ಇಡೀ ವಿಶ್ವವೇ ಇಂದು ಯೋಗವನ್ನು ಒಪ್ಪಿ ಅಪ್ಪಿದೆ: ಸಂಸದ ಬಿ.ವೈ. ರಾಘವೇಂದ್ರ

KannadaprabhaNewsNetwork |  
Published : Jun 22, 2025, 01:20 AM ISTUpdated : Jun 22, 2025, 10:56 AM IST
BY Raghavendra

ಸಾರಾಂಶ

ದೇಹ, ಮನಸ್ಸು, ಮತ್ತು ಆತ್ಮವನ್ನು ಸಂಯೋಜಿಸುವ ಹಾಗೂ ಮಾನವ ಪಂಚೇಂದ್ರಿಯಗಳ ಮೇಲೆ ಹಿಡಿತ ಸಾಧಿಸಲು ಸಹಕರಿಸುವ ಯೋಗವನ್ನು ಎಲ್ಲರೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಂಸದರಾದ ಬಿ.ವೈ.ರಾಘವೇಂದ್ರ ಕರೆ ನೀಡಿದರು.

  ಶಿವಮೊಗ್ಗ :  ದೇಹ, ಮನಸ್ಸು, ಮತ್ತು ಆತ್ಮವನ್ನು ಸಂಯೋಜಿಸುವ ಹಾಗೂ ಮಾನವ ಪಂಚೇಂದ್ರಿಯಗಳ ಮೇಲೆ ಹಿಡಿತ ಸಾಧಿಸಲು ಸಹಕರಿಸುವ ಯೋಗವನ್ನು ಎಲ್ಲರೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಂಸದರಾದ ಬಿ.ವೈ.ರಾಘವೇಂದ್ರ ಕರೆ ನೀಡಿದರು.

ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾ ಆಯುಷ್ ಇಲಾಖೆ, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಇವರ ಸಹಯೋಗದಲ್ಲಿ ‘ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ 11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂತರಾಷ್ಟ್ರೀಯ ಯೋಗ ದಿನಾಚರಣೆ ಘೋಷಣೆ ನಂತರ ಯೋಗವನ್ನು ಇಡೀ ಪ್ರಪಂಚ ಒಪ್ಪಿದೆ. ಈ ಜಾಗತಿಕ ಆಚರಣೆಯು ಏಕತೆ ಮತ್ತು ಸಾಮರಸ್ಯವನ್ನು ಬೆಳೆಸುತ್ತದೆ. ನಮ್ಮ ದೇಶ ವಿಶ್ವಗುರು ಆಗಬೇಕಾದರೆ ನಾವೆಲ್ಲರೂ ಆರೋಗ್ಯವಂತ ದೇಹ ಮತ್ತು ಮನಸ್ಸು ಹೊಂದುವ ಸಂಕಲ್ಪ ಮಾಡಬೇಕು.

ದೇಶಕ್ಕೆ ಸ್ವಾತಂತ್ರ‍್ಯ ಬಂದು 2047 ಕ್ಕೆ 100 ವರ್ಷ ತುಂಬಲಿದ್ದು, ಈ ವೇಳೆಗೆ ದೇಶವು ಎಲ್ಲ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಯೋಗದಿಂದ ಬದುಕು ಉತ್ತಮವಾಗಿದೆ. ಸಾವಿರಾರು ವರ್ಷಗಳಿಂದ ದೇಹ ಮತ್ತು ಮನಸ್ಸನ್ನು ಒಟ್ಟುಗೂಡಿಸುವ ಅದ್ಭುತ ಕೆಲಸವನ್ನು ಯೋಗ ಮಾಡುತ್ತಾ ಬಂದಿದೆ. ಪ್ರಸ್ತುತ 177 ದೇಶಗಳಲ್ಲಿ ಯೋಗ ಅಭ್ಯಾಸ ಮಾಡುತ್ತಿರುವುದು ಹೆಗ್ಗಳಿಕೆಯಾಗಿದೆ. ಆರೋಗ್ಯ ಚೆನ್ನಾಗಿದ್ದರೆ ಬದುಕು ಚೆನ್ನಾಗಿರುತ್ತದೆ. ಈ ನಿಟ್ಟಿನಲ್ಲಿ ಆಯುಷ್ ಇಲಾಖೆ ಜನರಿಗೆ ಅನುಕೂಲವಾಗುವಂತಹ ಯೋಗಾಭ್ಯಾಸ ಮತ್ತು ಇತರೆ ಚಟುವಟಿಕೆಗಳನ್ನು ಮಾಡುತ್ತಿದ್ದು, ಜನರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ನಮ್ಮ ದೇಶ ಯೋಗ ಸೇರಿದಂತೆ ಹಲವಾರು ಉತ್ತಮ ಕೊಡುಗೆಗಳನ್ನು ಪ್ರಪಂಚಕ್ಕೆ ನೀಡಿದೆ. ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ ನಮ್ಮದು. ಪ್ರಧಾನಿಯವರು ಇಡೀ ಜಗತ್ತಿಗೇ ಯೋಗವನ್ನು ಪರಿಚಯಿಸಿದ್ದಾರೆ.

