ಸಾಮಾನ್ಯವಾಗಿ ಅಭಿವೃದ್ಧಿ ಕಾರ್ಯಗಳು ಜನರ ಪಾಲಿಗೆ ವರದಾನವಾಗಬೇಕು. ಆದರೆ ತಾಲೂಕಿನಲ್ಲಿ ಹಾಯ್ದು ಹೋಗಿರುವ ಹರಿಹರ-ಸಮ್ಮಸಗಿ ರಾಜ್ಯ ಹೆದ್ದಾರಿಯ ತಾಲೂಕಿನ ಹಲಗೇರಿ-ಇಟಗಿ ಮಾರ್ಗ ಮಧ್ಯದಲ್ಲಿ ಸುಮಾರು 3.50 ಕಿಮೀ ರಸ್ತೆಯ ದುರಸ್ತಿ ಕಾಮಗಾರಿ ಜನರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಇದರಿಂದಾಗಿ ವಾಹನ ಸವಾರರ ಕಷ್ಟ ಅಷ್ಟಿಷ್ಟಲ್ಲ.
ಬಸವರಾಜ ಸರೂರ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು ಸಾಮಾನ್ಯವಾಗಿ ಅಭಿವೃದ್ಧಿ ಕಾರ್ಯಗಳು ಜನರ ಪಾಲಿಗೆ ವರದಾನವಾಗಬೇಕು. ಆದರೆ ತಾಲೂಕಿನಲ್ಲಿ ಹಾಯ್ದು ಹೋಗಿರುವ ಹರಿಹರ-ಸಮ್ಮಸಗಿ ರಾಜ್ಯ ಹೆದ್ದಾರಿಯ ತಾಲೂಕಿನ ಹಲಗೇರಿ-ಇಟಗಿ ಮಾರ್ಗ ಮಧ್ಯದಲ್ಲಿ ಸುಮಾರು 3.50 ಕಿಮೀ ರಸ್ತೆಯ ದುರಸ್ತಿ ಕಾಮಗಾರಿ ಜನರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಇದರಿಂದಾಗಿ ವಾಹನ ಸವಾರರ ಕಷ್ಟ ಅಷ್ಟಿಷ್ಟಲ್ಲ.ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ನಡೆಸುತ್ತಿದ್ದು, ಈಗಾಗಲೇ ಹಾವೇರಿ ಮೂಲದ ಗುತ್ತಿಗೆದಾರನಿಗೆ ₹10 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲು ಟೆಂಡರ್ ನೀಡಲಾಗಿದೆ. ಆಗಸ್ಟ್ ತಿಂಗಳಲ್ಲಿಯೇ ಟೆಂಡರ್ ನೀಡಿ 11 ತಿಂಗಳ ಅವಧಿಯಲ್ಲಿ ಕಾಮಗಾರಿ ಮುಗಿಸಬೇಕು ಎಂದು ಸೂಚನೆ ನೀಡಲಾಗಿದೆ. ಆದರೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದ ಪರಿಣಾಮ ಆ ಮಾರ್ಗದಲ್ಲಿ ಸಂಚರಿಸುವ ಬೈಕ್ ಸವಾರರು ಸೇರಿದಂತೆ ಇತರ ವಾಹನಗಳ ಪ್ರಯಾಣಿಕರು ಮೂಗಿನಲ್ಲಿ ಧೂಳು ತುಂಬಿಕೊಂಡು ಮನೆ ಸೇರಬೇಕಾದ ಪ್ರಸಂಗ ಎದುರಾಗಿದೆ. ಇನ್ನು ಕೆಲವೊಬ್ಬರು ಕಾಮಗಾರಿಗಾಗಿ ಅಗೆದ ರಸ್ತೆ ಮುಗಿದ ನಂತರ ರಸ್ತೆಯಲ್ಲಿಯೇ ನಿಂತು ಬಟ್ಟೆಯನ್ನು ಕೊಡವಿಕೊಂಡು ಬಂದ ದಾರಿಯನ್ನು ಹಿಡಿದುಕೊಂಡು ಹೋಗಬೇಕಾಗಿದೆ. ಕಾಮಗಾರಿಯಿಂದ ರೈತರ ಬೆಳೆಗಳು ಹಾಳಾಗುವ ಚಿಂತೆ ಕಾಡುತ್ತಿದೆ. ರಸ್ತೆ ಪಕ್ಕದಲ್ಲಿ ಬೆಳೆದಿರುವ ಕಡಲೆ, ಮೆಕ್ಕೆಜೋಳ, ಬಿಳಿಜೋಳ, ಸೂರ್ಯಕಾಂತಿ ಸೇರಿದಂತೆ ಇತರ ಬೆಳೆಗಳಲ್ಲಿ ಧೂಳು ಹಾರಿಕೊಂಡು ಹೋಗಿ ಬೆಳೆಗಳ ಮೇಲೆ ಕುಳಿತುಕೊಂಡು ರೋಗಬಾಧೆ ಕಾಡುವಂತಾಗಿದೆ. ಜಿಲ್ಲಾಧಿಕಾರಿಗಳ ಭೇಟಿ: ಕಾಮಗಾರಿಯಿಂದ ಅನೇಕ ತೊಂದರೆಗಳು ಎದುರಾಗುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು ಎಂದು ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದ ಪರಿಣಾಮ ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದು ಪರಿಶೀಲನೆ ನಡೆಸಿದ್ದಾರೆ.ಸ್ಥಗಿತಗೊಂಡಿರುವ ಕಾಮಗಾರಿ: ರೈತ ಸಂಘಟನೆಗಳು ನಡೆಸಿದ ಹೋರಾಟ ಹಾಗೂ ಕಾಮಗಾರಿಗೆ ಅಗತ್ಯವಾದ ಗ್ರಾವೆಲ್ (ಮೊರಂ) ದೊರೆಯದಿರುವ ಹಿನ್ನೆಲೆಯಲ್ಲಿ ಸದ್ಯ ರಸ್ತೆ ದುರಸ್ತಿ ಕಾರ್ಯ ಸ್ಥಗಿತಗೊಂಡಿದೆ. ಅಧಿಕಾರಿಗಳ ಹೇಳಿಕೆ ಪ್ರಕಾರ ಗ್ರಾವೆಲ್ ದೊರಕಿದ ನಂತರ ಬಹುಶಃ ಎರಡ್ಮೂರು ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಆಗಲಾದರೂ ಜನರಿಗೆ ಧೂಳಿನಿಂದ ಮುಕ್ತಿ ಸಿಗುವುದೇ ಕಾದು ನೋಡಬೇಕು.
ಇಟಗಿ- ಹಲಗೇರಿ ನಡುವೆ ₹10 ಕೋಟಿ ವೆಚ್ಚದಲ್ಲಿ 3.76 ಕಿಮೀ ಉದ್ದದ ರಸ್ತೆ ಕಾಮಗಾರಿ ನಡೆಸಲು ಆಗಸ್ಟ್ ತಿಂಗಳಲ್ಲಿಯೇ ಟೆಂಡರ್ ನೀಡಲಾಗಿದೆ. ಅದನ್ನು 11 ತಿಂಗಳಲ್ಲಿಯೇ ಮುಗಿಸಬೇಕು. ಆದರೆ ಗುತ್ತಿಗೆದಾರನಿಗೆ ಕಾಮಗಾರಿಗೆ ಸುತ್ತಲಿನಲ್ಲಿ ಗ್ರಾವೆಲ್ (ಮೊರಂ) ದೊರೆಯದ ಕಾರಣ ವಿಳಂಬವಾಗುತ್ತಿದೆ. ಅದಕ್ಕಾಗಿ ತಹಸೀಲ್ದಾರ್ ಪರವಾನಗಿ ಪಡೆದುಕೊಳ್ಳಬೇಕಾಗಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಲಾಗುವುದು ಲೋಕೋಪಯೋಗಿ ಇಲಾಖೆ ಸಹಾಯಕ ನಿರ್ದೇಶಕ ಮರಿಸ್ವಾಮಿ ಹೇಳಿದರು.ಹಲಗೇರಿ-ಇಟಗಿ ಮಾರ್ಗದಲ್ಲಿ ಕೈಗೊಂಡಿದ್ದ ರಸ್ತೆ ಕಾಮಗಾರಿಯಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಎದುರಿಸಬೇಕಾಗಿತ್ತು. ಕಾಮಗಾರಿ ಕಳಪೆಯಾಗಿದ್ದು, ಸುತ್ತಲಿನ ರೈತರಿಗೆ ಭಾರೀ ನಷ್ಟವಾಗಿದೆ. ಈ ಕುರಿತು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಲಾಗಿದೆ. ಸ್ಥಳಕ್ಕೂ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ರೈತ ಮುಖಂಡ ರವೀಂದ್ರಗೌಡ ಪಾಟೀಲ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.