ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಊರ ಹೊರವಲಯದಲ್ಲಿ ನಿರ್ಮಿಸಿದ್ದ ಆಕರ್ಷಕ ರಥಕ್ಕೆ ಕೆಂಪು, ಬಿಳಿ ಸೇರಿದಂತೆ ವಿವಿಧ ಬಣ್ಣಗಳ ಬಾವುಟ ಹಾಗೂ ಹಲವು ದೇವಾನುದೇವತೆಗಳ ಭಾವಚಿತ್ರ ಅಳವಡಿಕೆಯ ಜತೆಗೆ, ಬಾಳೆದಿಂಡು, ಮಾವಿನ ತೋರಣ ಹಾಗೂ ಪುಷ್ಪ ಮಾಲೆಯೊಂದಿಗೆ ಅಲಂಕರಿಸಲಾಗಿತ್ತು.
ಮಠದ ಪೀಠಾಧಿಪತಿ ಪಟ್ಟದ ಚಿನ್ಮಯ ಸ್ವಾಮೀಜಿ ನೇತೃತ್ವದಲ್ಲಿ ಬಿರುದಾವಳಿ ಮೂಲಕ ಸಕಲ ವಾದ್ಯತಂಡಗಳ ಭಾಜ -ಭಜಂತ್ರಿಯೊಂದಿಗೆ ಕೊಟ್ಟೂರೇಶ್ವರ ದೇವಸ್ಥಾನಕ್ಕೆ ಆಗಮಿಸಿತು. ವಿಶೇಷ ಪೂಜೆ ಸಲ್ಲಿಸಿ ನಂತರ ದೇಗುಲದಲ್ಲಿನ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿಕೊಂಡು ಮೆರವಣಿಗೆ ಹೊರಟಿತು.ರಥವನ್ನು ಐದು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಗೋಣಿಬಸವೇಶ್ವರರ ಪಟ(ಧ್ವಜ)ವನ್ನು ಬಹಿರಂಗ ಹರಾಜು ಮಾಡಲಾಯಿತು. ಯು.ಬೇವಿನಹಳ್ಳಿಯ ಪಕ್ಕಿರಪ್ಪ ₹401001ಕ್ಕೆ ಪಟವನ್ನು ಪಡೆದರು. ಕೊಟ್ಟೂರೇಶ್ವರ ಉತ್ಸವ ಮೂರ್ತಿಯನ್ನು ರಥಮಂಟಪದಲ್ಲಿ ಪ್ರತಿಷ್ಠಾಪಿಸುವ ಮೂಲಕ ಅರ್ಚಕರು ಮಹಾ ಮಂಗಳಾರತಿ ನೆರವೇರಿಸುತ್ತಿದ್ದಂತಿಯೇ ಭರ್ಜರಿ ಜಯಘೋಷಗಳ ನಡುವೆ ರಥೋತ್ಸವಕ್ಕೆ ಉತ್ತರಾಭಿಮುಖವಾಗಿ ಚಾಲನೆ ನೀಡಲಾಯಿತು.
ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ, ಗ್ರಾಪಂ ಅಧ್ಯಕ್ಷೆ ಕೆಂಚಮ್ಮ, ಉಪಾದ್ಯಕ್ಷೆ ತಳವಾರ ಚಂದ್ರಮ್ಮ, ಅಭಿವೃದ್ಧಿ ಅಧಿಕಾರಿ ಯಮುನಾನಾಯ್ಕ, ಗ್ರಾಪಂ ಸದಸ್ಯರು, ಡಿವೈಎಸ್ಪಿ ವೆಂಕಟಪ್ಪನಾಯಕ, ಸಿಪಿಐ ನಾಗರಾಜ ಎಂ. ಕಮ್ಮಾರ, ಪಿಎಸ್ಐಗಳಾದ ಶಂಭುಲಿಂಗ ಹಿರೇಮಠ, ರಂಗಯ್ಯ, ಕಿರಣಕುಮಾರ ಇತರರು ಇದ್ದರು.