ಸರ್ಕಾರ ರೈತರ ನೆರವಿಗೆ ಬರಬೇಕು-ಶಾಸಕ ಚಂದ್ರು ಲಮಾಣಿ

KannadaprabhaNewsNetwork | Published : May 6, 2025 12:23 AM

ಸಾರಾಂಶ

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಳೆಗೆ ಬೆಂಕಿ ತಗುಲಿ ನಷ್ಟ ಅನುಭವಿಸಿದ್ದ ತಾಲೂಕಿನ ಕೆರಹಳ್ಳಿ ಗ್ರಾಮದ ನಿಂಗಪ್ಪ ಹೊಳೆಯಪ್ಪ ಮೇವುಂಡಿ ಅವರ ಮನೆಗೆ ಶಾಸಕ ಚಂದ್ರು ಲಮಾಣಿ ತೆರಳಿ ಹೆಸ್ಕಾಂನಿಂದ ₹ 3,72,000 ಚೆಕ್ಕನ್ನು ವಿತರಣೆ ಮಾಡಿದರು.

ಶಿರಹಟ್ಟಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಳೆಗೆ ಬೆಂಕಿ ತಗುಲಿ ನಷ್ಟ ಅನುಭವಿಸಿದ್ದ ತಾಲೂಕಿನ ಕೆರಹಳ್ಳಿ ಗ್ರಾಮದ ನಿಂಗಪ್ಪ ಹೊಳೆಯಪ್ಪ ಮೇವುಂಡಿ ಅವರ ಮನೆಗೆ ಶಾಸಕ ಚಂದ್ರು ಲಮಾಣಿ ತೆರಳಿ ಹೆಸ್ಕಾಂನಿಂದ ₹ 3,72,000 ಚೆಕ್ಕನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ರೈತರು ಪ್ರತಿ ಹಂತದಲ್ಲೂ ಸಂಕಷ್ಟ ಎದುರಿಸುತ್ತಿದ್ದಾರೆ. ಹೊಲದಲ್ಲಿ ಫಸಲು ಬೆಳೆದು ನಿಂತಾಗ ಮಿಕಗಳ ಕಾಟ, ಜಿಗರೆಗಳ ಕಾಟ, ಬೆಳೆಗೆ ಅನೇಕ ರೀತಿಯ ರೋಗರುಜಿನಗಳ ಕಾಟ ಹೀಗೆ ಎಲ್ಲ ರೀತಿಯಿಂದಲೂ ತೊಂದರೆ ಅನುಭವಿಸುತ್ತಿದ್ದು, ಸರ್ಕಾರ ರೈತರ ನೆರವಿಗೆ ಬರಬೇಕು ಎಂದರು.

ಬೆಳೆವಿಮಾ ಕಂಪನಿಯವರ ತಾರತಮ್ಯ ನೀತಿಯಿಂದ ತಾಲೂಕಿನ ಅನೇಕ ಗ್ರಾಮಗಳ ರೈತರಿಗೆ ಬೆಳೆ ವಿಮೆ ಮತ್ತು ಬೆಳೆ ಪರಿಹಾರದ ಮೊತ್ತ ಸರಿಯಾಗಿ ತಲುಪಿಲ್ಲ ಎನ್ನುವ ಆರೋಪ ಎಲ್ಲೆಡೆ ರೈತರಿಂದ ಕೇಳಿ ಬರುತ್ತಿದೆ. ರೈತರನ್ನು ಗೋಳಾಡಿಸಿದರೆ ಯಾರಿಗೂ ಒಳಿತು ಆಗುವುದಿಲ್ಲ. ದೇಶಕ್ಕೆ ಅನ್ನ ನೀಡುವ ರೈತ ಯಾವಾಗಲು ಸಂತಸದಿಂದ ಇರಬೇಕು ಎಂದರು.

