ದಾಬಸ್‍ಪೇಟೆ: ಮಳೆ ಇಲ್ಲದೆ ಬಿಸಿಲ ಬೇಗೆಗೆ ಬೆಂದಿದ್ದ ಧರೆಗೆ ಸೋಮವಾರ ಮಧ್ಯಾಹ್ನ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದು ಮಳೆ ತಂಪಾಗಿಸಿದೆ
ದಾಬಸ್‍ಪೇಟೆ: ಮಳೆ ಇಲ್ಲದೆ ಬಿಸಿಲ ಬೇಗೆಗೆ ಬೆಂದಿದ್ದ ಧರೆಗೆ ಸೋಮವಾರ ಮಧ್ಯಾಹ್ನ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದು ಮಳೆ ತಂಪಾಗಿಸಿದೆ.
ಸೋಂಪುರ ಹೋಬಳಿಯಲ್ಲಿ ಸೋಮವಾರ ಮಧ್ಯಾಹ್ನ ಗುಡುಗು ಮಿಂಚಿನ ಆರ್ಭಟದೊಂದಿಗೆ ಆರಂಭವಾದ ಮಳೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಏಕಾಏಕಿ ಸುರಿದ ಮಳೆಯಲ್ಲಿ ನೆನೆಯದಂತೆ ತಪ್ಪಿಸಿಕೊಳ್ಳಲು ಜನ ಪರದಾಡಿದರು.
ಮಳೆಗಾಗಿ ವಿಶೇಷ ಪೂಜೆ: ಈ ವರ್ಷದ ಮೊದಲ ಮಳೆಯ ಸಿಂಚನ ಜನರಲ್ಲಿ ಹರ್ಷ ತಂದಿತು. ವರ್ಷಾಂತ್ಯದಿಂದಲೂ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದರು. ಮಾವು ಸೇರಿದಂತೆ ವಿವಿಧ ಬೆಳೆಗಳಿಗೆ ನೀರಿಲ್ಲದೆ ಚಿಂತಾಕ್ರಾಂತರಾಗಿದ್ದರು. ಜಾನುವಾರುಗಳಿಗೆ ಮೇಯಲು ಮೇವಿಲ್ಲದೆ ರೈತರು ಪರದಾಡುತ್ತಿದ್ದರು. ಮಳೆಗಾಗಿ ಕೆಲವೆಡೆ ರೈತರು ವಿಶೇಷ ಪೂಜೆ ನಡೆಸಿದ್ದರು.
ರೈತರ ಹರ್ಷ:
ವಾಡಿಕೆಯಂತೆ ಯುಗಾದಿ ಹಬ್ಬದ ಹಿಂದೆ ಮುಂದೆ ಪ್ರತಿ ವರ್ಷ ಮುಂಗಾರು ಪೂರ್ವ ಮಳೆ ಬೀಳುತ್ತಿತ್ತು. ಈ ವರ್ಷ ಬಿರುಬಿಸಿಲಿನ ನಡುವೆ ಮೇ ತಿಂಗಳ ಮೂರನೇ ವಾರದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಕಳೆದ ವರ್ಷ ಇಷ್ಟೊತ್ತಿಗಾಗಲೇ ನಾಲ್ಕೈದು ಸಲ ಮಳೆಯಾಗಿತ್ತು. ತಡವಾಗಿಯಾದರೂ ಮಳೆ ಬಂದಿದ್ದು ನೆಮ್ಮದಿ ತಂದಿದೆ ಎಂದು ರೈತ ಮಂಜಪ್ಪ ಹರ್ಷ ವ್ಯಕ್ತಪಡಿಸಿದರು.
ಶಿವಗಂಗೆ ರಸ್ತೆಯಲ್ಲಿ ವೀರಸಾಗರ ರಸ್ತೆಗೆ ಹೊಂದಿಕೊಂಡಂತೆ ನಿರ್ಮಿಸಿರುವ ರಸ್ತೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲಾಗದೆ ನದಿಯಂತೆ ನಿಂತಿದ್ದು, ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ನೀರಿನಲ್ಲೇ ಹಾದು ಸಾಗಿದರು.
ವ್ಯಾಪಾರಸ್ಥರ ಪರದಾಟ:
ಸೋಮವಾರ ಮಧ್ಯಾಹ್ನದ ನಂತರ ಅನಿರೀಕ್ಷತವಾಗಿ ಮಳೆ ಬಂದ ಪರಿಣಾಮ ಬೀದಿಬದಿ ವ್ಯಾಪಾರಿಗಳು, ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಯಿತು. ಕೆಲ ತಿಂಗಳುಗಳಿಂದ ಚರಂಡಿಯಲ್ಲಿ ಬಿದ್ದಿದ್ದ ಕಸಕಡ್ಡಿ, ಪ್ಲಾಸ್ಟಿಕ್ ವಸ್ತುಗಳ ಮಳೆಯಿಂದ ತುಂಬಿದ ಚರಂಡಿ ಮುಖಾಂತರ ರಸ್ತೆಯಲ್ಲೆಲ್ಲಾ ತೇಲುತ್ತಿದ್ದವು.
ಪೋಟೋ 11 : ಮಳೆಯಿಂದ ಶಿವಗಂಗೆ ರಸ್ತೆಯಲ್ಲಿ ನೀರು ನಿಂತಿರುವುದು.
ಪೋಟೋ 12 : ಚರಂಡಿ ನೀರಿನ ಮುಖಾಂತರ ಕಸಕಡ್ಡಿ ರಸ್ತೆಯಲ್ಲೆಲ್ಲಾ ತೇಲಾಡುತ್ತಿರುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.