ಕುವೆಂಪು ಸ್ಮರಣೆ ಕಾರ್ಯಕ್ರಮದಲ್ಲಿ ಸಿ.ಎಂ. ನರಸಿಂಹಮೂರ್ತಿ
ಕನ್ನಡ ಸಾಹಿತ್ಯದ ಮೂಲಕ ಕನ್ನಡ ನಾಡು ನುಡಿ ಮತ್ತು ವ್ಯಕ್ತಿಯ ಬೌದ್ಧಿಕ ಬೆಳವಣಿಗೆಗೆ ದೊಡ್ಡ ಕಾಣಿಕೆ ನೀಡಿ ಕನ್ನಡ ಸಾಹಿತ್ಯಕ್ಕೆ ವಿಶ್ವಮಾನ್ಯತೆ ತಂದುಕೊಟ್ಟ ಕವಿ ಕುವೆಂಪು ಅವರಿಗೆ ಭಾರತ ಸರ್ಕಾರವು ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಕರ್ನಾಟಕ ಅಕಾಡೆಮಿ ಮಾಜಿ ಸದಸ್ಯ ಸಿ.ಎಂ. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ಶುಕ್ರವಾರ ಜ್ಯೋತಿಗೌಡನಪುರದ ಸ್ವರ ಸಿಂಚನ ಸಾಂಸ್ಕೃತಿಕ ಕಲಾಸಂಘ ಹಾಗೂ ಸೇವಾ ಭಾರತಿ ಪಬ್ಲಿಕ್ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾಡಗೀತೆಗೆ ನೂರರ ಸಂಭ್ರಮ ಹಾಗೂ ರಾಷ್ಟ್ರಕವಿ ಕುವೆಂಪು ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶ್ರೀ ರಾಮಾಯಣ ದರ್ಶನಂ, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಕೃತಿಗಳನ್ನು ರಚಿಸಿದ ಕುವೆಂಪು 20ನೆಯ ಶತಮಾನದ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ ಯುಗದ ಕವಿ ಜಗದ ಕವಿ ಎನಿಸಿಕೊಂಡ ಕುವೆಂಪು ಅವರು, ಮಕ್ಕಳ ಸಾಹಿತ್ಯದಿಂದ ಮಹಾ ಕಾವ್ಯದವರೆಗೆ ಅನೇಕ ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ನಾಡಿಗೆ ನಾಡಗೀತೆ ಮತ್ತು ರೈತ ಗೀತೆಯನ್ನು ಕೊಟ್ಟ ಅಗ್ರಮಾನ್ಯ ಕವಿಯಾಗಿದ್ದಾರೆ ಎಂದು ಬಣ್ಣಿಸಿದರು.
ಸಹಾಯಕ ಪ್ರಾಧ್ಯಾಪಕ ಬಸವಣ್ಣ ಮೂಕಹಳ್ಳಿ ಮಾತನಾಡಿ, ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದ ಏಕೈಕ ಕವಿ ಕುವೆಂಪು.ಕನ್ನಡ ನಾಡಿಗೆ ಮೊದಲ ಜ್ಞಾನಪೀಠ ತಂದುಕೊಟ್ಟವರು. ಕನ್ನಡ ನಾಡಿನಲ್ಲಿ ಕನ್ನಡಿಗರ ಬದುಕು ಹಸನಾಗಲಿಕ್ಕೆ ಅವರು ನೀಡಿರುವ ವಿಶ್ವ ಮಾನವ ಸಂದೇಶ ಮಹತ್ವದ ಮೈಲಿಗಲ್ಲಾಗಿದೆ ಎಂದು ಹೇಳಿದರು.ಸೇವಾ ಭಾರತಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ರಾಧಿಕಾ ಗುಪ್ತ ಮಾತಾಜಿ ಅಧ್ಯಕ್ಷತೆ ವಹಿಸಿದ್ದರು.ಸ್ವರ ಸಿಂಚನ ಸಾಂಸ್ಕೃತಿಕ ಕಲಾಸಂಘದ ಅಧ್ಯಕ್ಷ ಜೆ.ಬಿ ಮಹೇಶ್ ಸ್ವಾಗತಿಸಿ ನಿರೂಪಿಸಿದರು. ಸೇವಾ ಭಾರತಿ ಪಬ್ಲಿಕ್ ಶಾಲೆಯ ಮಕ್ಕಳು ನಾಡಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.