ಸಂಭ್ರಮದ ಹಾಲಸ್ವಾಮಿ ಮಠದ ಮುಳ್ಳುಗದ್ದುಗೆ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Mar 23, 2026, 02:45 AM IST
ಹಾವೇರಿ ತಾಲೂಕು ಸುಕ್ಷೇತ್ರ ಹನುಮನಹಳ್ಳಿ ಗ್ರಾಮದಲ್ಲಿ ಹಾಲಸ್ವಾಮಿಗಳವರ ಮುಳ್ಳುಗದ್ದುಗೆ ಜಾತ್ರಾ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. | Kannada Prabha

ಸಾರಾಂಶ

ಹಾವೇರಿ ತಾಲೂಕಿನ ಸುಕ್ಷೇತ್ರ ಹನುಮನಹಳ್ಳಿ ಶ್ರೀ ಹಾಲಸ್ವಾಮಿ ಮಠದಲ್ಲಿ ಸದ್ಗುರು ಶ್ರೀ ಹಾಲಶಿವಯೋಗಿಗಳವರ ಪರಂಪರೆಯ ಮುಳ್ಳುಗದ್ದುಗೆ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.

ಹಾವೇರಿ: ತಾಲೂಕಿನ ಸುಕ್ಷೇತ್ರ ಹನುಮನಹಳ್ಳಿ ಶ್ರೀ ಹಾಲಸ್ವಾಮಿ ಮಠದಲ್ಲಿ ಸದ್ಗುರು ಶ್ರೀ ಹಾಲಶಿವಯೋಗಿಗಳವರ ಪರಂಪರೆಯ ಮುಳ್ಳುಗದ್ದುಗೆ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.

ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಜಾತ್ರಾ ಮಹೋತ್ಸವದ ಪ್ರಮುಖ ಆಚರಣೆಯಾಗಿರುವ ಮುಳ್ಳು ಗದ್ದುಗೆ ಮಹೋತ್ಸವವು ಶನಿವಾರ ರಾತ್ರಿ ಶ್ರೀ ಮಠದ ಸಣ್ಣ ಹಾಲಸ್ವಾಮಿಗಳ ನೇತೃತ್ವದಲ್ಲಿ ಅದ್ಧೂರಿಯಾಗಿ ನೆರವೇರಿತು.

ಶ್ರೀಗಳ ಮುಳ್ಳುಗದ್ದುಗೆ ಉತ್ಸವಕ್ಕೆ ಹಲಿಗೆ ಬಾರಿಸುವವರು, ಸಮ್ಮಾಳ ಕಲಾ ತಂಡದವರು, ಡೊಳ್ಳು, ಕಂಸಾಳೆ ಹಾಗೂ ಲಂಬಾಣಿ ನೃತ್ಯ ತಂಡದವರು ಸಾಥ್ ನೀಡಿ ಜಾತ್ರೆಯ ಮೆರುಗನ್ನು ಹೆಚ್ಚಿಸಿದರು. ಮಹಾಸ್ವಾಮಿಗಳು ಕಳೆದ ಒಂಭತ್ತು ದಿನಗಳ ಉಪವಾಸ ವೃತ ಆಚರಣೆ ಮಾಡಿ ಶನಿವಾರ ಬೆಳಗ್ಗೆಯಿಂದ ತಪಸ್ಸನ್ನು ಆಚರಿಸಿ ಕತೃಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.

