ಕನ್ನಡದ ಸತ್ವ ಪಾಶ್ಚಾತ್ಯರಿಗೆ ಪರಿಚಯಿಸಬೇಕು : ಬಾನು

KannadaprabhaNewsNetwork |  
Published : May 29, 2025, 12:15 AM ISTUpdated : May 29, 2025, 07:10 AM IST
Banu Mushtaq at Gandhi Bhavan 3 | Kannada Prabha

ಸಾರಾಂಶ

ಕನ್ನಡದಲ್ಲಿ ಬಹಳಷ್ಟು ಸತ್ವವಿದೆ. ಪಾಶ್ಚಾತ್ಯರ ಜೀವನ ಕ್ರಮವನ್ನು ನಾವು ನೋಡಿದ್ದೇವೆ. ಈಗ ಅವರು ತೆರೆದ ಮನಸ್ಸಿನಿಂದ ಇದ್ದಾರೆ. ನಮ್ಮ ಜೀವನಶೈಲಿ, ಆಲೋಚನಾ ಕ್ರಮಗಳನ್ನು ಅವರಿಗೆ ಪರಿಚಯಿಸುವ ಅವಶ್ಯಕತೆ ಇದೆ - ಬಾನು ಮುಷ್ತಾಕ್‌ 

  ಬೆಂಗಳೂರು : ಕನ್ನಡದಲ್ಲಿ ಬಹಳಷ್ಟು ಸತ್ವವಿದೆ. ಪಾಶ್ಚಾತ್ಯರ ಜೀವನ ಕ್ರಮವನ್ನು ನಾವು ನೋಡಿದ್ದೇವೆ. ಈಗ ಅವರು ತೆರೆದ ಮನಸ್ಸಿನಿಂದ ಇದ್ದಾರೆ. ನಮ್ಮ ಜೀವನಶೈಲಿ, ಆಲೋಚನಾ ಕ್ರಮಗಳನ್ನು ಅವರಿಗೆ ಪರಿಚಯಿಸುವ ಅವಶ್ಯಕತೆ ಇದೆ ಎಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ‘ಬುಕರ್‌’ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಅಭಿಪ್ರಾಯಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬಹುರೂಪಿ ಮತ್ತು ಗಾಂಧಿ ಪ್ರತಿಷ್ಠಾನದಿಂದ ಗಾಂಧಿ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

35 ಭಾಷೆಗೆ ತರ್ಜುಮೆ:

ತಮ್ಮ ಬುಕರ್‌ ಪ್ರಶಸ್ತಿ ವಿಜೇತ ಸಣ್ಣ ಕತೆಗಳ ಅನುವಾದಿತ ಸಂಕಲನ ‘ಹಾರ್ಟ್‌ ಲ್ಯಾಂಪ್‌’ ಭಾರತದ 12 ಭಾಷೆ ಸೇರಿದಂತೆ ವಿಶ್ವದ 35 ಭಾಷೆಗಳಿಗೆ ಭಾಷಾಂತರಗೊಳ್ಳಲಿದೆ. ಆಡಿಯೋ ಹಕ್ಕುಗಳನ್ನು ಪಡೆದಿದ್ದಾರೆ. ಚಲನಚಿತ್ರಗಳನ್ನು ನಿರ್ಮಿಸಲೂ ಹಕ್ಕುಗಳನ್ನು ಕೇಳುತ್ತಿದ್ದಾರೆ. ಪ್ರಕಾಶಕರಿಗೂ ಲಾಭವಾಗಿದೆ ಎಂದು ವಿವರಿಸಿದರು.

ಪ್ರಶಸ್ತಿಗೂ ಮೊದಲೇ ಪ್ರತಿಕ್ರಿಯೆ ಸಿದ್ಧ:

ಬುಕರ್‌ ಅಂದರೆ ಏನು ಎಂದು ನನಗೆ ತಿಳಿದಿರಲಿಲ್ಲ. ದೀಪಾ ಭಾಸ್ತಿ ಅವರಿಗೆ ‘ಹಸೀನಾ ಹಾಗೂ ಕತೆಗಳು’ ಕೃತಿ ನೀಡಿ ಅನುವಾದಿಸುವಂತೆ ಕೇಳಿಕೊಂಡಿದ್ದೆ. ಪ್ರಶಸ್ತಿಗೆ ಭಾಜನಾರಾಗುವುದಕ್ಕೂ ಮೊದಲೇ ನಾನು ಪ್ರಶಸ್ತಿ ಬಂದರೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎಂಬುದನ್ನು ಬರೆದು ಸಿದ್ಧ ಮಾಡಿಕೊಂಡಿದ್ದೆ. ಕನ್ನಡಕ್ಕೆ ಪ್ರಶಸ್ತಿ ಬಂದಿರುವುದು ತುಂಬಾ ಸಂತೋಷ ತಂದಿದೆ. ಕನ್ನಡಿಗರ ಪ್ರೀತಿಗೆ ಋಣಿಯಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.

ಮೂಲಭೂತವಾದಿಗಳಿಗೆ ಕಪಾಳಮೋಕ್ಷ-ಪ್ರಭಾಕರ್‌:

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಮಾತನಾಡಿ, ಬಾನು ಮುಷ್ತಾಕ್ ಅವರು ನಾಲ್ಕು ಗೋಡೆಗಳ ನಡುವೆ ಮೈಗೆ ಎಣ್ಣೆ ಹಚ್ವಿಕೊಂಡು ಸುರಕ್ಷಿತವಾಗಿ ಕುಳಿತು ಬರೆದ ಲೇಖಕಿಯಲ್ಲ. ಚಳವಳಿಗಳಲ್ಲಿ ಬೆರೆತ ಬಂಡಾಯಗಾರ್ತಿ. ಮಾನವೀಯತೆ ಮತ್ತು ಭಾರತೀಯತೆಯನ್ನು ಬೆಸೆಯುವ ನೇಕಾರರಾಗಿದ್ದು ಪ್ರಶಸ್ತಿಗೆ ಅವರು ಭಾಜನರಾಗಿದ್ದು ಬಹಳಷ್ಟು ಸಂತಸ ನೀಡಿದೆ. ಇವರಿಗೆ ಇನ್ನಷ್ಟು ಪ್ರಶಸ್ತಿಗಳು ಲಭಿಸಲಿ ಎಂದು ಹಾರೈಸಿದರು.

ಪತ್ರಕರ್ತ ಚನ್ನೇಗೌಡ, ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮಾಧ್ಯಮ ಅಕಾಡೆಮಿ‌ ಅಧ್ಯಕ್ಷೆ ಆಯೆಷಾ ಖಾನುಂ, ಬಹುರೂಪಿಯ ಜಿ.ಎನ್.ಮೋಹನ್, ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ಗಾಂಧಿ ಭವನದ ಕೋಶಾಧ್ಯಕ್ಷ ಎಚ್.ಸಿ.ದಿನೇಶ್ ಉಪಸ್ಥಿತರಿದ್ದರು.  

PREV
Read more Articles on

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್