ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿ ಜೀವಂತವಾಗಿ ಪತ್ತೆ

KannadaprabhaNewsNetwork |  
Published : Oct 29, 2024, 12:50 AM IST
ವಿದ್ಯಾರ್ಥಿನಿ ಹಂಸ | Kannada Prabha

ಸಾರಾಂಶ

ತಾಲೂಕಿನ ಮೈದಾಳ ಕೆರೆಕೋಡಿ ನೀರಿನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿ ಜೀವಂತವಾಗಿ ಪತ್ತೆಯಾಗುವ ಮೂಲಕ ಸಾವನ್ನೇ ಗೆದ್ದು ಬಂದ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ತುಮಕೂರುತಾಲೂಕಿನ ಮೈದಾಳ ಕೆರೆಕೋಡಿ ನೀರಿನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿ ಜೀವಂತವಾಗಿ ಪತ್ತೆಯಾಗುವ ಮೂಲಕ ಸಾವನ್ನೇ ಗೆದ್ದು ಬಂದ ಘಟನೆ ನಡೆದಿದೆ. ನಗರದ ಎಸ್‌ಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಗುಬ್ಬಿ ತಾಲೂಕಿನ ಶಿವರಾಂಪುರ ನಿವಾಸಿ ಹಂಸ (19) ಎಂಬಾಕೆಯೇ ಸಾವು ಗೆದ್ದು ಬಂದಿರುವ ವಿದ್ಯಾರ್ಥಿನಿ. ವಿದ್ಯಾರ್ಥಿನಿ ಹಂಸ ಗೆಳತಿಯರ ಜತೆ ಮಂದಾರಗಿರಿ ಬೆಟ್ಟದ ವೀಕ್ಷಣೆಗೆ ಭಾನುವಾರ ಮಧ್ಯಾಹ್ನ ತೆರಳಿದ್ದರು. ಅಲ್ಲೇ ಸಮೀಪದಲ್ಲಿದ್ದ ಮೈದಾಳ ಕೆರೆ ಕೋಡಿ ಬಳಿ ಹೋಗಿದ್ದಾರೆ. ಕೋಡಿ ನೀರು ಹರಿಯುವುದರಿಂದ ಖುಷಿಯಾದ ವಿದ್ಯಾರ್ಥಿನಿ ಕೋಡಿ ಬಳಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು, ಆ ಸಂದರ್ಭದಲ್ಲಿ ಕಾಲು ಜಾರಿ ಕೆಳಗೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.ಭಾನುವಾರ ಸಂಜೆ ಈ ಘಟನೆ ಸಂಭವಿಸಿದ್ದು, ಕೂಡಲೇ ಕ್ಯಾತ್ಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿಗಾಗಿ ತೀವ್ರ ಕಾರ್ಯಾಚರಣೆ ನಡೆಸಿದ್ದರು. ಸೋಮವಾರ ಬೆಳಿಗ್ಗೆ ಮತ್ತೆ ರಕ್ಷಣಾ ಕಾರ್ಯವನ್ನು ಅಗ್ನಿಶಾಮಕದಳದ ಸಿಬ್ಬಂದಿ ಕೈಗೊಂಡಾಗ ಕಲ್ಲಿನ ಪೊಟರೆಯಲ್ಲಿ ವಿದ್ಯಾರ್ಥಿನಿ ಸಿಲುಕಿಕೊಂಡಿರುವುದು ಪತ್ತೆಯಾಗಿದೆ. ಸದ್ಯ ವಿದ್ಯಾರ್ಥಿನಿ ಅಸ್ವಸ್ಥರಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸತತ 12 ಗಂಟೆಗಳ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುವ ಮೂಲಕ ವಿದ್ಯಾರ್ಥಿನಿಯನ್ನು ಜೀವಂತವಾಗಿ ರಕ್ಷಿಸಿದ್ದಾರೆ. ಅಗ್ನಿಶಾಮಕದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ. ಭಾನುವಾರ ಸಂಜೆ ಕೋಡಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿ ಹಂಸ ಇಡೀ ರಾತ್ರಿ ಕಲ್ಲಿನ ಪೊಟರೆಯಲ್ಲಿ ಕಾಲ ಕಳೆದಿದ್ದು, ಪವಾಡ ಎಂಬಂತೆ ಬದುಕುಳಿದು ಬಂದಿರುವುದು ಪೋಷಕರು ಹಾಗೂ ವಿದ್ಯಾರ್ಥಿಗಳ ಖುಷಿ ತಂದಿದೆ.ವಿದ್ಯಾರ್ಥಿನಿ ಹಂಸ ಜೀವಂತವಾಗಿರುವ ವಿಷಯ ತಿಳಿದ ಕೂಡಲೇ ಎಸ್‌ಐಟಿ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರ ವೃಂದ ಹಾಗೂ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ವಿದ್ಯಾರ್ಥಿನಿ ಹಂಸರವರನ್ನು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿದ ಸುದ್ದಿ ತಿಳಿಯುತ್ತಿದ್ದಂತೆ ಎಸ್‌ಐಟಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸ್ನೇಹಿತೆಯನ್ನು ನೋಡಲು ಆಸ್ಪತ್ರೆ ಮುಂಭಾಗ ಜಮಾಯಿಸಿದ್ದ ದೃಶ್ಯ ಕಂಡು ಬಂತು. ಬದುಕಿ ಬಂದ ಹಂಸ ಹೇಳಿದ್ದೇನು?; ಕಲ್ಲಿನ ಪೊಟರೆಯಲ್ಲಿ ಸಿಲುಕಿ ಹಾಕಿಕೊಂಡು ಇಡೀ ರಾತ್ರಿ ದೇವರು ಹಾಗೂ ನನ್ನ ತಂದೆ-ತಾಯಿಯನ್ನು ನೆನಪಿಸಿಕೊಂಡು ಧೈರ್ಯವಾಗಿದ್ದೆ. ಟಿವಿಗಳಲ್ಲಿ ಇಂತಹ ಕಾರ್ಯಾಚರಣೆ ಮಾಡುವುದನ್ನು ನೋಡಿದ್ದೆ. ಅದೇ ರೀತಿ ಇಲ್ಲೂ ಬರಬಹುದು ಎಂದುಕೊಂಡಿದ್ದೆ. ಅದೇ ರೀತಿ ಇಲ್ಲೂ ಸಹ ಬೆಳಕು ಬಂತು, ಅವರು ಕೂಗಿದ್ದು ನನಗೆ ಕೇಳಿಸಿತು. ಅದಾದ ಬಳಿಕ ನಾನು ಸಹ ಕೂಗಿದೆ. ಬಳಿಕ ಕಾರ್ಯಾಚರಣೆ ನಡೆಸಿ ನನ್ನನ್ನು ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಣೆ ಮಾಡಿದರು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ರೀತಿಯ ಸೆಲ್ಫಿ ಗೀಳಿಗೆ ಯಾರೂ ಸಹ ಮುಂದಾಗಬಾರದು ಎಂದು ಬದುಕುಳಿದ ವಿದ್ಯಾರ್ಥಿನಿ ಹಂಸ ಇತರರಿಗೆ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಂದೇ ವರ್ಷದಲ್ಲಿ ರನ್ಯಾಳಿಂದ 1.27 ಕ್ವಿಂಟಲ್‌ ಚಿನ್ನ ಸ್ಮಗ್ಲಿಂಗ್!
ತಾಂತ್ರಿಕ ಶಿಕ್ಷಣದ ಕೊರತೆ ನೀಗಿಸಲು ಶ್ರಮಿಸಿ