ಕನ್ನಡಪ್ರಭ ವಾರ್ತೆ ಪಾಂಡವಪುರ
ಕಾರ್‍ಯಕ್ರಮದ ಅಂಗವಾಗಿ ಸವಿತ ಸಮುದಾಯದ ಎಲ್ಲಾ ಮುಖಂಡರು ಪಟ್ಟಣದ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯ ಸವಿತ ಸಮಾಜದ ರಾಮಮಂದಿರದಿಂದ ಶ್ರೀತ್ಯಾಗರಾಜರ ಭಾವಚಿತ್ರವನ್ನು ವಾದ್ಯ ತಂಡ ಸೇರಿ ವಿವಿಧ ಕಲಾತಂಡಗಳ ಮೂಲಕ ಪಟ್ಟಣದ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಬಳಿಕ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಕಾರ್‍ಯಕ್ರಮಕ್ಕೆ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಅವರು ಶ್ರೀತ್ಯಾಗರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.ಕಾರ್‍ಯಕ್ರಮದಲ್ಲಿ ಮೈಸೂರಿನ ಸವಿಗಾನ ಸಂಗೀತ ಶಾಲೆ ವಿದುಷಿ ಗಾಯಿತ್ರಿ ಸತ್ಯನಾರಾಯಣ ಶಿಷ್ಯವೃಂದ ಹಾಗೂ ಶ್ರೀಹರೀಶ್ ಪಾಂಡವ ತಂಡದಿಂದ ಶ್ರೀತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿಗಾಯನ ನಡೆಸಿದರು. ಬಳಿಕ ವಿಶೇಷ ನಾದಸ್ವರ ಕಲಾವಿದರಾದ ಎನ್.ರಾಜೇಶ್, ಎನ್.ಮಂಜು, ಡೋಲ್ ವಿದ್ವಾನ ಕಲಾವಿದರಾದ ಬಿ.ಆರ್.ವೆಂಕಟೇಶ್, ಕೆ.ಅಜಯ್ ಕುಮಾರ್, ಚಂದನ್‌ಕುಮಾರ್ ಆರ್. ತಂಡದಿಂದ ವಾದ್ಯಗೋಷ್ಠಿ ನಡೆಸುವ ಮೂಲಕ ಎಲ್ಲರ ಗಮನ ಸೆಳೆದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಸವಿತ ಸಮುದಾಯದ ಮುಖಂಡರು ಪ್ರತಿವರ್ಷವೂ ಶ್ರೀತ್ಯಾಗರಾಜ ಆರಾಧನೆ ಮಹೋತ್ಸವ ನಡೆಸುವ ಮೂಲಕ ಸಂಸ್ಕೃತಿಯನ್ನು ಕಟ್ಟಿಬೆಳೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪಟ್ಟಣದಲ್ಲಿರುವ ಶ್ರೀರಾಮಮಂದಿರ ನಿರ್ಮಾಣ ಹಾಗೂ ಅದರ ಮೇಲೆ ಸಂಗೀತ ಮತ್ತು ವಾದ್ಯಶಾಲೆ ನಡೆಸಲು ಕಟ್ಟಡ ನಿರ್ಮಾಣ ಮಾಡಿಸಿಕೊಡುವಂತೆ ಹಲವು ಬಾರಿ ಮನವಿ ಮಾಡಿದ್ದಾರೆ. ಸರ್ಕಾರದಿಂದ ಹಣ ಬಿಡುಗಡೆಯಾಗದ ಕಾರಣ ಸ್ವಲ್ಪತಡವಾಗಿದೆ. ಶೀಘ್ರ ಹಣ ಬಿಡುಗಡೆ ಮಾಡಿ ರಾಮಮಂದಿರ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಅವರನ್ನು ಸಮುದಾಯದ ವತಿಯಿಂದ ಅಭಿನಂದಿಸಲಾಯಿತು. ಕಾರ್‍ಯಕ್ರಮದಲ್ಲಿ ಸವಿತ ಸಮುದಾಯದ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮುಖಂಡರು ಹಾಜರಿದ್ದರು.