ಉಳ್ಳಾಲ: ಮದನಿನಗರ ಬಳಿ ಕಂಪೌಂಡ್ ವಾಲ್ ಬಿದ್ದು ನಾಲ್ವರು ಮೃತಪಟ್ಟ ಬೆನ್ನಲ್ಲೇ ಉಳ್ಳಾಲ ನಗರಸಭಗೆ ಕೌನ್ಸಿಲರ್ ಓರ್ವರು ಅಪಾಯದಂಚಿನಲ್ಲಿರುವ ಮನೆಮಂದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದ್ದರೂ ಉಳ್ಳಾಲ ನಗರಸಭೆ ಸ್ಪಂದನೆ ತೋರಿರಲಿಲ್ಲ. ಇದೀಗ ಮನೆ ಮಹಡಿ ಕುಸಿದು ಮನೆಯೊಳಗಿದ್ದ ಬಾಲಕಿ ಸೇರಿದಂತೆ ತಂದೆ ಗಾಯಗೊಂಡ ಘಟನೆ ಉಳ್ಳಾಲ ನಗರಸಭೆ ವ್ಯಾಪ್ತಿಯ ಮೇಲಂಗಡಿ ಮಸೀದಿ ಸಮೀಪ ಶುಕ್ರವಾರ ನಡೆದಿದೆ.
ಮೇಲಂಗಡಿಯಲ್ಲಿರುವ ಖತೀಜಾ ಎಂಬವರಿಗೆ ಸೇರಿದ ಹಂಚಿನ ಮನೆ ನಾದುರಸ್ತಿಯಲ್ಲಿದ್ದು, ಅವರಿಗೆ ದೃಷ್ಟಿಯ ದೋಷವಿದೆ. ಪುತ್ರ ಅಬ್ಬಾಸ್ ಅವರು ಕೂಲಿ ಕಾರ್ಮಿಕರಾಗಿದ್ದು, ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿರುವುದರಿಂದ ಮನೆಯನ್ನು ದುರಸ್ತಿಗೊಳಿಸುವಂತೆ, ಇಲ್ಲವೇ ಬದಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ವಾರ್ಡ್‌೯ ಸಂಖ್ಯೆ11/ರ ಖಮರುನ್ನೀಸಾ ನಿಝಾಮ್ ಎಂಬವರು ಜು.16ಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಈವರೆಗೂ ನಗರಸಭೆ ಪೌರಾಯುಕ್ತರು ಸ್ಪಂದಿಸಲೇ ಇಲ್ಲ ಎಂದು ಆರೋಪಿಸಲಾಗಿದೆ.