ಅರಸೀಕೆರೆ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿ, ಕಾಂಗ್ರೆಸ್ ಪಕ್ಷದ ಏಕೈಕ ಲಂಬಾಣಿ ಸಮಾಜದ ಶಾಸಕ ರುದ್ರಪ್ಪ ಲಮಾಣಿ ಹಾಗೂ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡಬೇಕು ಎಂದು ಲಂಬಾಣಿ ಸಮಾಜದ ಮುಖಂಡರು ಸರ್ಕಾರವನ್ನು ಆಗ್ರಹಿಸಿದರು.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಮುಖಂಡ ಹರಪನಹಳ್ಳಿ ಜಯಣ್ಣ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ರುದ್ರಪ್ಪ ಲಮಾಣಿ ಹಾಗೂ ಕೆ. ಎಂ. ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ದೊರೆಯಲಿದೆ ಎಂಬ ನಿರೀಕ್ಷೆ ಸಮಾಜದಲ್ಲಿ ಇತ್ತು. ಆದರೆ ಮೊದಲ ಹಂತದ ಸಚಿವ ಸಂಪುಟದಲ್ಲಿ ಇವರಿಬ್ಬರಿಗೂ ಅವಕಾಶ ದೊರೆಯದಿರುವುದು ಸಮುದಾಯದ ಜನರಲ್ಲಿ ನಿರಾಸೆ ಮೂಡಿಸಿದೆ ಎಂದು ಹೇಳಿದರು. ಲಂಬಾಣಿ ಸಮಾಜದ ಪ್ರಾತಿನಿಧ್ಯವನ್ನು ಪರಿಗಣಿಸಿ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಅದೇ ರೀತಿ ಜಿಲ್ಲೆಯ ಅಭಿವೃದ್ಧಿ, ಪಕ್ಷ ಸಂಘಟನೆ ಹಾಗೂ ಜನಪರ ಹೋರಾಟಗಳ ಮೂಲಕ ಗುರುತಿಸಿಕೊಂಡಿರುವ ಕೆ.ಎಂ. ಶಿವಲಿಂಗೇಗೌಡರಿಗೂ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಏಕೈಕ ಶಾಸಕರಾಗಿರುವ ಶಿವಲಿಂಗೇಗೌಡರು ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದು, ಪಕ್ಷದ ಬಲವರ್ಧನೆಗೂ ಮಹತ್ವದ ಕೊಡುಗೆ ನೀಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮವಹಿಸಿ ಸಂಘಟನೆಗೆ ಹೊಸ ಚೈತನ್ಯ ತುಂಬಿದ್ದಾರೆ. ಇಂತಹ ಅನುಭವಿ ನಾಯಕರಿಗೆ ಸಚಿವ ಸ್ಥಾನ ನೀಡುವುದು ಜಿಲ್ಲೆ ಹಾಗೂ ಪಕ್ಷ ಎರಡಕ್ಕೂ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ರುದ್ರಪ್ಪ ಲಮಾಣಿ ಅವರು ಆಡಳಿತಾತ್ಮಕ ಅನುಭವ ಹೊಂದಿದ್ದು, ಲಂಬಾಣಿ ಸಮಾಜದ ಆಶೋತ್ತರಗಳನ್ನು ಪ್ರತಿನಿಧಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದ್ದರಿಂದ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಾಮಾಜಿಕ ನ್ಯಾಯದ ಬದ್ಧತೆಯನ್ನು ಸರ್ಕಾರ ತೋರಿಸಬೇಕು ಎಂದು ಆಗ್ರಹಿಸಿದರು. ಶಿವಲಿಂಗೇಗೌಡರಿಗೆ ಸಚಿವ ಸ್ಥಾನದ ಜೊತೆಗೆ ಹಾಸನ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನೂ ನೀಡಬೇಕು ಎಂಬುದು ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾಗಿದೆ. ಅವರ ನಾಯಕತ್ವದಿಂದ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಹೇಳಿದರು.ಇದೇ ವೇಳೆ ಮಾತನಾಡಿದ ಸಾಕಿ ಮಂಜುನಾಥ್, ತಾಲೂಕಿನ 75ಕ್ಕೂ ಹೆಚ್ಚು ತಾಂಡಾಗಳ ಅಭಿವೃದ್ಧಿಗೆ ಶಾಸಕ ಶಿವಲಿಂಗೇಗೌಡರ ಕೊಡುಗೆ ಗಮನಾರ್ಹವಾಗಿದೆ. ಮೂಲಸೌಕರ್ಯ, ರಸ್ತೆ, ಕುಡಿಯುವ ನೀರು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮೂಲಕ ತಾಂಡಾಗಳಿಗೆ ಹೊಸ ರೂಪ ನೀಡಿದ್ದಾರೆ. ಲಂಬಾಣಿ ಸಮಾಜವು ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದು, ಸಮಾಜದ ಏಕೈಕ ಶಾಸಕರಾದ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಮುದಾಯದ ಭಾವನೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಲಂಬಾಣಿ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡದಿದ್ದರೆ ಅದರ ಪರಿಣಾಮ ಮುಂದಿನ ಚುನಾವಣೆಯಲ್ಲಿ ಎದುರಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಮಂಜು ನಾಯಕ್, ಸುಲೋಚನಾ ಬಾಯಿ, ನಾಗರಾಜ್ ನಾಯಕ್, ಮಂಜುಳಾಬಾಯಿ, ಗಂಗಾಧರ್ ನಾಯಕ್, ಕೃಷ್ಣ ನಾಯಕ್, ಹಿರಾನಾಯಕ್, ಪೃಥ್ವಿ ನಾಯಕ್, ಶಂಕರ್ ನಾಯಕ್, ರಾಜನಾಯಕ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.