ಯೋಗ ದೇಹ ಮತ್ತು ಮನಸ್ಸಿನ ಸಮಾಗಮವಾಗಿದ್ದು, ಇದರಿಂದ ಅನೇಕ ಆರೋಗ್ಯದ ಲಾಭಗಳಿವೆ. ಒಂದು ಗಳಿಗೆ ಸರಳ ಯೋಗ ಮಾಡಿದರೆ 150 ಕ್ಯಾಲರಿ ದಹನ ಆಗುತ್ತದೆ. ಯೋಗವು ಒಳಗಿನ ಮನಸ್ಸಿಗೆ ಸಂಸ್ಕೃತಿ ನೀಡುವ ಶಕ್ತಿ ಹೊಂದಿದೆ. ಚಿಂತೆ ಹೋಗಲಾಡಿಸುವ ಶಕ್ತಿ ಯೋಗಕ್ಕಿದೆ ಎಂದರು.

ನಿದ್ರೆ ಒಂದು ಉತ್ತಮ ಔಷಧವಾಗಿದ್ದು, ಯೋಗಾಭ್ಯಾಸ ಮಾಡಿದರೆ ಉತ್ತಮ ನಿದ್ರೆ ಬರುತ್ತದೆ. ಇದು ಸಮತೋಲನ ಹಾಗೂ ನೆನಪಿನ ಶಕ್ತಿ ಕೂಡ ವೃದ್ದಿಸುತ್ತದೆ ಜೊತೆಗೆ ಆತ್ಮ ತೃಪ್ತಿ ಸಿಗುತ್ತದೆ. ಆದ್ದರಿಂದ ಎಲ್ಲರೂ ಯೋಗಾಭ್ಯಾಸ ಮಾಡಬೇಕು ಎಂದು ಕರೆ ನೀಡಿದರು.

ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಶಾಂತ್ ಕೆಕುಡ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ಬಹುತೇಕ ರಾಷ್ಟ್ರಗಳು ಯೋಗಾಭ್ಯಾಸ ಮಾಡುತ್ತಿದ್ದು, 23 ಕೋಟಿಯಷ್ಟು ಜನ ಒಂದೇ ದಿನ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಾಮೂಹಿಕ ಯೋಗಾಭ್ಯಾಸಕ್ಕೆ ಸಂಬಂಧಿಸಿದಂತೆ ಈಗಾಗಲೇ 17 ಗಿನ್ನೆಸ್ ದಾಖಲೆ ಮಾಡಲಾಗಿದ್ದು, ಇನ್ನೊಂದು ಗಿನ್ನೆಸ್ ದಾಖಲೆಗೆ ಸನ್ನದ್ದವಾಗಿದೆ.

ಬಿಡುವಿಲ್ಲದ ಒತ್ತಡದ ಜೀವನದಲ್ಲಿ 2 ರಿಂದ 5 ನಿಮಿಷದ ಯೋಗಾಭ್ಯಾಸ ಮಾಡಲು ‘ವೈ ಬ್ರೇಕ್’ ಮೊಬೈಲ್ ಆ್ಯಪ್ ಪರಿಚಯಗೊಳಿಸಲಾಗಿದೆ. ಯೋಗ ದಿನಾಚರಣೆ ಪ್ರಯುಕ್ತ ಆಯುಷ್ ಇಲಾಖೆ 10 ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಯೋಗಕ್ಕೆ ಸಂಬಂಧಿಸಿದ ವಿವಿಧ ರೀತಿಯ ಸ್ಪರ್ಧೆ ನಡೆಸಲಾಗಿದೆ. ಜಿಲ್ಲಾದ್ಯಂತ ಯೋಗಾಭ್ಯಾಸ ಮತ್ತು ಇತರೆ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು.

ಬಾಪೂಜಿ ಆಯುರ್ವೇದಿಕ್ ಕಾಲೇಜಿನ ವಿದ್ಯಾರ್ಥಿನಿಯರು ಯೋಗ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಯೋಗ ದಿನಾಚರಣೆ ಪ್ರಯುಕ್ತ ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್.ರವಿಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಲಿಂಗರಾಜ ಎಸ್ ಹಿಂಡಸಗಟ್ಟಿ, ಕೆಎಸ್ ಆರ್ ಪಿ ಕಮಾಂಡೆಂಟ್ ಯುವಕುಮಾರ್, ಆರ್ ಎಎಫ್ ಕಮಾಂಡೆಂಡ್ ಪ್ರದೀಪ್, ಡಿಎಚ್‌ಒ ಡಾ. ನಟರಾಜ್, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ, ಇತರೆ ಅಧಿಕಾರಿ, ಸಿಬ್ಬಂದಿಗಳು, ವಿದ್ಯಾರ್ಥಿಗಳು. ಯೋಗಾಪಟುಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