- ಚಿಕ್ಕಮಗಳೂರು ಜಿಪಂನಲ್ಲಿ ‘ಕಾಳುಮೆಣಸು-ಸಾಂಬಾರು ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ-ರಫ್ತು’ ತರಬೇತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ರೈತರು ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುವ ಮೂಲಕ ಹೆಚ್ಚು ಹೆಚ್ಚು ರಫ್ತು ಮಾಡಿದಾಗ ರೈತರಿಗೆ ಹಾಗೂ ದೇಶಕ್ಕೆ ಹೆಚ್ಚಿನ ಆದಾಯ ಬರಲಿದೆ ಎಂದು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ (ಕೆಪೆಕ್) ಅಧ್ಯಕ್ಷ ಬಿ.ಎಚ್.ಹರೀಶ್ ಹೇಳಿದರು.ಕೆಪೆಕ್, ಚಿಕ್ಕಮಗಳೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ ‘ಕಾಳುಮೆಣಸು ಹಾಗೂ ಸಾಂಬಾರು ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತು’ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಎಂ.ಎನ್. ನಾಗರಾಜ್ ಮಾತನಾಡಿ, ಸಹಜವಾಗಿ ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೇ ಪರದಾಡುತ್ತಾರೆ. ಅದಕ್ಕೆ ಪರಿಹಾರ ಎನು ಎಂಬುದನ್ನು ಆಲೋಚನೆ ಮಾಡಿ ಕೆಪೆಕ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕರು ಈ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದರು.
ಕಾಣುಮೆಣಸು ಹಾಗೂ ಸಾಂಬಾರ್ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುವುದು ಹೇಗೆ, ಬೆಳೆ ಹೇಗೆ ಬೆಳೆಯುವುದು, ಸವಾಲುಗಳು ಏನು, ಎನ್ನೆಲ್ಲಾ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಅಂತಾರಾಷ್ಟ್ರೀಯ ಮಾರುಕಟ್ಟೆ ವ್ಯವಸ್ಥೆ ಹೇಗಿದೆ ಸೇರಿದಂತೆ ಮೊದಲಾದ ಸಂಗತಿಗಳ ಬಗ್ಗೆ ತಜ್ಞರು ತಾಂತ್ರಿಕ ವಿಚಾರಗಳನ್ನು ತಿಳಿಸಿಕೊಡಲಿದ್ದಾರೆ. ಮಲೆನಾಡು ಭಾಗದಲ್ಲಿ ಕಾಳು ಮೆಣಸು, ಸಾಂಬಾರ್ ಪದಾರ್ಥಗಳನ್ನು ಬೆಳೆಯುವುದಕ್ಕೆ ಸೂಕ್ತ ವಾಯುಗುಣವಿದೆ. ಈ ಸೌಲಭ್ಯ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು. - - -
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನಾ ಮಾತನಾಡಿ, ಕೆಪೆಕ್‌ನಿಂದ ಈವರೆಗೆ ಒಟ್ಟು 9 ಸಾವಿರ ಸಂಘಸಂಸ್ಥೆಗಳು ಹಾಗೂ ವೈಯಕ್ತಿಕ ಸಾಲಗಳನ್ನು ವಿತರಣೆ ಮಾಡುವ ಮೂಲಕ ಸುಮಾರು 90 ಸಾವಿರದಿಂದ 1 ಲಕ್ಷ ಉದ್ಯೋಗ ಸೃಷ್ಟಿಸುವ ಕೆಲಸ ಮಾಡಲಾಗಿದೆ. ಕೆಪೆಕ್‌ನಿಂದ 10 ಲಕ್ಷ ರು. ಸಾಲ ಪಡೆದುಕೊಂಡರೆ ಶೇ.50 ರಷ್ಟು ₹5 ಲಕ್ಷ ಸರ್ಕಾರವೇ ರಿಯಾಯಿತಿ ನೀಡಲಾಗುತ್ತದೆ. ₹15 ಲಕ್ಷವರೆಗೆ ರಿಯಾಯಿತಿ ನೀಡಲಾಗುತ್ತದೆ. ಈ ಸೌಲಭ್ಯ ಬಳಕೆ ಮಾಡಿಕೊಂಡಿ, ಉದ್ಯೋಗದಾತರಾಗಬೇಕು ಎಂದು ಹೇಳಿದರು.
