ಚಿರತೆ ಸೆರೆಗೆ ಮುಂದಾದ ಅರಣ್ಯ ಇಲಾಖೆ

KannadaprabhaNewsNetwork | Published : Sep 5, 2024 12:31 AM

ಸಾರಾಂಶ

ಹನೂರು ತಾಲೂಕಿನ ಗಂಗನ ದೊಡ್ಡಿ ರೈತನ ಜಮೀನಿನಲ್ಲಿ ಚಿರತೆ ಮೇಕೆ ಬಲಿ ಪಡೆದಿದ್ದು ಚಿರತೆ ಸೆರೆ ಹಿಡಿಯಲು ಬೋನ್ ಅಳವಡಿಸಿ ಅರಣ್ಯ ಇಲಾಖೆ ಸಿಬ್ಬಂದಿ ಹಳ್ಳದಂಚಿನಲ್ಲಿ ಶೋಧನೆ ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು ಸಾಕು ಪ್ರಾಣಿಗಳನ್ನು ಬಲಿ ಪಡೆದು ರೈತರ ನಿದ್ದೆಗೆಡೆಸಿರುವ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ.

ಹನೂರು ತಾಲೂಕಿನ ಮಲೆ ಮಾದೇಶ್ವರ ವನ್ಯಜೀವಿ ವಿಭಾಗದ ಹನೂರು ಬಫರ್ ಜೋನ್ ವಲಯ ವ್ಯಾಪ್ತಿಗೆ ಬರುವ ಗಂಗನದೊಡ್ಡಿ ಗ್ರಾಮದ ಅನ್ವರ್ ಪಾಷಾ ಅವರ ಜಮೀನಿನಲ್ಲಿ ಸೋಮವಾರ ರಾತ್ರಿ ಮೇಕೆಯನ್ನು ಬಲಿಪಡೆದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ರೈತನ ಜಮೀನಿನಲ್ಲಿ ಬೋನ್ ಇಡುವ ಮೂಲಕ ನಿರಂತರ ಪ್ರಾಣಿಗಳನ್ನು ಬಲಿಪಡೆಯುತ್ತಿರುವ ಚಿರತೆಯನ್ನು ಸೆರೆ ಹಿಡಿಯಲು ಜಮೀನಿನ ಬಳಿ ಬೋನ್ ಅಳವಡಿಸಿ ಸಿಬ್ಬಂದಿಯನ್ನು ನಿಯೋಜನೆ ಮಾಡಿದೆ.

ಚಿರತೆ ಸೆರೆಗೆ ವ್ಯಾಪಕ ಶೋಧನೆ:

ಅರಣ್ಯದಂಚಿನ ರೈತರ ಜಮೀನುಗಳಲ್ಲಿ ಸಾಕು ಪ್ರಾಣಿಗಳಾದ ಮೇಕೆ ಹಾಗೂ ಕುರಿ ಮತ್ತು ಸಾಕು ನಾಯಿಗಳನ್ನು ಬಲಿ ಪಡೆಯುತ್ತಿರುವ ಚಿರತೆಯು ನಾಗಣ್ಣ ನಗರ, ಬಸಪ್ಪನ ದೊಡ್ಡಿ, ಗಂಗನ ದೊಡ್ಡಿ, ಗುಂಡಾಪುರ ಸುತ್ತಮುತ್ತಲಿನ ಉಡುತೊರೆ ಹಳ್ಳ ನೀರು ಹರಿಯುವ ಸ್ಥಳದ ತೋಟದ ಮನೆಗಳ ಮೇಲೆ ವ್ಯಾಪಕವಾಗಿ ದಾಳಿ ಮಾಡುತ್ತಿದ್ದು, 15ಕ್ಕೂ ಹೆಚ್ಚು ಸಾಕು ಪ್ರಾಣಿಗಳನ್ನು ಬಲಿ ಪಡೆದಿದೆ. ಜೊತೆಗೆ ಇಪ್ಪತ್ತಕ್ಕೂ ಹೆಚ್ಚು ಸಾಕು ನಾಯಿಗಳನ್ನು ಸಹ ಬಲಿಪಡೆದಿರುವುದರಿಂದ ಈ ಭಾಗದಲ್ಲಿ ಚಿರತೆಯ ಉಪಟಳದಿಂದ ಬೇಸತ್ತಿರುವ ರೈತರು ಅರಣ್ಯ ಇಲಾಖೆ ಅಧಿಕಾರಿಗಳು ಉಪಟಳ ನೀಡುತ್ತಿರುವ ಚಿರತೆಯನ್ನು ಸೆರೆಹಿಡಿದು ಬೇರೆ ಬಿಡಬೇಕೆಂದು ಒತ್ತಾಯಿಸಿದ್ದಾರೆ. ರೈತರಿಗೆ ಚಿರತೆ ಭಯ: ಕಳೆದ ಹಲವಾರು ತಿಂಗಳುಗಳಿಂದ ಉಡುತೊರೆ ಹಳ್ಳ ಅಂಚಿನಲ್ಲೇ ರೈತರ ಜಮೀನುಗಳಲ್ಲೇ ಕಾಣಿಸಿಕೊಳ್ಳುತ್ತಿರುವ ಚಿರತೆ ಅಲ್ಲಿನ ಕಬ್ಬು ಮತ್ತು ಜೋಳ ಇನ್ನಿತರ ಹುಲುಸಾಗಿರುವ ಬೆಳೆಗಳ ಮಧ್ಯದಲ್ಲಿ ಅಡಗಿ ಕುಳಿತು ರಾತ್ರಿ ವೇಳೆ ಸಾಕು ಪ್ರಾಣಿಗಳನ್ನು ತಿಂದು ಒತ್ತೊಯ್ಯುತ್ತಿರುವ ಬಗ್ಗೆ ಈ ಭಾಗದ ರೈತರು ದಿನನಿತ್ಯ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಭಯಭೀತರಾಗಿದ್ದು ಕೂಡಲೇ ಉಪಟಳ ನೀಡುತ್ತಿರುವ ಚಿರತೆಯನ್ನು ಅರಣ್ಯ ಅಧಿಕಾರಿಗಳು ಸೆರೆಹಿಡಿಯಬೇಕು. ಇಲ್ಲದಿದ್ದರೆ ಮನುಷ್ಯರ ಮೇಲೆ ದಾಳಿ ಮಾಡಿ ಜೀವ ಹಾನಿ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಅಧ್ಯಕ್ಷ ಅಮ್ಜಾದ್ ಖಾನ್ ಒತ್ತಾಯಿಸಿದ್ದಾರೆ.

