ಜಡೇಕುಂಟೆ ಮಂಜುನಾಥ್
ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಸಿಗುವ ಡಾಬಾಗಳು ದಿನದ 24 ಗಂಟೆಯೂ ತೆರೆದೇ ಇರುತ್ತವೆ. ಈ ಡಾಬಾಗಳಿಗೆ ಯಾವುದೇ ಕಾನೂನಿನ ನೀತಿ ನಿಯಮಗಳು ಅನ್ವಯಿಸಿದಂತೆ ಕಾಣುತ್ತಿಲ್ಲ. ಇಲ್ಲಿ ಊಟದ ಜೊತೆಗೆ ಮದ್ಯವೂ ಸಿಗುವುದರಿಂದ ಕುಡಿದು ವಾಹನ ಚಾಲನೆ ಮಾಡಿಕೊಂಡು ಹೋಗವವರೇ ಹೆಚ್ಚು. ಅಬಕಾರಿ ಇಲಾಖೆ ಜಾಣ ಮೌನಕ್ಕೆ ಜಾರಿರುವುದರ ಅಡ್ಡಿ ಪರಿಣಾಮವಿದು.
ಹೆದ್ದಾರಿಗಳಲ್ಲಿ ರಾತ್ರಿಯಿಡೀ ಡಾಬಾಗಳು ಯಾರ ಭಯವೂ ಇಲ್ಲದಂತೆ ತೆರೆದಿರುತ್ತವೆ. ಇಂತಹ ಡಾಬಾಗಳಲ್ಲಿ ಪಾರ್ಟಿಗಳನ್ನು ಮಾಡಿಕೊಂಡು ಸರಿರಾತ್ರಿಯವರೆಗೂ ಮದ್ಯದ ಅಮಲಿನಲ್ಲಿ ತೂರಾಡುತ್ತಲೇ ಇರುವ ಯುವಕರ ಪಡೆಗಳು ಮಾಡುವ ಅವಾಂತರಗಳು ಭಯಾನಕವಾಗಿರುತ್ತವೆ.ಹೊರವಲಯದ ಹೆದ್ದಾರಿಯಲಿ ವೀಲಿಂಗ್ ಮಾಡುವುದು, ಜೋರು ಕರ್ಕಶ ಶಬ್ದಗಳ ಹಾವಳಿ ನೋಡುಗರನ್ನು ಬೆಚ್ಚಿಬೀಳಿಸದೇ ಇರುವುದಿಲ್ಲ. ಸರಿ ರಾತ್ರಿಯಲ್ಲಿ ಪ್ರಯಾಣಿಸುವ ವಾಹನ ಪ್ರಯಾಣಿಕರು ಜೀವ ಕೈಯಲ್ಲೆ ಇಟ್ಟುಕೊಂಡು ಭಯದಲ್ಲಿ ಓಡಾಡಬೇಕಾದಂತಹ ಪರಿಸ್ಥಿತಿ ಇಲ್ಲಿನದು.
ಪೊಲೀಸ್ ಹೆದ್ದಾರಿ ಗಸ್ತು ವಾಹನ ಇರುತ್ತಾದಾದರೂ ಯಾವುದೇ ಡಾಬಾಗಳನ್ನು ಅವಧಿ ಮೀರಿ ನಡೆಸುತ್ತಿದ್ದರೂ ತುಟಿ ಬಿಚ್ಚದೇ ಹಾರ್ನ್ ಹಾಕಿ ಮುಂದಕ್ಕೆ ಸಾಗುತ್ತಾರೆ. ಗಸ್ತು ವಾಹನ ಕಣ್ಣೆದುರು ಇರುವವರೆಗೂ ಲೈಟ್ ಆರಿಸುವ ಡಾಬಾಗಳ ಮಾಲೀಕರು ಗಸ್ತು ವಾಹನ ಮರೆಯಾದ ತಕ್ಷಣ ಲೈಟ್ ಆನ್ ಮಾಡಿ ಯಥಾ ಪ್ರಕಾರ ವ್ಯವಹಾರಕ್ಕೆ ಇಳಿದುಬಿಡುತ್ತವೆ.
ಚಿತ್ರದುರ್ಗದ ಕಡೆಯಿಂದ ಚಳ್ಳಕೆರೆಗೆ ಎಂಟ್ರಿಯಾಗುವ ಅರಣ್ಯ ಇಲಾಖೆಯ ಮುಂಭಾಗದಲ್ಲಿ ಅಂಗಡಿ, ಹೋಟೆಲ್ ಗಳ ಹಾವಳಿ ಅಷ್ಟಿಷ್ಟಲ್ಲ. ಅಲ್ಲೇ ಅಂಗಡಿ ಮುಂದೆ ರಸ್ತೆಗೆ ತಾಗಿಕೊಂಡಂತೆ ವಾಹನಗಳ ನಿಲುಗಡೆ ಮಾಡಿಕೊಂಡಿರುವುದನ್ನು ಸಮೀಪದಲ್ಲೇ ಚೆಕ್ ಪೋಸ್ಟ್ ನಲ್ಲಿರುವ ಪೋಲಿಸರು ಕ್ಯಾರೆ ಅನ್ನುವುದಿಲ್ಲ. ಭಾನುವಾರ ರಾತ್ರಿಯಾಯಿತೆಂದರೆ ಆಂಧ್ರದ ಕಡೆಯಿಂದ ಬರುವ ಮೆಣಸಿನಕಾಯಿ ತುಂಬಿದ ಟಾಟಾ ಏಸ್ ವಾಹನಗಳನ್ನು ತಪಾಸಣೆಗೆ ನಿಲ್ಲಿಸುವ ಪೋಲೀಸರು ರಸ್ತೆಗೆ ನಿಲ್ಲಿಸಿಕೊಂಡು ಹೋಗಿ ಬರುವ ವಾಹನಗಳಿಗೆ ಕಿರಿಕಿರಿ ಮಾಡುತ್ತಿರುವುದು ಮಾಮೂಲಿಯಾಗಿದೆ.
ಚಳ್ಳಕೆರೆ ಹೊರವಲಯದ ಹೆದ್ದಾರಿಯಲ್ಲಿಯೂ ಪುಂಡರು ಎಣ್ಣೆ ಪಾರ್ಟಿ ಮಾಡುವುದು ಮಾಮೂಲಿಯಾಗಿದೆ. ಮನೆಗಳ್ಳತನ ಮಾಡುವವರಿಗೆ ಹೇಳಿ ