ಹಿರೇಕೆರೂರು: ಈ ಮಣ್ಣಿನ ಮಕ್ಕಳು ನಿಜವಾದ ವಾರಸುದಾರರಾಗಬೇಕಾದರೆ ಮತ್ತು ಅವರ ಪರಾಕ್ರಮ, ಇತಿಹಾಸ ಒಂದಾಗಬೇಕಾದರೆ, ಹಿಂದೂಗಳು ಇದನ್ನು ಸವಾಲಾಗಿ ಪರಿಪಾಲಿಸಬೇಕು ಎಂಬುದು ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ ಎಂದು ಪ್ರಾಂತ್ಯ ವಕ್ತಾರ ರಾಮಚಂದ್ರ ಯಡಕೆ ಹೇಳಿದರು.ಪಟ್ಟಣದ ಕೆಸಿಸಿ ಬ್ಯಾಂಕ್ ಎದುರಿಗಿನ ಸಾನು ಮೈದಾನದಲ್ಲಿ ತಾಲೂಕು ಹಿಂದೂ ಸಮ್ಮೇಳನ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಂದೇ ಮಾತರಂ ಗೀತೆ ಈ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ, ವೀರಯೋಧರು ನೇಣಿಗೆ ಕೊರಳು ಒಡ್ಡುವ ಸಮಯದಲ್ಲಿ, ವಿಜಯದ ಸಂಕೇತವಾಗಿ, ಭಾರತೀಯರಲ್ಲಿ ಹೋರಾಟದ ಕಿಚ್ಚು ಹೆಚ್ಚಿಸಲು ಹಾಡಲಾಗುತ್ತಿತ್ತು. ಅಷ್ಟೇ ಏಕೆ ದೇಶದ ಮೊದಲ ಕಾಂಗ್ರೆಸ್ ಅಧಿವೇಶನದಲ್ಲಿ ಕೂಡಾ ವಂದೇ ಮಾತರಂ ಗೀತೆ ಹಾಡಲಾಗಿದೆ. ತದನಂತರ ಯಾವುದು ಒಂದು ಸಮುದಾಯವನ್ನು ಮೆಚ್ಚಿಸಲು, ಗೀತೆಯಲ್ಲಿ ಮಾತೆಯನ್ನು ಸ್ಮರಿಸುವ ಅಂಶವಿರುವುದರಿಂದ ಅದನ್ನು ಆಗಿನ ಕಾಂಗ್ರೆಸ್ ಸರ್ಕಾರ ಕಿತ್ತು ಹಾಕಲಾಯಿತು. ಈಗ ಅದನ್ನು ಈಗಿನ ಸರ್ಕಾರ ಮತ್ತೆ ಜಾರಿಗೆ ಮಾಡಲು ಹೊರಟರೆ, ಇದನ್ನು ಸಹಿಸದ ವಿರೋಧಿಗಳು ಅದೇ ಚಾಳಿಯನ್ನು ಮುಂದುವರೆಸಿದ್ದಾರೆ. ಈ ದೇಶದ ಭವಿಷ್ಯದ ವ್ಯಕ್ತಿಯನ್ನು ನಿರ್ಮಾಣ ಮಾಡುವುದು ಮನೆ, ಕಾರಣ ತಂದೆ ತಾಯಂದಿರು ದೇಶ ಭಕ್ತ ಯೋಧರನ್ನು ತಯಾರಿಸಬೇಕು ಮತ್ತು ನಾಡಿನ ಭವ್ಯ ಇತಿಹಾಸ, ನಮ್ಮ ಧರ್ಮದ ನಡೆ, ನುಡಿಗಳನ್ನು ಮಕ್ಕಳಿಗೆ ಕಲಿಸಬೇಕು. ಅವರು ಸಂಸ್ಕಾರದಿಂದ ದೊಡ್ಡವರಾಗಬೇಕೆ ಹೊರತು ಜಾತಿಯಿಂದಲ್ಲ. ನಮ್ಮಲ್ಲಿನ ಜಾತಿ ಸಂಘರ್ಷ ಕೊನೆಗಾಣಬೇಕು ಎಂದರು.