ಅರಣ್ಯ ಸಿಬ್ಬಂದಿ ನೇಮಕ: ಉಪಟಳ ನೀಡುತ್ತಿರುವ ಚಿರತೆಯನ್ನು ಸೆರೆ ಹಿಡಿಯಲು ವಲಯ ಅರಣ್ಯ ಅಧಿಕಾರಿ ಪ್ರವೀಣ್ ಗಂಗನದೊಡ್ಡಿ ರೈತರ ಜಮೀನಿನಲ್ಲಿ ಬೋನ್ ಅಳವಡಿಸುವ ಮೂಲಕ ದಿನನಿತ್ಯ ಈ ಭಾಗದಲ್ಲಿ ಚಿರತೆ ಸೆರೆಹಿಡಿಯಲು ವ್ಯಾಪಕವಾಗಿ ಶೋಧನೆ ನಡೆಸುವ ಮೂಲಕ ಡಿಆರ್‌ಎಫ್ ವಿನಾಯಕ್ ನೇತೃತ್ವದಲ್ಲಿ ಇಟಿಎಫ್ ಸಿಬ್ಬಂದಿ, ಕ್ಯಾಂಪ್ ಸಿಬ್ಬಂದಿ ಸೇರಿದಂತೆ ಚಿರತೆ ಬೋನ್ ಅಳವಡಿಸಿ ಉಡುತೊರೆ ಹಳ್ಳ ಅಂಚಿನಲ್ಲಿ ವ್ಯಾಪಕವಾಗಿ ಚಿರತೆ ಸೆರೆಗಾಗಿ ಶೋದನೆ ನಡೆಸುತ್ತಿದ್ದಾರೆ.

ಈ ಭಾಗದಲ್ಲಿ ಚಿರತೆ ಅರಣ್ಯ ಪ್ರದೇಶದಿಂದ ಬಂದು ರೈತರ ಜಮೀನುಗಳಲ್ಲಿರುವ ಸಾಕು ಪ್ರಾಣಿಗಳನ್ನು ತಿಂದಿರುವ ಬಗ್ಗೆ ಸಿಬ್ಬಂದಿ ಈಗಾಗಲೇ ಇಲಾಖೆಗೆ ವರದಿ ಸಲ್ಲಿಸಿದ್ದಾರೆ. ಜೊತೆಗೆ ಸೆರೆ ಹಿಡಿಯಲು ರೈತನ ಜಮೀನಿನಲ್ಲಿ ಬೋನ್ ಅಳವಡಿಸಿ ಚಿರತೆಯ ಚಲನವಲನೆ ಬಗ್ಗೆ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಚಿರತೆ ಸೆರೆ ಹಿಡಿಯಲು ರೈತರು ಅಧಿಕಾರಿ, ಸಿಬ್ಬಂದಿಗೆ ಸಹಕಾರ ನೀಡಬೇಕು.ಪ್ರವೀಣ್, ವಲಯ ಅರಣ್ಯ ಅಧಿಕಾರಿ ಹನೂರು ಬಫರ್ ಜೋನ್

Share this article