ಒಂದೆಡೆ ವರುಣ ಕೈಬಿಡುವುದಿಲ್ಲ ಎಂದು ನಂಬಿ ಸಾವಿರಾರು ರು. ಹಣ ಖರ್ಚು ಮಾಡಿ ಭೂಮಿತಾಯಿ ಉಡಿ ತುಂಬುವ (ಬಿತ್ತನೆ ಮಾಡುವ) ರೈತರು ಬೆಳವಣಿಗೆ ಹಂತದಲ್ಲಿ ಮಳೆ ಕೈಕೊಡುವುದು ಪ್ರತಿವರ್ಷವೂ ಇದ್ದದ್ದೇ. ಇತ್ತಿತ್ತಲಾಗಿ ಕೃಷಿ ಕಷ್ಟವಾಗಿದೆ. ಮಳೆಯಾಶ್ರಿತ ಜಮೀನುಗಳಲ್ಲಿ ಮಳೆ ಇಲ್ಲದೇ ರೈತರ ಸಂಗಾತಿ ಜಾನುವಾರುಗಳನ್ನು ಕೂಡ ಮೇಯಿಸಲು ಹುಲ್ಲು ಸಹ ಸಿಗದೆ ರೈತ ಕೆಲವೊಂದು ಬಾರಿ ತಲೆ ಮೇಲೆ ಕೈಹೊತ್ತು ಕೂರುವಂತಹ ಸ್ಥಿತಿ ನೋಡುತ್ತಿದ್ದೇವೆ.

ಬಿತ್ತನೆ ಬೀಜ, ಗೊಬ್ಬರ ಮತ್ತು ಕೃಷಿ ಕೂಲಿ ಕಾರ್ಮಿಕರಿಗಾಗಿ ವಿವಿಧೆಡೆ ಮಾಡಿದ ಸಾಲ ಸಹ ತೀರಿಸಲು ಸಾದ್ಯವಾಗದೆ ಪರದಾಡುತ್ತಿದ್ದ ರೈತರ ಗೋಳು ಹೇಳ ತೀರದಾಗಿದೆ. ಒಟ್ಟಾರೆ ರೈತರ ಕಷ್ಟಗಳಿಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿ ವರ್ಗವಾಗಲಿ ಸ್ಪಂದನೆ ಮಾಡಿ ರೈತರ ಅಭಿವೃದ್ದಿಗೆ ಸಹಕರಿಸಬೇಕು ಎಂದು ಕರೆ ನೀಡಿದರು.ಈ ವೇಳೆಗೆ ಹೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಅಂಜನಪ್ಪ, ಗ್ರಾಮ ಲೆಕ್ಕಾಧಿಕಾರಿ ಅನಿಲ್ ಗೌಡ ಮಲ್ಗೌಡ್ರು, ಗ್ರಾಮ ಪಂಚಾಯಿತಿ ಸದಸ್ಯರಾದ ಯಲ್ಲಪ್ಪ ಕಂಬಳಿ, ಉಪಾಧ್ಯಕ್ಷೆ ಪ್ರೇಮವ್ವ ಮಾಂತೇಶ ಲಮಾಣಿ, ಮಾಜಿ ಅಧ್ಯಕ್ಷ ಭೀಮಪ್ಪ ರಾಮಪ್ಪ ಲಮಾಣಿ, ಪ್ರಶಾಂತ ಪಾಟ್ಯಿ, ಶಿವಪ್ಪ ಕಾರಭಾರಿ, ಮಲ್ಲೇಶ ಪುರಪ್ಪ ಲಮಾಣಿ, ಮಾಂತೇಶ್ ಲಮಾಣಿ, ಪ್ರಭಣ್ಣ ಬಗಲಿ, ವಾಸುದೇವ ತಳವಾರ, ಹನುಮಂತ ಮಾಚೇನಹಳ್ಳಿ, ಹನುಮಂತರೆಡ್ಡಿ ಬುಳ್ಳಪ್ಪನವರ, ಅಣ್ಣಪ್ಪ ರಣತೂರ, ಈರಣ್ಣ ಮರಡೂರ, ಕೋಟೇಶ್ ಮಾಚನಹಳ್ಳಿ, ಹಾಲಪ್ಪ ನಾವಿ, ಮಂಜಯ್ಯ ಹಿರೇಮಠ, ಕೊಟ್ರಯ್ಯ ಹಿರೇಮಠ, ದಾವಲಸಾಬ್ ನದಾಫ, ಶಿವಪುತ್ರಪ್ಪ ಚನ್ನೂರ, ಶಿವಪುತ್ರಪ್ಪ ಹಲವಾಗಲಿ ಸೇರಿದಂತೆ ಊರಿನ ಗುರು ಹಿರಿಯರು ಮುಖಂಡರು ಉಪಸ್ಥಿತರಿದ್ದರು.

Share this article