- - -
ಜಿಲ್ಲಾಡಳಿತವು ಈ ರೀತಿ ತಾಂತ್ರಿಕ ಕಾರ್ಯಾಗಾರಕ್ಕೆ ಸಹಕಾರ ನೀಡಿ ನಮ್ಮೊಂದಿಗೆ ಇದ್ದಾರೆ ಎಂದರೆ ಅವರ ಸಾಮಾಜಿಕ ಕಾಳಜಿ ಅರ್ಥ ಮಾಡಿಕೊಳ್ಳಬೇಕಿದೆ. ಚಿಕ್ಕಮಗಳೂರು ರೀತಿಯಲ್ಲಿ ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಎಲ್ಲಾ ಜಿಲ್ಲೆಯ ಜನರಿಗೆ ಸಿಗಬೇಕು ಎಂದು ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ್ ಹೇಳಿದರು.
- - -
(ಬಾಕ್ಸ್) * ತಜ್ಞರಿಂದ 10 ವಿಚಾರ ಮಂಡನೆ ಅಡಕೆ ತೋಟದಲ್ಲಿ ಅಂತರ ಬೆಳೆಯಾಗಿ ಕಾಳುಮೆಣಸು ಹಾಗೂ ಕೊಯ್ಲು ಪ್ರಕ್ರಿಯೆ ಹಾಗೂ ಕೊಯ್ಲಿನ ನಂತರದ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕುರಿತು ಶಿವಮೊಗ್ಗ ಅಡಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ನಾಗರಾಜಪ್ಪ ಅಡಿವೆಪ್ಪರ್, ಕಾಳುಮೆಣಸು ಸಂಸ್ಕರಣೆ ಮತ್ತು ಮೌಲ್ಯವರ್ಧನೆ (ಆನ್‌ಲೈನ್ ಅಧಿವೇಶನ) ಕುರಿತು ಕೇರಳ ಐಐಎಸ್‌ಆರ್‌ನ ನಿರ್ದೇಶಕ ಹಾಗೂ ಪ್ರಧಾನ ವಿಜ್ಞಾನಿ ಡಾ. ಟಿ.ಜಾನ್ ಝಕಾರಿಯಾ, ಕಾಳುಮೆಣಸು ಮತ್ತು ಇತರೆ ಸಂಬಾರು ಉತ್ಪನ್ನಗಳ ರಫ್ತು ಪ್ರಕ್ರಿಯೆ- ಮೂಲಭೂತ ಅವಶ್ಯಕತೆಗಳ ಪರಿಚಯ ಬಗ್ಗೆ ಸಂಬಾರು ಮಂಡಳಿ ಉಪನಿರ್ದೇಶಕ (ನಿವೃತ್ತ) ಡಾ. ಜಿ.ಕೆ. ವಿದ್ಯಾಶಂಕರ್, ಅಡಕೆ, ತೆಂಗು, ಕಾಫಿ ಮತ್ತಿತರೆ ತಾಕುಗಳಲ್ಲಿ ಅಂತರ ಬೆಳೆಯಾಗಿ ಕಾಳುಮೆಣಸಿನ ಮಹತ್ವದ ಬಗ್ಗೆ ಭಾರತೀಯ ಸಂಬಾರು ಬೆಳೆಗಳ ಅನುಸಂಧಾನ ಸಂಸ್ಥೆಯ ಪ್ರಧಾನ ವಿಜ್ಞಾನಿ (ನಿವೃತ್ತ) ಡಾ. ಎಂ.ಎನ್.ಆರ್. ವೇಣುಗೋಪಾಲ್, ಸಂಬಾರು ಬೆಳೆಗಳಾದ ಜಾಯಿಕಾಯಿ, ಏಲಕ್ಕಿ, ಲವಂಗ, ವೆನಿಲ್ಲಾ, ಕೋಕಮ್ ಬೆಳೆಗಳ ಸಂಸ್ಕರಣೆ ಹಾಗೂ ರಫ್ತು ಸಾಮರ್ಥ್ಯದ ಬಗ್ಗೆ ಸಕಲೇಶಪುರದ ಸಂಬಾರು ಮಂಡಳಿಯ ಪ್ರಾಂತೀಯ ಕಚೇರಿಯ ಹಿರಿಯ ಕ್ಷೇತ್ರಾಧಿಕಾರಿ ಎಸ್.