ಯಾವುದೇ ಅಂಗವಸ್ತ್ರ ವಿನ್ಯಾಸವಿಲ್ಲದೇ, ಶ್ರೀಗಳು ಕೌಪೀನ ಬಾಳೆ ಎಲೆ ಧರಿಸಿಕೊಂಡು ರಾತ್ರಿ 11 ಗಂಟೆಯ ಸುಮಾರಿಗೆ ಮುಳ್ಳುಗದ್ದುಗೆಯನ್ನು ಏರಿದರು. ಹಾಲಸ್ವಾಮಿ ಮಠದ ಆವರಣದಿಂದ ಆರಂಭವಾದ ಮೆರವಣಿಗೆಯು ಸತತ ಎರಡು ಗಂಟೆಗಳವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೂಲ ಸ್ಥಳಕ್ಕೆ ಆಗಮಿಸಿ ವಿರಾಜಮಾನಗೊಂಡಿತು. ನೂರಾರು ವರ್ಷಗಳ ಧಾರ್ಮಿಕ ಇತಿಹಾಸ ಹೊಂದಿರುವ ರಾಂಪುರ ಹಾಲಸ್ವಾಮಿ ಮಠ, ಹೂವಿನ ಹಡಗಲಿ, ಸಂಕಧಾಳ ಪುಣ್ಯಕ್ಷೇತ್ರಗಳ ಸಂಸ್ಥಾನ ಮಠವಾದ ಹನುಮನಹಳ್ಳಿ ಗ್ರಾಮದ ಹಾಲೇಶ್ವರ ಮಠದ ಮುಳ್ಳುಗದ್ದುಗೆ ಉತ್ಸವದಲ್ಲಿ ಸ್ಥಳೀಯರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಕನವಳ್ಳಿ, ಕಾಟೇನಹಳ್ಳಿ, ಭರಡಿ, ಕೂರಗುಂದ, ಅಗಡಿ, ನೂಕಾಪುರ, ಕಂಚಾರಗಟ್ಟಿ, ಕೆಂಗೊAಡ, ಕಳ್ಳಿಹಾಳ, ತಿಮ್ಮೇನಹಳ್ಳಿ, ಬಸಾಪುರ, ಬೂದಗಟ್ಟಿ, ಬಸವನಕಟ್ಟಿ, ಸೋಮನಕಟ್ಟಿ, ಅರಬಗೊಂಡ, ಕಲ್ಲೆದೇವರ, ಹನುಮಾಪುರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮುಳ್ಳುಗದ್ದುಗೆ ಉತ್ಸವವನ್ನು ನೋಡಿ ಕಣ್ತುಂಬಿಕೊಂಡರು.ಭಕ್ತರ ನಂಬಿಕೆ: ಹನುಮನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು, ಜನಸಾಮಾನ್ಯರು ವರ್ಷಪೂರ್ತಿ ವಿವಿಧ ನೋವು, ಸಂಕಷ್ಟಗಳನ್ನು ಎದುರಿಸುತ್ತಾರೆ. ರೈತ ಬಾಂಧವರು ಅತಿವೃಷ್ಟಿ, ಬೆಳೆಹಾನಿ ಸೇರಿದಂತೆ ಪ್ರಕೃತಿ ವಿಕೋಪಗಳನ್ನು ಎದುರಿಸಿದ್ದರೆ, ಜನಸಾಮಾನ್ಯರು ಆರೋಗ್ಯ ಸೇರಿದಂತೆ ಮತ್ತಿತರ ಸಮಸ್ಯೆಗಳ ಕಷ್ಟವನ್ನು ಅನುಭವಿಸಿರುತ್ತಾರೆ. ಇವರೆಲ್ಲರನ್ನು ಖುಷಿಪಡಿಸುವ ಉದ್ದೇಶದಿಂದ ಜಾತ್ರಾ ಮಹೋತ್ಸವ ಪ್ರಯುಕ್ತ ಒಂದು ದಿನದ ಮಟ್ಟಿಗೆ ಶ್ರೀಗಳು ಮುಳ್ಳುಗದ್ದುಗೆಯನ್ನು ಏರುವ ಮೂಲಕ ರೈತರ ನೋವು ನಲಿವುಗಳಲ್ಲಿ ಭಾಗಿಯಾಗಿ ಆಯುರಾರೋಗ್ಯ, ರೈತರಿಗೆ ಒಳ್ಳೆಯ ಮಳೆ, ಬೆಳೆ ಚೆನ್ನಾಗಿಯಾಲೆಂದು ಪ್ರಾರ್ಥಿಸುತ್ತಾರೆಂಬ ನಂಬಿಕೆ ಭಕ್ತರದ್ದಾಗಿದೆ. ಉತ್ಸವದಲ್ಲಿ ಶ್ರೀಮಠದ ಸಿದ್ಧರಾಮ ಹಾಲಶಿವಯೋಗಿಗಳು, ಹಾಲ ಮುದುಕೇಶ್ವರ ಶ್ರೀಗಳು, ಹಿರೇಹಡಗಲಿ ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಶ್ರೀಗಳು, ಅಭಿನವ ಹಾಲವೀರಪ್ಪಜ್ಜ ಶ್ರೀಗಳು, ಹಾಲ ಅಭಿಷೇಕ ಸ್ವಾಮೀಜಿ, ನಾಗತಿ ಬಸಾಪೂರದ ಗಿರಿರಾಜ ಹಾಲಸ್ವಾಮಿಗಳು ಸೇರಿದಂತೆ ಹಿರೇಹಡಗಲಿ, ಸಂಕಧಾಳ, ರಾಂಪುರ, ಗುಂಡೇರಿ ಕ್ಷೇತ್ರಗಳ ವಿವಿಧ ಮಠಾಧೀಶರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.ಆಕರ್ಷಕ ಸಿಡಿಮದ್ದು ಪ್ರದರ್ಶನ: ಮುಳ್ಳುಗದ್ದುಗೆ ಜಾತ್ರಾ ಮಹೋತ್ಸವದಲ್ಲಿ ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಿತು. ತರಾವರಿ ಬಗೆಯ ಪಟಾಕಿಗಳು ಬಾನೆತ್ತರದಲ್ಲಿ ಸಿಡಿಯುತ್ತಿದ್ದು, ಜನಾಕರ್ಷಣೆಗೆ ಒಳಗಾಗಿತ್ತುö. ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತರು ಸಿಡಿಮದ್ದು ಪ್ರದರ್ಶನ ವೀಕ್ಷಣೆ ಮಾಡಿದರು.ಹಾಲಪ್ಪಜ್ಜನ ಮಹಾ ರಥೋತ್ಸವ: ಮುಳ್ಳುಗದ್ದುಗೆ ಜಾತ್ರಾ ಮಹೋತ್ಸವದ ಎರಡನೇ ದಿನವಾದ ರವಿವಾರ ಸಂಜೆ ಹಾಲಸ್ವಾಮಿ ಮಹಾರಥೋತ್ಸವ ನಡೆಯಿತು. ಶ್ರೀಮಠದ ಆವರಣದಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಆರಂಭವಾದ ರಥೋತ್ಸವಕ್ಕೆ ಸಣ್ಣ ಹಾಲಸ್ವಾಮಿಗಳು ಹಾಗೂ ಓಂಕಾರ ಹಾಲಸ್ವಾಮಿಗಳು ಚಾಲನೆ ನೀಡಿದರು. ರಥೋತ್ಸವದ ಕಳಶಕ್ಕೆ ಭಕ್ತರು ಬಾಳೆಹಣ್ಣು, ಉತ್ತತ್ತಿ, ಬೆಲ್ಲವನ್ನು ಎಸೆಯುವ ಮೂಲಕ ಭಕ್ತಿಯ ಪರಕಾಷ್ಠೆಯನ್ನು ಮೆರೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಧ್ವನಿ ಎತ್ತಿ
ಕೆರೆ ಅಭಿವೃದ್ಧಿಯಿಂದ ರೈತರಿಗೆ ಅನುಕೂಲ: ಬಸವರಾಜ ಬೊಮ್ಮಾಯಿ