ಪೌರ ಕಾರ್ಮಿಕರ ವಿಶ್ರಾಂತಿ ಗೃಹ ನಿರ್ಮಾಣ ಮುಂಡರಗಿಯಲ್ಲೇ ಮೊದಲು

KannadaprabhaNewsNetwork |  
Published : Jun 03, 2025, 01:19 AM IST
ಮುಂಡರಗಿ ಪುರಸಭೆ ವ್ಯಾಪ್ತಿಯಲ್ಲಿ ಸೋಮವಾರ ಶಾಸಕ ಡಾ. ಚಂದ್ರು ಲಮಾಣಿ ₹1.27 ಕೋಟಿಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಮುಂಡರಗಿ ಪಟ್ಟಣದಲ್ಲಿ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ದಿ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಶಾಸಕ ಡಾ. ಚಂದ್ರು ಲಮಾಣಿ ಭೂಮಿಪೂಜೆ ನೆರವೇರಿಸಿದರು. ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹ ನಿರ್ಮಿಸಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂಡರಗಿ: ಪೌರ ಕಾರ್ಮಿಕರಿಗಾಗಿ ವಿಶ್ರಾಂತಿ ಗೃಹ ನಿರ್ಮಾಣ ಮಾಡಿರುವುದು ಮುಂಡರಗಿ ಪುರಸಭೆಯಲ್ಲೇ ಮೊದಲು. ಇದುವರೆಗೂ ಯಾವುದೇ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರಿಗಾಗಿ ವಿಶ್ರಾಂತಿ ಗೃಹಗಳನ್ನು ನಿರ್ಮಾಣ ಮಾಡಿಲ್ಲ ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ದಿ ಯೋಜನೆಯಡಿ ನಗರೋತ್ಥಾನ ಹಂತ 4ರಲ್ಲಿ ವಾರ್ಡ್ ನಂ. 18ರ ರಾಮೇನಹಳ್ಳಿ ರಸ್ತೆಯ ಆಡಳಿತ ಕಚೇರಿ ಪಕ್ಕದಲ್ಲಿ ಪೌರ ಕಾರ್ಮಿಕರ ಶುಚಿತ್ವಕ್ಕಾಗಿ ಸ್ನಾನದ ಹಾಗೂ ವಿಶ್ರಾಂತಿ ಗೃಹ, ವಾರ್ಡ್ ನಂ. 9, 10, 16 ಒಳಗೊಂಡ ಸಾರ್ವಜನಿಕ ಸಮುದಾಯ ಶೌಚಾಲಯ ಹಾಗೂ ವಾರ್ಡ್ ನಂ. 23ರ ಗುರುಭವನದ ಹತ್ತಿರ ಶೌಚಾಲಯ ನಿರ್ಮಾಣ ಸೇರಿ ₹1.27 ಕೋಟಿಯ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

5 ದಿನಗಳ ಕಾಲ ಪೌರ ನೌಕರರು ಮುಷ್ಕರ ನಡೆಸಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 11 ಸಾವಿರ ಪೌರ ನೌಕರರನ್ನು ಕಾಯಂಗೊಳಿಸಲಾಗಿತ್ತು. ಈಗಲೂ ರಾಜ್ಯ ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.

ಪುರಸಭೆ ಅಧ್ಯಕ್ಷ ನಿರ್ಮಲಾ ಕೊರ್ಲಹಳ್ಳಿ ಮಾತನಾಡಿ, ಎಲ್ಲ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ, ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದರು.

ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಸರ್ಕಾರದ ಪಂಚ ಗ್ಯಾರಂಟಿಗಳಿಂದಾಗಿ ಮುಂಡರಗಿ ಪುರಸಭೆಗೆ ಈ ಬಾರಿ ಹೆಚ್ಚಿನ ಅನುದಾನ ಬಂದಿಲ್ಲ. ಕರ ವಸೂಲಾತಿಯಲ್ಲಿ ನಮ್ಮ ಪುರಸಭೆ ಜಿಲ್ಲೆಯಲ್ಲಿಯೇ ಮೊದಲನೇ ಸ್ಥಾನದಲ್ಲಿದೆ. ಆದರೂ ನಮಗೆ ವಿಶೇಷ ಅನುದಾನ ಬಂದಿಲ್ಲ ಎಂದು ಹೇಳಿದರು.

ಮುಂಡರಗಿ ಪುರಸಭೆ ಪೌರನೌಕರರಿಂದ ಅಧ್ಯಕ್ಷ ಮೈಲಪ್ಪ ದೊಡ್ಡಮನಿ ನೇತೃತ್ವದಲ್ಲಿ ಶಾಸಕರಿಗೆ ಸನ್ಮಾನ ನೆರವೇರಿಸಲಾಯಿತು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹ್ಮದರಫೀಕ್ ಮುಲ್ಲಾ, ಸದಸ್ಯರಾದ ಶಿವಪ್ಪ ಚಿಕ್ಕಣ್ಣವರ, ಪವನ್ ಮೇಟಿ, ಪ್ರಹ್ಲಾದ್ ಹೊಸಮನಿ, ಜ್ಯೋತಿ ಹಾನಗಲ್, ರಾಜಾಭಕ್ಷಿ ಬೆಟಗೇರಿ, ತಿಮ್ಮಪ್ಪ ದಂಡಿನ, ಶಿವು ಬಾರಕೇರ, ಪ್ರಕಾಶ ಹಲವಾಗಲಿ, ಕವಿತಾ ಉಳ್ಳಾಗಡ್ಡಿ, ಪುರಸಭೆ ಮುಖ್ಯಾಧಿಕಾರಿ ಶಂಕರ್ ಹುಲ್ಲಮ್ಮನವರ, ಪರಶುರಾಮ ಕರಡಿಕೊಳ್ಳ, ಮೈಲಾರಪ್ಪ ಕಲಕೇರಿ, ಪವಿತ್ರಾ ಕಲ್ಲಕುಟಗರ್, ವೀಣಾ ಬೂದಿಹಾಳ, ಶ್ರೀನಿವಾಸ ಅಬ್ಬೀಗೇರಿ, ಎ.ಕೆ. ಹಂಚಿನಾಳ, ರವೀಂದ್ರಗೌಡ ಪಾಟೀಲ, ಕೈಲಾಸ ಹಿರೇಮಠ, ಆಕಾಶ ಹಂಚಿನಾಳ, ಪ್ರಶಾಂತಗೌಡ ಗುಡದಪ್ದನವರ, ರಂಗಪ್ಪ ಕೋಳಿ, ಅಶೋಕ ಚೂರಿ, ಯಲ್ಲಪ್ಪ ಗಣಾಚಾರ ವಿನಾಯಕ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