ಕುಮಾರ್, ಪಿಎಂಎಫ್‌ಎಂಇ ಮತ್ತಿತರೆ ಯೋಜನೆಗಳಿಂದ ಸಂಬಾರು ಬೆಳೆಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತು ಪ್ರಕ್ರಿಯೆಯಲ್ಲಿ ದೊರಕುವ ಸೌಲಭ್ಯಗಳು ಕುರಿತು ತೋಟಗಾರಿಕೆ ಉಪನಿರ್ದೇಶಕ (ಕೆಎಬಿಡಿಸಿ-ಕೆಪೆಕ್) ಟಿ.ಸಿದ್ದಲಿಂಗೇಶ್ವರ, ಸಂಬಾರು ಬೆಳೆಗಳ ರಫ್ತು ಪ್ರಕ್ರಿಯೆಯಲ್ಲಿ ಪ್ಯಾಕೇಜಿಂಗ್‌ನ ಮಹತ್ವ (ಆನ್‌ಲೈನ್) ಕುರಿತು ಎನ್‌ಐಎಫ್‌ಟಿಇಎಂ ಸಂಸ್ಥೆಯ ಪ್ರಾಧ್ಯಾಪಕ ಎಸ್.ಆನಂದ್ ಕುಮಾರ್, ಸಂಬಾರು ಬೆಳೆಗಳ ಉತ್ತೇಜನೆಗೆ ಸಂಬಾರು ಮಂಡಳಿಯಿಂದ ದೊರಕುವ ಸೌಲಭ್ಯಗಳ ಬಗ್ಗೆ ಸಕಲೇಶಪುರದ ಸಂಬಾರು ಮಂಡಳಿಯ ಪ್ರಾಂತೀಯ ಕಚೇರಿಯ ಹಿರಿಯ ಕ್ಷೇತ್ರಾಧಿಕಾರಿ ಎಸ್.ಕುಮಾರ್, ಸಂಬಾರು ಉತ್ಪನ್ನಗಳ ರಫ್ತು ಪ್ರಕ್ರಿಯೆಯಲ್ಲಿ ಇ-ಕಾಮರ್ಸ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಅವಶ್ಯಕತೆ ಬಗ್ಗೆ ಝೆಪ್ಟೋ ಹಿರಿಯ ವ್ಯವಸ್ಥಾಪಕ ಎಂ.ಎಸ್. ಜಿತೇಂದ್ರ ವಿಚಾರ ಮಂಡನೆ ಮಾಡಿದರು.ಸಂಬಾರು ಉತ್ಪನ್ನಗಳ ವ್ಯವಹಾರ ಕ್ಷೇತ್ರದ ಯಶಸ್ವಿ ಉದ್ಯಮಿ ಶಿರಸಿಯ ಕದಂಬ ಮಾರುಕಟ್ಟೆ ಸೌಹಾರ್ದ ಸಹಕಾರ ಸಂಸ್ಥೆಯ ವಿಶ್ವೇಶ್ವರ ಭಟ್ ಅವರು ಸಂವಾದ ನಡೆಸಿದರು.
- - - -ಫೋಟೋ:ಚಿಕ್ಕಮಗಳೂರಿನಲ್ಲಿ ಕೆಪೆಕ್ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ‘ಕಾಳುಮೆಣಸು ಹಾಗೂ ಸಾಂಬಾರು ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತು’ ಮಾಹಿತಿ ಕುರಿತ ಪುಸಕ್ತವನ್ನು ಬಿಡುಗಡೆ ಮಾಡಲಾಯಿತು. ಕೆಪೆಕ್ ಅಧ್ಯಕ್ಷ ಬಿ.ಎಚ್.ಹರೀಶ್, ಜಿಲ್ಲಾಧಿಕಾರಿ ನಾಗರಾಜು, ಜಿಎಂ ಸಿಇಒ ಕೀರ್ತನಾ, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಮಂಗಳ ಇದ್ದರು.