ತಾಯಂದಿರ ಕೈಯಲ್ಲಿ ಪ್ರಪಂಚದ ಭವಿಷ್ಯ: ಸಾಹಿತಿ ಹನುಮಂತಗೌಡ ಗೊಲ್ಲರ

KannadaprabhaNewsNetwork |  
Published : May 19, 2025, 12:00 AM IST
18ಎಚ್‌ವಿಆರ್3 | Kannada Prabha

ಸಾರಾಂಶ

ತಾಯ್ತನದ ಶ್ರೇಷ್ಠ ಜವಾಬ್ದಾರಿಯನ್ನು ನಿಸರ್ಗ ಮಹಿಳೆಗೆ ವಹಿಸಿಕೊಟ್ಟಿದೆ. ಆದರೆ ಆಧುನಿಕ ವಿದ್ಯಾಭ್ಯಾಸ ಮತ್ತು ಯಂತ್ರ ಯುಗದ ಸೌಲಭ್ಯಗಳನ್ನು ಪಡೆದು ಸ್ವಾತಂತ್ರ‍್ಯ ಎಂದರೆ ಸ್ವೇಚ್ಚಾಚಾರ ಎನ್ನುವಂತೆ ವರ್ತಿಸುವ ಮನೋವೃತ್ತಿ ಮುಂದುವರಿದ ದೇಶಗಳಲ್ಲಿ ಬೆಳೆಯುತ್ತಿದೆ.

