- ಇಂದು ಹರಿಹರದಲ್ಲಿ ಬೃಹತ್ ಪ್ರತಿಭಟನೆ: ಮಾಜಿ ಶಾಸಕ ಶಿವಶಂಕರ್ ಹೇಳಿಕೆ
ಸರ್ಕಾರ ನೀಡಿರುವ ಆದೇಶಗಳತ್ತ ಗಮನಹರಿಸದೇ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ಹರಿಹರ ವಿಧಾನಸಭಾ ಕ್ಷೇತ್ರದ ಅನ್ನದಾತ, ರೈತರ ಜಮೀನುಗಳಿಗೆ ನೀರು ಹರಿಸಲು ಜಿಲ್ಲಾಧಿಕಾರಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಮುಂದಾಗಬೇಕು ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಆಗ್ರಹಿಸಿದರು.
ಬುಧವಾರ ನಗರದ ಜೆಡಿಎಸ್ ಕಾರ್ಯಾಲಯದಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಆಣೆಕಟ್ಟು ನಿರ್ಮಾಣದ ಇತಿಹಾಸವೇ ಬೇರೆ ಇದೆ. ಭದ್ರಾ ಅಣೆಕಟ್ಟನ್ನು ನಮಗಾಗಿ ನಿರ್ಮಿಸಿದ್ದು ಎಂದು ನಂಬಿರುವ ಈ ಭಾಗದ ರೈತರ ಭೂಮಿಗೆ ಇಲ್ಲಿಯವರೆಗೂ ಸಮರ್ಪಕವಾಗಿ ನೀರು ಹರಿಸಲು ಕಾಡಾ ಪ್ರಾಧಿಕಾರ ಏಕೆ ಮುಂದಾಗುತ್ತಿಲ್ಲ? ಕಾಡಾ ಪ್ರಾಧಿಕಾರ ಭದ್ರಾ ಅಚ್ಚು ಕಟ್ಟು ಪ್ರದೇಶದ ಕೊನೆಯ ಭಾಗದ ಹರಿಹರ ತಾಲೂಕಿನ ರೈತರ ಭೂಮಿಗೆ ಸಮರ್ಪಕ ನೀರು ಹರಿಸಲು ಹಿಂದೇಟು ಹಾಕುತ್ತಿರುವುದರಿಂದಲೇ ಈ ಭಾಗದ ರೈತರು ನೀರಿಗಾಗಿ ಬೀದಿಗಿಳಿದು ಹೋರಾಟ ನಡೆಸುವ ದುಸ್ಥಿತಿ ಬಂದಿದೆ ಎಂದು ಕಿಡಿಕಾರಿದರು.ಹರಿಹರ ತಾಲೂಕಿನ ರೈತರು, ಅಡಕೆ ಬೆಳೆಗಾರರು ಹಾಗೂ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಿತಾಸಕ್ತಿ ಕಾಪಾಡುವ ಬದಲು, ಕರ್ನಾಟಕ ಸರ್ಕಾರ 3 ಟಿ.ಎಂ.ಸಿ. ನೀರನ್ನು ಪ್ರಾಯೋಗಿಕವಾಗಿ ಹಿರಿಯೂರು ಭಾಗದ ಅಪ್ಪರ್ ಭದ್ರಾ ಕಾಲುವೆಗೆ ಹರಿಸಲು ಮುಂದಾಗಿರುವುದರಿಂದ ನಮ್ಮ ಭಾಗದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರ ನೀಡಿರುವ ರೈತ ವಿರೋಧಿ ನಿರ್ಧಾರಗಳ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಒಳಗೊಂಡ ಎನ್‌ಡಿಎ ಮೈತ್ರಿಕೂಟದ ವತಿಯಿಂದ 27ರಂದು ಗುರುವಾರ ಹರಿಹರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ, ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಹೊಳೆಸಿರಿಗೆರೆ ಪರಮೇಶ್ವರಗೌಡ್ರ ಮಾತನಾಡಿ, ಗುಟ್ಕಾ ನಿಷೇಧಕ್ಕೆ ಸಂಬಂಧಿಸಿದ ಸರ್ಕಾರದ ಆದೇಶದಿಂದ ಅಡಕೆ ಬೆಳೆಗಾರರ ಮೇಲೆ ಉಂಟಾಗಬಹುದಾದ ಆರ್ಥಿಕ ಪರಿಣಾಮಗಳ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜ್ಯದ ಅನೇಕ ರೈತ ಕುಟುಂಬಗಳ ಜೀವನೋಪಾಯವು ಅಡಿಕೆ ಬೆಳೆಯ ಮೇಲೆ ಅವಲಂಬಿತವಾಗಿದ್ದು, ಅಡಕೆ ಮಾರುಕಟ್ಟೆ ಮತ್ತು ಬೆಲೆಯ ಮೇಲೆ ಪರಿಣಾಮ ಬೀರುವ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಅಡಿಕೆ ಬೆಳೆಗಾರರ ಹಿತಾಸಕ್ತಿಯನ್ನು ಸರ್ಕಾರ ಪರಿಗಣಿಸಬೇಕು. ಸುಳ್ಳು ಭರವಸೆಗಳ ಮೂಲಕ ರೈತರ ದಿಕ್ಕು ತಪ್ಪಿಸಿ ಅವರನ್ನು ಬಲಿಪಶು ಮಾಡಿ, ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ನಗರಾಧ್ಯಕ್ಷ ಪ್ರೇಮಕುಮಾರ್ ಅಡಕಿ, ಯಲವಟ್ಟಿ ಗ್ರಾ.ಪಂ. ಮಾಜಿ ಅಧ್ಯಕ್ಷ ರವಿನಾಯ್ಕ, ಡಿಎಸ್‌ಎಸ್‌ನ ಶಿವರಾಮ್ ಎ.ಕೆ., ನಾಗೇನಹಳ್ಳಿ ಮಹಾಂತೇಶ್, ಅಮರಾವತಿ ಅಟೋ ಯೋಗೇಶ್, ನಗರಸಭೆ ಮಾಜಿ ಸದಸ್ಯ ದಿನೇಶ್ ಬಾಬು, ಬನ್ನಿಕೋಡು ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಎಸ್. ಬಸವರಾಜ ಅನೇಕರು ಇದ್ದರು.
-26ಎಚ್.ಆರ್.ಆರ್2: