ಯಲಬುರ್ಗಾ: ಈ ದೇಶದ ಸೇವೆಗೆ ಭಾರತೀಯ ಸೈನಿಕರ ಕೊಡುಗೆ ಅಪಾರವಾಗಿದೆ. ಅವರೆಲ್ಲರ ಕಠಿಣ ಪರಿಶ್ರಮದ ಹೋರಾಟದಿಂದ ನಾವೆಲ್ಲರೂ ನೆಮ್ಮದಿಯಿಂದ ಇದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದರು.
ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದ ಹತ್ತಿರ ಸೈನಿಕರು ಮತ್ತು ಮಾಜಿ ಸೈನಿಕರು ಸಂಘದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ೨೫ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರು ವೀರ ಪರಾಕ್ರಮ ತೋರಿದ್ದಾರೆ. ಸಾಕಷ್ಟು ಸೈನಿಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕೊನೆಗೆ ಜಯ ಸಾಧಿಸಿದ ಕೀರ್ತಿ ಸೈನಿಕರಿಗೆ ಸಲ್ಲುತ್ತದೆ ಎಂದರು.ನಮ್ಮ ದೇಶದ ಅವಿಭಾಜ್ಯ ಅಂಗವಾದ ಜಮ್ಮು-ಕಾಶ್ಮೀರದಲ್ಲಿನ ಕಾರ್ಗಿಲ್ ಹಾಗೂ ದ್ರಾಸ್ ಪ್ರದೇಶವನ್ನು ಪಾಕಿಸ್ಥಾನ ಸೇನಾಪಡೆಗಳು ೧೯೯೯ರಲ್ಲಿ ಆಕ್ರಮಿಸಿಕೊಂಡಿದ್ದವು. ಸಮುದ್ರ ಮಟ್ಟಕ್ಕಿಂತ ೧೭ ಸಾವಿರ ಅಡಿ ಎತ್ತರ -೩೦ ಡಿಗ್ರಿ ತಾಪಮಾನದ ಕಾರ್ಗಿಲ್ ಮೈನವಿರೇಳಿಸುವ ಅತ್ಯಂತ ದುರ್ಗಮ ಪ್ರದೇಶ. ಇಂತಹ ಅಸಾಧ್ಯ ವಾತಾವರಣದಲ್ಲಿ ೧೯೯೯ರ ಮೇ ೫ರಿಂದ ಜು. ೨೬ರ ವರೆಗೆ ಸತತ ಹೋರಾಟ ನಡೆಸಿ, ೩೦೦ ಚದರ ಕಿಲೋಮೀಟರ್‌ಗಳ ಆಕ್ರಮಿತ ಪ್ರದೇಶವನ್ನು ಮರುವಶ ಮಾಡಿಕೊಂಡರು. ಶತ್ರುಗಳನ್ನು ಹಿಮ್ಮೆಟ್ಟಿಸಿದ ನಮ್ಮ ಯೋಧರ ಶೌರ್ಯ ಮೆಚ್ಚುವಂಥದ್ದು. ಈ ಹೋರಾಟದಲ್ಲಿ ಬಲಿಯಾದ ಸೈನಿಕರ ಹೆಸರು ಅಜರಾಮರ ಎಂದರು.
ಕಾಂಗ್ರೆಸ್ ವಕ್ತಾರ ಡಾ. ಶಿವನಗೌಡ ದಾನರಡ್ಡಿ ಹಾಗೂ ಪಿಎಸ್‌ಐ ವಿಜಯಪ್ರತಾಪ ಮಾತನಾಡಿ, ಕಾರ್ಗಿಲ್ ಯುದ್ಧ ಕಠಿಣ ಮತ್ತು ಕಷ್ಟದಾಯಕವಾಗಿತ್ತು. ದೇಶದ ಸೈನಿಕರ ಶೌರ್ಯ ಅಪ್ರತಿಮವಾದುದು. ದಾಳಿ ನಡೆಸಿದ್ದ ಪಾಕ್ ಸೈನ್ಯವನ್ನು ಹಿಮ್ಮೆಟ್ಟಿಸಿ, ನಮ್ಮ ಪ್ರದೇಶವನ್ನು ಮರುವಶಕ್ಕೆ ಪಡೆದ ದಿನ ಅವಿಸ್ಮರಣೀಯ. ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಸಾರ್ವಜನಿಕರು ನೆರವು ನೀಡಿದ್ದು, ದೇಶಾಭಿಮಾನವನ್ನು ಎತ್ತಿ ತೋರಿಸುತ್ತಿದೆ ಎಂದರು.ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಶಿವನಗೌಡ ಬನ್ನಪ್ಪಗೌಡ್ರ ಹಾಗೂ ಕ್ಯಾಂಪಟನ್ ಪುಂಡಪ್ಪ ಅಡವಿಹಳ್ಳಿ ಮಾತನಾಡಿದರು. ಮಾಜಿ ಸೈನಿಕರ ಸಂಘದ ತಾಲೂಕಾಧ್ಯಕ್ಷ ಮಲ್ಲಪ್ಪ ಸರ್ವಿ, ಮಾಜಿ ಸೈನಿಕರಾದ ಶುಕಮುನಿ ತೋಟದ, ಸಂಗಪ್ಪ ಗಡಾದ, ಶ್ರೀಶೈಲ ಹಿರೇಮಠ, ಹನುಮಂತರಾವ್ ದೇಶಪಾಂಡೆ, ಬುಡ್ನೆಸಾಬ ನಾಯಕ, ಬಸವರಾಜ ಮುಧೋಳ, ಗೌಸುಸಾಬ, ದೇವರಡ್ಡಿ ಯರೆಹಂಚಿನಾಳ, ದೇವರಡ್ಡಿ ಮುಂದಲಮನಿ, ಕಲ್ಲಪ್ಪ ಯಂಬಲದ, ವೀರಣ್ಣ ರ‍್ಯಾವಣಕಿ, ಮಂಜು ಬಡಿಗೇರ, ಮಂಜುನಾಥ ಉಳ್ಳಾಗಡ್ಡಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಸಿಸಿ ಯೂನಿಟ್‌ನ ವಿದ್ಯಾರ್ಥಿಗಳು ಇದ್ದರು.