ಹಾವೇರಿ: ಯಾವಾಗ ತಾಯಿ ಸಂತೋಷವಾಗಿರುತ್ತಾಳೋ ಆಗ ಕುಟುಂಬ ಆನಂದಮಯವಾಗಿರುತ್ತದೆ. ಯಾವಾಗ ಕುಟುಂಬ ಸಂತೋಷವಾಗಿರುತ್ತದೆಯೋ ಆಗ ಇಡೀ ರಾಷ್ಟ್ರವೇ ಆನಂದವಾಗಿರುತ್ತದೆ. ತಾಯಂದಿರ ಕೈಯಲ್ಲಿ ಪ್ರಪಂಚದ ಭವಿಷ್ಯವಿದೆ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ತಿಳಿಸಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರ ಬಾಲಕಿಯರ ವಸತಿನಿಲಯದ ಸಭಾಭವನದಲ್ಲಿ ಭಾನುವಾರ ತಾಯಿ ಸೇವಾ ಫೌಂಡೇಶನ್ ಏರ್ಪಡಿಸಿದ್ದ ಮಾತೃ ದಿನೋತ್ಸವ, ಮಾತೆಯರ ಸನ್ಮಾನ ಹಾಗೂ ಪ್ರಬಂಧ ಸ್ಪರ್ಧೆ ವಿಜೇತರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.ತಾಯ್ತನದ ಶ್ರೇಷ್ಠ ಜವಾಬ್ದಾರಿಯನ್ನು ನಿಸರ್ಗ ಮಹಿಳೆಗೆ ವಹಿಸಿಕೊಟ್ಟಿದೆ. ಆದರೆ ಆಧುನಿಕ ವಿದ್ಯಾಭ್ಯಾಸ ಮತ್ತು ಯಂತ್ರ ಯುಗದ ಸೌಲಭ್ಯಗಳನ್ನು ಪಡೆದು ಸ್ವಾತಂತ್ರ‍್ಯ ಎಂದರೆ ಸ್ವೇಚ್ಚಾಚಾರ ಎನ್ನುವಂತೆ ವರ್ತಿಸುವ ಮನೋವೃತ್ತಿ ಮುಂದುವರಿದ ದೇಶಗಳಲ್ಲಿ ಬೆಳೆಯುತ್ತಿದೆ. ಸ್ತ್ರೀ ಸ್ವಾತಂತ್ರ‍್ಯ ಇದು ಕ್ರಮೇಣ ತಾಯ್ತನದ ಆದರ್ಶಕ್ಕೆ ಮಾರಕವಾಗುತ್ತದೆ. ಅಮ್ಮ ಎಂಬ ಶಬ್ದಕ್ಕೂ ಪಾಶ್ಚಿಮಾತ್ಯ ಸಂಸ್ಕೃತಿಯ ಮಮ್ಮಿ ಎಂಬ ಶಬ್ದಕ್ಕೂ ಬಹಳ ವ್ಯತ್ಯಾಸವಿದೆ. ಅಮ್ಮ ಎಂಬುದು ಒಂದು ಶಬ್ದವಲ್ಲ, ಅದೊಂದು ಸಂಸ್ಕಾರ. ತಾಯಿ ಜನ್ಮ ಜೀವನ ಕೊಟ್ಟು ಮಣ್ಣಲ್ಲಿ ಮಣ್ಣಾಗುವವರೆಗೂ ನಮ್ಮ ಸಂಬಂಧ ಹೊಂದಿರುತ್ತಾರೆ. ಹಸಿದವರಿಗೆ ಉಣಿಸಿ ತಾನು ಮಾತ್ರ ಉಪವಾಸವಿದ್ದರೂ ಆನಂದ ಪಡುತ್ತಾಳೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಗಾಂಧಿಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ಮೀನಾಕ್ಷಿ ಯಾದಗುಡಿ ಮಾತನಾಡಿ, ತಾಯಿ ಇಲ್ಲದ ಜನ್ಮವಿಲ್ಲ, ಮಹಿಳೆ ಇಲ್ಲದ ಮನೆ ಇಲ್ಲ. ಅವಳಿಲ್ಲದ ಜಗವನ್ನು ಊಹಿಸಲು ಸಾಧ್ಯವಿಲ್ಲ. ಅವಳ ಪಾತ್ರವನ್ನು ನಿಭಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಪ್ರೀತಿ, ಪ್ರೇಮ, ಸಹನೆ ವಾತ್ಸಲ್ಯ, ತ್ಯಾಗ, ಕ್ಷಮೆ ಮುಂತಾದ ಗುಣಗಳಿರುವುದು ತಾಯಿಯ ಪವಿತ್ರ ಹೃದಯ ಮಂದಿರದಲ್ಲಿ ಮಾತ್ರ. ತನಗಾಗಿ ಏನನ್ನು ಅಪೇಕ್ಷೆ ಪಡದೆ ನಿಸ್ವಾರ್ಥ ಭಾವನೆಯಿಂದ ಮನುಕುಲದ ಉದ್ಧಾರಕ್ಕಾಗಿ ದುಡಿಯುವಳು ಅವಳು ಮನುಕುಲದ ದೇವತೆ, ಶತ ಶತಮಾನದಿಂದಲೂ ಮನುಜ ಕುಲವನ್ನು, ಶ್ರೇಷ್ಠ ಪರಂಪರೆಯನ್ನು ಹೊತ್ತು ತಂದಿರುವಳು. ಎಲ್ಲೇ ಇರಿ, ತಾಯಿ ಬಗ್ಗೆ ಹೃದಯ ಮಿಡಿಯುತ್ತಿರಲಿ. ಹತ್ತಿರವೋ ದೂರವೋ ನಿರ್ಲಕ್ಷಿಸುವುದು ಬೇಡ. ಅಭಿಮಾನ ತೋರಿಸಿ, ಪ್ರೀತಿ ವಿಶ್ವಾಸ ವ್ಯಕ್ತಗೊಳಿಸಿದರೆ ಅದೇ ನಾವು ತಾಯಿಗೆ ಸಲ್ಲಿಸುವ ದೊಡ್ಡ ಸೇವೆ ಎಂದರು. ವಸತಿನಿಲಯದ ಅಡುಗೆಯವರಾದ ನೀಲಮ್ಮ ಅರ್ಚಕ, ಪ್ರೇಮವ್ವ ಮುದುಕಣ್ಣನವರ, ಚೆನ್ನಮ್ಮ ಅರ್ಚಕ ಹಾಗೂ ಸುಜಾತ ಮುಳಗುಂದ ಹಾಗೂ ನನ್ನ ತಾಯಿ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಐಶ್ವರ್ಯ ತಿಮ್ಮಣ್ಣನವರ, ಗಿರಿಜಾ ಲಂಬಾಣಿ, ಅನಿತಾ ಸಂಗಣ್ಣನವರ, ಕವಿತಾ ಲಮಾಣಿ ಅವರನ್ನು ಶಾಲು ಹೊದಿಸಿ ಪ್ರಶಸ್ತಿ ಪತ್ರ ನೀಡಿ ಫೌಂಡೇಶನ್ ಗೌರವ ಸಲಹೆಗಾರ ಹೇಮಗಿರಿಗೌಡ ಗೊಲ್ಲರ ಹಾಗೂ ಸಹ ಕಾರ್ಯದರ್ಶಿ ಭಾರತಿ ರಾಕೇಶ್ ಗೌರವಿಸಿದರು.ಗೀತಾ, ಸುಮಿತ್ರ ಪ್ರಾರ್ಥಿಸಿದರು. ವಿಶ್ರುತ್ ಎಲ್.ಜಿ. ನಿರೂಪಿಸಿದರು. ಲಲಿತಾ ಲಮಾಣಿ ವಂದಿಸಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?