ಸಾನಿಧ್ಯ ವಹಿಸಿದ್ದ ಚಿಕ್ಕೇರೂರಿನ ಗುರುಲಿಂಗ ಸ್ವಾಮೀಜಿ ಮಾತನಾಡಿ, ಹಿಂದೂ ರಾಷ್ಟ್ರದಲ್ಲಿ ಈ ದೇಶದಲ್ಲಿ ಹಿಂದೂಗಳು ಬದುಕಲು ಅವಕಾಶ ಇಲ್ಲದಂತಹ ಸ್ಥಿತಿಯನ್ನು ನಾವು ನಿರ್ಮಾಣ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಧರ್ಮವನ್ನು ಕಟ್ಟುವುದು ಬೇಡ, ಬದಲಿಗೆ ಧರ್ಮದ ಆಚರಣೆಗಳನ್ನು ಮೊದಲು ಪಾಲಿಸಿದರೆ ಸಾಕು ಧರ್ಮ ಉಳಿಯುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಹಿಂದೂ ಸಮ್ಮೇಳನ ಆಚರಣಾ ಸಮಿತಿ ಅಧ್ಯಕ್ಷ ಪ್ರಕಾಶಗೌಡ ಗೌಡರ ಮಾತನಾಡಿದರು. ಇದಕ್ಕೂ ಮುನ್ನ ಜಿ.ಬಿ. ಶಂಕರಾವ್ ವೃತ್ತದಿಂದ ಆರಂಭಗೊಂಡ ಶೋಭಾ ಯಾತ್ರೆಗೆ ರಟ್ಟೀಹಳ್ಳಿ ಕಬ್ಬಿಣ ಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ಬಿ.ಸಿ. ಪಾಟೀಲ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಈ ಶೋಭಾಯಾತ್ರೆಯಲ್ಲಿ ಭಜನೆ, ಡೊಳ್ಳು ಕುಣಿತ, ಜಾಂಜ್ ಮೇಳ, ನಂದಿಕೋಲು ಕುಣಿತ, ವೀರಗಾಸೆ, ಹಲಗೆ ಮೇಳ, ಜಗ್ಗ ಹಲಗೆ, ಮಹಿಳಾ ತಂಡದಿಂದ ಭಜನೆ, ಆಂಜನೇಯ ವೇಷ, ಸ್ತಬ್ಧ ಚಿತ್ರಗಳು, ಕುಂಭಮೇಳ ಸೇರಿದಂತೆ 30 ಮಹಾನ್ ಪುರುಷರ ಭಾವಚಿತ್ರಗಳು ಪಾಲ್ಗೊಂಡಿದ್ದು, ಜನಾಕರ್ಷಣೆ ಪಡೆದವು. ಹಿಂದೂ ಸಮಾಜೋತ್ಸವದ ಕಾರ್ಯದರ್ಶಿ ರವಿ ಖಂಡಿಬಾಗೂರ, ಖಜಾಂಚಿ ಶಿವಕುಮಾರ ತಿಪ್ಪಶೆಟ್ಟಿ, ಜಗದೀಶ ದೊಡ್ಡಗೌಡ್ರ, ಶಿವಕುಮಾರ ಪ್ಯಾಟೇರ, ವಿನಯ ಕರ್ನೂಲ್, ಲಿಂಗರಾಜ ಚಪ್ಪರದಳ್ಳಿ, ಪಾಲಾಕ್ಷಗೌಡ ಪಾಟೀಲ, ಆರ್.ಎನ್. ಗಂಗೋಳ, ರವಿಶಂಕರ ಬಾಳಿಕಾಯಿ, ಹರೀಶ ಕಲಾಲ್, ದುರಗೇಶ ತಿರಕಪ್ಪನವರ, ರುದ್ರೇಶ ಬೇತೂರ, ಅನಿಲ್ ಪಾಟೀಲ, ಮನೋಹರ ವಡ್ಡಿನನಕಟ್ಟಿ, ಸಿ.ಬಿ.ಮಾಳಗಿ, ಬಸಮ್ಮ ಅಬಲೂರ, ಮಂಜುಳಾ ಬಾಳಿಕಾಯಿ, ಗೀತಾ ದಂಡಗೀಹಳ್ಳಿ, ಪೂಜಾ ಅಂಗಡಿ, ವಿಶಾಲಾಕ್ಷಿ ಬಿಳಕಿ, ವಿಶಾಲಾಕ್ಷಿ ಹಳಕಟ್ಟಿ, ನೀಲಮ್ಮ ಸಿದ್ದಪ್ಪಗೌಡ್ರ, ಗೌರಿಬಾಯಿ ಲಮಾಣಿ ಚಂದ್ರು ತೆರದಳ್ಳಿ, ಅನಿಲ್ ಹಲವಾಗಿಲ ಹಾಗೂ ಹಿಂದು ಕಾರ್ಯಕರ್ತರು, ಸಮ್ಮೇಳನ ಆಚರಣಾ ಸಮಿತಿಯವರು ಇದ್ದರು.