ಹೂವಿನಹಡಗಲಿ: ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುವ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.
ತಾಲೂಕಿನ ನದಿ ತೀರದ ಗ್ರಾಮಗಳ ಪ್ರಯಾಣಿಕರಿಗೆ ಸೂಕ್ತ ಬಸ್ಸಿನ ಸೌಲಭ್ಯವೇ ಇಲ್ಲದಂತಾಗಿದೆ. ಮಧ್ಯಾಹ್ನ 11.30ಕ್ಕೆ ಗುತ್ತಲದಿಂದ ಮೈಲಾರ, ಹೊಳಲು, ಶಾಕಾರ, ಹೌಂಸಿ, ಬನ್ನಿಮಟ್ಟಿ, ನಂದಿಗಾವಿ, ಬ್ಯಾಲಹುಣ್ಸಿ, ಮಕರಬ್ಬಿ, ಕೋಟಿಹಾಳು, ಅಂಗೂರು, ಹೊಸಹಳ್ಳಿ, ಮಾಗಳ, ಕೆ.ಅಯ್ಯನಹಳ್ಳಿ, ಶಿವಪುರ, ಹುಲಿಗುಡ್ಡ. ತಿಪ್ಪಾಪುರದಿಂದ ಹೂವಿನಹಡಗಲಿಗೆ ಬರುತ್ತದೆ. ಈ ಬಸ್ಸಿನಲ್ಲಿ ನಿತ್ಯ ಪ್ರಯಾಣಿಕರ ಸಂಖ್ಯೆ 120ಕ್ಕೂ ಹೆಚ್ಚು ಪ್ರಯಾಣಿಕರು ಇರುತ್ತಾರೆ. ಬಸ್ಸಿನಲ್ಲಿ ನಿಲ್ಲಲ್ಲು ಜಾಗವೇ ಇಲ್ಲದಂತಾಗಿ ಕೆಲ ಗ್ರಾಮಗಳ ಪ್ರಯಾಣಿಕರಿಗೆ ಸಂಚರಿಸಲು ಬಸ್ಸಿನ ಸೌಲಭ್ಯವೇ ಇಲ್ಲದಂತಾಗಿದೆ. ಈ ಕುರಿತು ಅನೇಕ ಬಾರಿ ಸಾರಿಗೆ ಘಟಕಾಧಿಕಾರಿ ಗಮನಕ್ಕೆ ತಂದರೂ ಬಸ್ಸಿನ ಸೌಲಭ್ಯ ಕಲ್ಪಿಸಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮಾಗಳ ಗ್ರಾಮದ ತುಂಗಭದ್ರಾ ನದಿಯಲ್ಲಿ ಯಾಂತ್ರಿಕೃತ ದೋಣಿ ಸಂಚಾರವಿದೆ. ಗದಗ ಹಾಗೂ ಶಿರಹಟ್ಟಿ ತಾಲೂಕಿನ ಜನ ಮಾಗಳಕ್ಕೆ ಬಂದು ಬಸ್ಸಿಗಾಗಿ ಕಾಯುತ್ತಿದ್ದರೂ ಬಸ್‌ಗಳ ವ್ಯವಸ್ಥೆ ಇಲ್ಲದೇ ದುಬಾರಿ ಹಣ ಕೊಟ್ಟು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.ಮಾಗಳ ಗ್ರಾಮಕ್ಕೆ ಬಸ್ಸಿನ ಸೌಲಭ್ಯಕ್ಕಾಗಿ ಅನೇಕ ಬಾರಿ ಅರ್ಜಿ ಸಲ್ಲಿಸಿದ್ದರೂ ಈವರೆಗೂ ಬಸ್ಸಿನ ಸೌಲಭ್ಯ ಇಲ್ಲದೇ ಪ್ರಯಾಣಿಕರು ರೋಸಿ ಹೋಗಿದ್ದಾರೆ. ಪುರುಷರಿಗೆ ಬಸ್ ಹತ್ತಲು ಜಾಗವೇ ಇಲ್ಲದಂತಾಗುತ್ತದೆ. ಕೂಡಲೇ ಬಸ್ಸಿನ ಸೌಲಭ್ಯ ಕಲ್ಪಿಸದಿದ್ದರೆ ಗ್ರಾಮದಲ್ಲಿ ಬಸ್ ನಿಲುಗಡೆ ಮಾಡಿ ಹೋರಾಟ ಮಾಡಬೇಕಾಗುತ್ತದೆ ಎನ್ನುತ್ತಾರೆ ಮಾಗಳ ಗ್ರಾಮಸ್ಥರು.
ಮಾಗಳ ಗ್ರಾಮಕ್ಕೆ ಬಸ್ಸಿನ ಬೇಡಿಕೆ ಇದ್ದರೆ ಅರ್ಜಿ ಸಲ್ಲಿಸಬೇಕಿದೆ. ಆ ಅರ್ಜಿಯನ್ನು ಮೇಲಧಿಕಾರಿಗಳಿಗೆ ಕಳಿಸಿ ನಂತರದಲ್ಲಿ ಅವರ ಆದೇಶ ಬಂದ ನಂತರ ಬಸ್ ಬಿಡುವಂತಹ ವ್ಯವಸ್ಥೆ ಮಾಡುತ್ತೇವೆ ಎನ್ನುತ್ತಾರೆ ಹೂವಿನಹಡಗಲಿ ಸಾರಿಗೆ ಘಟಕ ವ್ಯವಸ್ಥಾಪಕ ವೆಂಕಟಚಲಪತಿ.