ಕಾರ್ಪೋರೇಟ್ ಜಗತ್ತಿಗೆ ಅಪೇಕ್ಷಿತ ಕೌಶಲ ಅಗತ್ಯ

KannadaprabhaNewsNetwork | Published : May 11, 2025 11:57 PM
Follow Us

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಿದ್ಯಾರ್ಥಿಗಳು ಬದಲಾಗುತ್ತಿರುವ ಕಾರ್ಪೊರೇಟ್ ಜಗತ್ತಿಗೆ ಅಗತ್ಯವಾಗಿರುವ ಕೌಶಲ್ಯಗಳನ್ನು ಒಡಮೂಡಿಸಿಕೊಂಡಾಗ ಮಾತ್ರ ಕಂಪನಿಗಳ ಆಡಳಿತ ನಿರ್ವಹಣೆ, ವ್ಯವಸ್ಥಾಪನೆ ಹಾಗೂ ಮಾರುಕಟ್ಟೆ, ಫೈನಾನ್ಸ್, ವಿಮೆ, ಸಾರಿಗೆ ಮತ್ತು ಉದ್ಯಮಶೀಲತೆ ಅಭಿವೃದ್ಧಿ, ಮಾನವ ಸಂಪನ್ಮೂಲ ನಿರ್ವಹಣೆ, ಬ್ಯಾಂಕಿಂಗ್‌ನಂತಹ ಕ್ಷೇತ್ರಗಳಲ್ಲಿ ಅರ್ಹತೆ ಪಡೆಯಲು ಸಾಧ್ಯ ಎಂದು ಫ.ಗು.ಹಳಕಟ್ಟಿ ಇಂಜನೀಯರಿಂಗ್ ಕಾಲೇಜಿನ ಮ್ಯಾನೇಜಮೆಂಟ್ ಸ್ಟಡೀಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ.ಸುಮಂಗಲಾ ಬದಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿದ್ಯಾರ್ಥಿಗಳು ಬದಲಾಗುತ್ತಿರುವ ಕಾರ್ಪೊರೇಟ್ ಜಗತ್ತಿಗೆ ಅಗತ್ಯವಾಗಿರುವ ಕೌಶಲ್ಯಗಳನ್ನು ಒಡಮೂಡಿಸಿಕೊಂಡಾಗ ಮಾತ್ರ ಕಂಪನಿಗಳ ಆಡಳಿತ ನಿರ್ವಹಣೆ, ವ್ಯವಸ್ಥಾಪನೆ ಹಾಗೂ ಮಾರುಕಟ್ಟೆ, ಫೈನಾನ್ಸ್, ವಿಮೆ, ಸಾರಿಗೆ ಮತ್ತು ಉದ್ಯಮಶೀಲತೆ ಅಭಿವೃದ್ಧಿ, ಮಾನವ ಸಂಪನ್ಮೂಲ ನಿರ್ವಹಣೆ, ಬ್ಯಾಂಕಿಂಗ್‌ನಂತಹ ಕ್ಷೇತ್ರಗಳಲ್ಲಿ ಅರ್ಹತೆ ಪಡೆಯಲು ಸಾಧ್ಯ ಎಂದು ಫ.ಗು.ಹಳಕಟ್ಟಿ ಇಂಜನೀಯರಿಂಗ್ ಕಾಲೇಜಿನ ಮ್ಯಾನೇಜಮೆಂಟ್ ಸ್ಟಡೀಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ.ಸುಮಂಗಲಾ ಬದಾಮಿ ಹೇಳಿದರು.

ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ವಿಭಾಗದಿಂದ ಆಯೋಜಿಸಿದ್ದ ಬಿ.ಕಾಂ ಮತ್ತು ಬಿ.ಬಿ.ಎ ಪದವಿ ನಂತರ ಮುಂದೇನು? ಎಂಬ ವಿಷಯ ಕುರಿತು ಆಯೋಜಿಸಿದ ವೃತ್ತಿ ಮಾರ್ಗದರ್ಶನದ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ನೀಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯಬೇಕಾದರೆ ಕೌಶಲ್ಯಗಳು ತುಂಬಾ ಅಗತ್ಯ. ಅವುಗಳಲ್ಲಿ ಕ್ರಿಯಾತ್ಮಕ ಚಿಂತನೆಯೂ ಮುಖ್ಯವಾಗಿದೆ, ವಿಭಿನ್ನವಾದ ಆಲೋಚನೆಗಳನ್ನು ಬಳಸಿಕೊಂಡು ತಮ್ಮಲ್ಲಿರುವ ಶಕ್ತಿ-ಸಾಮರ್ಥ, ಕೊರತೆ, ಅವಕಾಶಗಳು ಮತ್ತು ಮುಂದಿನ ಸವಾಲುಗಳ ಬಗ್ಗೆ ವಿಶ್ಲೇಷಣೆ ಮಾಡುತ್ತಾ ಕೊರತೆಗಳನ್ನು ಸಾಧ್ಯತೆಗಳನ್ನಾಗಿ ಪರಿವರ್ತಿಸುವ ವಿಶೇಷ ಗುಣಗಳನ್ನು ಹೊಂದಬೇಕಾಗಿದೆ. ಇವುಗಳ ಜೊತೆಗೆ ಸಂದರ್ಶನ ಕಲೆ, ಸಂವಹನ ಕೌಶಲ್ಯ, ವಾಕ್‌ ಚಾತುರ್ಯ, ಶ್ರಮ ವಿಭಜನೆ ಮತ್ತು ವೈಶಿಷ್ಟ್ಯೀಕರಣಗಳಂತಹ ಹಾಗೂ ಬಾಹ್ಯ ಕಾರ್ಪೊರೇಟ್ ಜಗತ್ತು ನಿರೀಕ್ಷಿಸುವ ಕ್ರಿಯಾಶೀಲತೆ, ಸೃಜನಶೀಲತೆ ಮತ್ತು ಕುಶಲಗಾರಿಕೆಯನ್ನು ಹೊಂದುತ್ತಾ ಕಠಿಣ ಪರಿಶ್ರಮ, ಸತತ ಅಧ್ಯಯನ, ಸಕಾರಾತ್ಮಕ ಚಿಂತನೆ ಮತ್ತು ಸಾಧಿಸಬಲ್ಲೆನೆಂಬ ದೃಢವಾದ ನಂಬಿಕೆಗಳೊಂದಿಗೆ ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಲಿದ ಎಂದು ತಿಳಿಸಿದರು.

ಬಳಿಕ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎಸ್.ಖೊದ್ನಾಪೂರ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಅಂಕ, ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಬಿ.ಕಾಂ ಪದವಿ ನಂತರ ವೃತ್ತಿಪರ ಕೋರ್ಸ್‌ ಗಳಾದ ಚಾರ್ಟರ್ಡ್‌ ಅಕೌಂಟಂಟ್, ಕಾಸ್ಟ್ ಅಕೌಂಟಂಟ್, ಕಂಪನಿ ಸೆಕ್ರೆಟರಿಶಿಪ್, ಅಡಿಟರ್, ಫೈನಾನ್ಸಿಯಲ್ ಎನಾಲಿಸಿಸ್ಟ್ ನಂತಹ ವೃತ್ತಿಪರವಾದ ಕೋರ್ಸ್‌ಗಳನ್ನು ಮಾಡಬಹುದು. ಅದೇ ರೀತಿ ಬಿ.ಬಿ.ಎ ಪದವೀಧರರಿಗೆ ಹೋಟೇಲ್, ಮಾರ್ಕೆಂಟಿಂಗ್, ಹ್ಯೂಮನ್ ರಿಸೋರ್ಸ್, ರಿಟೇಲ್ ಮತ್ತು ಪೈನಾನ್ಸಿಯಲ್ ಮ್ಯಾನೇಜಮೆಂಟ್ ರಂಗದಲ್ಲಿ ಉದ್ಯೋಗ ಮತ್ತು ಸ್ವಾವಲಂಬನೆ ಸಾಧಿಸಲು ಪೂರಕವಾದ ಕೋರ್ಸಗಳು ಲಭ್ಯವಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಐ.ಬಿ.ಪಿ.ಎಸ್, ಎಸ್.ಎಸ್.ಸಿ, ಅಕೌಂಟಂಟ್ ಆಫೀಸರ್ ಹುದ್ದೆಗಳನ್ನು ಪಡೆಯಬಹುದಾಗಿದೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ಪ್ರೊ.ಐ.ಬಿ.ಜಾಬಾ, ಪ್ರೊ.ವ್ಹಿ.ಆರ್.ಕಬಾಡೆ, ಆಶಾ ಹಜೇರಿ ಸೇರಿದಂತೆ ಇನ್ನು ಮುಂತಾದವರು ಇದ್ದರು.