಕನಸುಗಳು’ ಕವನವನ್ನು ವಾಚಿಸಿ ಸಭಿಕರನ್ನು ಮಂತ್ರಮುಗ್ಧಗೊಳಿಸಿದರು.

ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿಯ ವೈಚಾರಿಕ ಮಹತ್ವವನ್ನು ಪ್ರಸ್ತಾಪಿಸಿದ ಅವರು, ಕನ್ನಡಕ್ಕೆ ದೊರೆತ ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಭಾಷೆಯ ಸಾಹಿತ್ಯಿಕ ಶ್ರೀಮಂತಿಕೆಗೆ ಸಾಕ್ಷಿ ಎಂದು ಹೇಳಿದರು. ‘ಜಲಗಾರ’, ‘ಶೂದ್ರ’, ‘ಕುರುಕ್ಷೇತ್ರ’ ನಾಟಕಗಳ ಸಾಹಿತ್ಯಿಕ ಮೌಲ್ಯಗಳನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಸುಮಂಗಲ ಚಂದ್ರಕಾಂತ ಅಂಗಡಿ ಮಾತನಾಡಿ ‘ಅನುದಿನ ಅನುಸ್ಪಂದನ’ದಂತಹ ಕಾರ್ಯಕ್ರಮಗಳು ಜನಮನ ತಲುಪಲಿ, ಮಕ್ಕಳಲ್ಲಿ ಓದು, ಬರಹ, ಕವನ ಹಾಗೂ ಸಾಹಿತ್ಯದ ಅಭಿರುಚಿ ಬೆಳೆಯಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ 88 ವಿದ್ಯಾರ್ಥಿಗಳು ಕವನ ವಾಚನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು, ಅವರಲ್ಲಿ ಆಯ್ದ ಐದು ಕವನಗಳನ್ನು ವಾಚಿಸಲಾಯಿತು. ಸಾರ್ವಜನಿಕ ವಿಭಾಗದಲ್ಲಿ 16 ಕವನಗಳು ಸ್ಪರ್ಧೆಗೆ ಬಂದಿದ್ದು, ಆಯ್ದ ಐದು ಕವನಗಳನ್ನು ವಾಚಿಸಲಾಯಿತು. ಕಾಲೇಜು ವಿದ್ಯಾರ್ಥಿಗಳು ಸಹ ತಮ್ಮ ಕವನಗಳನ್ನು ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಕಸಾಪ ಪ್ರಮುಖರಾದ ಝಾಕೀರ ಜಂಗೂಬಾಯಿ, ಗೋಪಾಲ ಅರಿ, ಕಾಳಿದಾಸ ಬಡಿಗೇರ, ಹಾಗೂ ಇತರರು ಇದ್ದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿ ಸಿದ್ದಪ್ಪ ಬಿರಾದಾರ್ ಅವರು ಕಾರ್ಯಕ್ರಮದ ಉದ್ದೇಶ ವಿವರಿಸಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಉಪನ್ಯಾಸಕ ಶಾಂತರಾಮ್ ಚಿಬ್ಬುಲ್ಕರ್ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುರಳಿ ಕಡೆಕಾರ್‌ಗೆ ಶಾರದಾಕೃಷ್ಣ ಪ್ರಶಸ್ತಿ - 2027
ಸಾಂಸ್ಕೃತಿಕ ಕಲಾ ವೇದಿಕೆ 13ನೇ ವರ್ಷದ ಕಾರ್ಯಕ್ರಮ