ಶಿರಹಟ್ಟಿ: ಬಡವರ, ದೀನ ದಲಿತರ ಶೋಷಿತರ ಮಹಿಳೆಯರ ಏಳಿಗೆಗೆ ಪಂಚ ಗ್ಯಾರಂಟಿ ಯೋಜನೆ ಸಹಕಾರಿಯಾಗಿದೆ. ಸರ್ಕಾರ ಪಂಚ ಗ್ಯಾರಂಟಿ ಮೂಲಕ ಬಡವರ ಬದುಕು ಹಸನು ಮಾಡಿದೆ ಎಂದು ಕಾನೂನು ಹಾಗೂ ಸಂಸದೀಯ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಿಂದ ಅಸಹಾಯಕ ದುರ್ಬಲ ವರ್ಗದವರಿಂದ ಹಿಡಿದು ಎಲ್ಲ ವರ್ಗದವರಿಗೂ ಅನುಕೂಲವಾಗಿದೆ. ಪಡಿತರ ವಿತರಣಾ ವ್ಯವಸ್ಥೆ ಸಂಪೂರ್ಣವಾಗಿ ಗಣಕೀಕರಣದಡಿ ಪಡಿತರ ಚೀಟಿದಾರರ ಜತೆಗೆ ಪ್ರತಿ ಫಲಾನುಭವಿಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿ ಬ್ಯಾಂಕ್ ಖಾತೆಯ ಮುಖಾಂತರ ಹಣ ನೀಡಲಾಗುತ್ತಿದೆ. ಮಹಿಳಾ ಸಬಲೀಕರಣಕ್ಕೆ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಎಲ್ಲ ವರ್ಗದ ಕುಟುಂಬಗಳಿಗೆ ಗೃಹ ಜ್ಯೋತಿ ಯೋಜನೆಯಡಿ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪಂಚ ಗ್ಯಾರಂಟಿ ಯೋಜನೆ ಮೂಲಕ ₹೧ ಕೋಟಿ ಕುಟುಂಬ ಬಡತನದಿಂದ ಮೇಲೆತ್ತುವ ಕೆಲಸ ಸಿದ್ದರಾಮ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿದೆ. ಕಳೆದ ೨೦೧೩ರಲ್ಲಿಯೇ ಹಸಿವು ಮುಕ್ತ ರಾಜ್ಯ ಮಾಡುವ ಸಂಕಲ್ಪ ಕೈಗೊಂಡಂತೆ ಇದೀಗ ಪಂಚ ಗ್ಯಾರಂಟಿಗಳ ಮೂಲಕ ನೆಮ್ಮದಿ ರಾಜ್ಯ ಮಾಡಿದ್ದೇವೆ. ಬಡವರ ಬದುಕಿನ ಗುಣಮಟ್ಟ ಎತ್ತರಕ್ಕೇರಬೇಕು. ಎಲ್ಲ ವರ್ಗದ ಜನರ ಅಭಿವೃದ್ಧಿಯಾಬೇಕು. ಅಂದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ರಾಜ್ಯದಲ್ಲಿ ನಮ್ಮ ಸರ್ಕಾರ ಆಡಳಿತಕ್ಕೆ ಬಂದ ನಂತರ ಭ್ರಷ್ಟಾಚಾರ ಕಡಿಮೆಯಾಗಿದೆ. ಮಧ್ಯವರ್ತಿಗಳ, ದಲ್ಲಾಳಿಗಳ ಹಾವಳಿ ಇಲ್ಲದೇ ನೇರವಾಗಿ ಜನರ ಖಾತೆಗೆ ಹಣ ಹಾಕಲಾಗುತ್ತಿದೆ ಎಂದರು.ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ: ಶಿರಹಟ್ಟಿ ಪಟ್ಟಣಕ್ಕೆ ಇದೇ ಮೊದಲ ಬಾರಿ ಅಲ್ಪಸಂಖ್ಯಾರ ಕಾಲನಿ ಯೋಜನೆಯಡಿ ರಸ್ತೆ ಅಭಿವೃದ್ಧಿಗಾಗಿ ₹೩ ಕೋಟಿ ಅನುದಾನ ಬಿಡುಗಡೆಯಾಗಿದೆ. ಗುತ್ತಿಗೆದಾರರು ದೀರ್ಘ ಬಾಳಿಕೆ ಬರುವಂತೆ ಗುಣಮಟ್ಟದ ಕೆಲಸ ಮಾಡಬೇಕು. ಅವಧಿಯೊಳಗೆ ಕಾಮಗಾರಿ ಮುಗಿಸಿ ಜನರ ಬಳಕೆಗೆ ನೀಡಬೇಕು. ಕಳಪೆ ಕಾಮಗಾರಿ ಮಾಡಿದ್ದು ಕಂಡುಬಂದರೆ ಗುತ್ತಿಗೆದಾರರನ್ನೇ ಹೊಣೆಗಾರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಶಾಸಕ ಚಂದ್ರು ಲಮಾಣಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಮಂಜುನಾಥ ಘಂಟಿ ಮಾತನಾಡಿದರು.