ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣಿಕೆ ತಡೆಯುವ ಕುರಿತು ವಿಶೇಷ ಕಾರ್ಯಕ್ರಮ
ಮಾದಕ ವಸ್ತುಗಳ ಸೇವನೆಯಿಂದ ದೇಶದ ಬೆಳವಣಿಗೆಗೆ ಕುಂಠಿತವಾಗುತ್ತದೆ ಎಂದು ಕೊಪ್ಪಳ ನಗರ ಪೋಲಿಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಜಯಪ್ರಕಾಶ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕಾಲೇಜಿನ ಐಕ್ಯೂಎಸಿ, ರೆಡ್‌ಕ್ರಾಸ್ ಘಟಕಗಳು ಹಾಗೂ ಕೊಪ್ಪಳ ನಗರ ಪೋಲಿಸ್ ಠಾಣೆಯ ಸಹಯೋಗದಲ್ಲಿ ನಡೆದ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣಿಕೆ ತಡೆಯುವ ಕುರಿತು ವಿಶೇಷ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.ಯುವಜನತೆ ಮಾದಕ ವಸ್ತುಗಳಿಗೆ ಬಲಿಯಾಗಬಾರದು. ಮಾದಕ ಜಾಲಕ್ಕೆ ತುತ್ತಾಬಾರದು. ಚೆನ್ನಾಗಿ ಓದಬೇಕು. ಕೆಟ್ಟಚಟಕ್ಕೆ ಬಲಿಯಾಗಬಾರದು. ಗಾಂಜಾ, ಅಫಿಮುದಂತಹ ಕೆಟ್ಟ ಹವ್ಯಾಸಗಳಿಗೆ ಬಲಿಯಾಗಬಾರದು. ನಿಮ್ಮ ಮನೆಯಲ್ಲಿ ಮತ್ತು ಸಮಾಜದಲ್ಲಿ ಮಾದಕ ವಸ್ತುಗಳ ನಿಷೇಧದ ಕುರಿತು ಜಾಗೃತಿ ಮೂಡಿಸಬೇಕು. ಕುಡಿಯುವ ವ್ಯಕ್ತಿಗಳು ಮನೆಯಲ್ಲಿ ಹೆಚ್ಚು ದೌರ್ಜನ್ಯಗಳನ್ನು ನಡೆಸುತ್ತಿದ್ದಾರೆ. ಮಾದಕ ವಸ್ತುಗಳು ಸೇವಿಸಿದರೆ ಕ್ಯಾನ್ಸರ್ ಬರುತ್ತೆ. ಮಾದಕ ವಸ್ತುಗಳನ್ನು ಸೇವಿಸಿ ಸಂಸಾರವನ್ನೆ ಹಾಳು ಮಾಡಿಕೊಳ್ಳಬೇಡಿ. ಕ್ಷಣಿಕ ಸುಖಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಳ್ಳಬಾರದು. ತಂದೆ-ತಾಯಿಗಳು ನಿಮ್ಮ ಮೇಲೆ ಬಹಳ ಆಸೆ ಇಟ್ಟುಕೊಂಡಿದ್ದಾರೆ. ಅವರ ಅಸೆಯನ್ನು ನಿರಾಸೆ ಮಾಡಬೇಡಿ. ಯುವಕರಿಂದ ಮಾತ್ರ ದೇಶ ಬದಲಾವಣೆ ಸಾಧ್ಯ. ಮನೆಯಲ್ಲಿ ತಂದೆ, ಅಣ್ಣ ತಮ್ಮಿಂದಿರು ರಾತ್ರಿ ತಡವಾಗಿ ಬಂದರೆ ಅದನ್ನು ನೀವು ಪ್ರಶ್ನೆ ಮಾಡಬೇಕು. ದೇಶದ ಅತ್ಯುನ್ನತ ಸ್ಥಾನಗಳಲ್ಲಿ ಮಹಿಳೆಯರೇ ಇದ್ದಾರೆ. ಆದ್ದರಿಂದ ನೀವು ಉನ್ನತ ಶಿಕ್ಷಣ ಪಡೆದು ಒಳ್ಳೆಯ ಉದ್ಯೋಗಗಳನ್ನು ಪಡೆದುಕೊಳ್ಳಿರಿ. ಹೆಣ್ಣುಮಕ್ಕಳು ಆಮಿಷಕ್ಕೆ ಒಳಗಾಗಬೇಡಿ. ನಿಮಗೆ ಸಮಸ್ಯೆಗಳು ಬಂದಾಗ ಪೊಲೀಸ್ ಇಲಾಖೆಗೆ ತಿಳಿಸಿ ಎಂದರು.
ಈ ಸಂದರ್ಭದಲ್ಲಿ ಕೊಪ್ಪಳ ಪೊಲೀಸ್ ಇಲಾಖೆಯ ಅಧಿಕಾರಿಗಳಾದ ಉಮೇರಾ ಭಾನು, ಶ್ರೀಶೈಲರಾವ್ ಕುಲಕರ್ಣಿ, ಕಾಲೇಜಿನ ಉಪನ್ಯಾಸಕರಾದ ವಿಠೋಬ, ಡಾ. ಪ್ರದೀಪ್‌ಕುಮಾರ, ಡಾ. ನರಸಿಂಹ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.