-ರಥೋತ್ಸವ ಕಣ್ತುಂಬಿಕೊಂಡ ನೂರಾರು ಭಕ್ತರಿಂದ ಜಯಘೋಷ
ಕನ್ನಡಪ್ರಭ ವಾರ್ತೆ ಸಿರಿಗೆರೆ
ಭೀಮಸಮುದ್ರ ಸಮೀಪದ ಮಜುರೆಯ ಬಸವಾಪುರದ ಮಾವಿನಹಳ್ಳಿ ಶ್ರೀಗುರು ಬಸವೇಶ್ವರಸ್ವಾಮಿ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಅದ್ಧೂರಿಯಾಗಿ ನಡೆಯಿತು.ಸ್ವಾಮಿಯ ರಥವನ್ನು ಎಳೆಯುವ ಕ್ಷಣಕ್ಕಾಗಿ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಭಕ್ತರು ಕಾತರದಿಂದ ಕಾದು ಕಣ್ತುಂಬಿಕೊಂಡರು. ಚಾಲನೆ ದೊರೆಯುತ್ತಿದ್ದಂತೆ ಭಕ್ತರು ಸ್ವಾಮಿಗೆ ಜಯಘೋಷ ಕೂಗಿದರು. ಭಕ್ತರು ದೇಗುಲಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು.
ರಥಕ್ಕೆ ಬಾಳೆಹಣ್ಣನ್ನು ಎಸೆಯುವ ಮೂಲಕ ಅನೇಕರು ಭಕ್ತಿ ಸಮರ್ಪಿಸಿದರು. ರಥೋತ್ಸವದ ಅಂಗವಾಗಿ ಬಸವೇಶ್ವರ ಸ್ವಾಮಿಗೆ ಮುಂಜಾನೆ ಮಹಾ ರುದ್ರಾಭಿಷೇಕ ಸೇರಿ ಇತರೆ ಪೂಜಾ ಕೈಂಕರ್ಯ ಶಾಸ್ತ್ರೋಕ್ತವಾಗಿ ನೆರವೇರಿದವು.
ಹೂವಿನ ಹಾರ ಹರಾಜು: ರಥೋತ್ಸವಕ್ಕೂ ಮುನ್ನ ಸ್ವಾಮಿಯ ಮುಡಿಯಲ್ಲಿದ್ದ ಎರಡು ಹೂವಿನ ಹಾರಗಳನ್ನು ಹರಾಜು ನಡೆಸಲಾಯಿತು. ಹರಪನಹಳ್ಳಿಯ ಭಕ್ತರೊಬ್ಬರು ಮೊದಲ ಹಾರವನ್ನು ೧,೨೧,೦೦೧ ರೂ.ಗೆ ಹರಾಜಿನಲ್ಲಿ ಸ್ವೀಕರಿಸಿದರು. ರುದ್ರಾಕ್ಷಿ ಹಾರವು ೧,೫೧,೦೦೧ ರೂ.ಗೆ ಹರಾಜಾಯಿತು.----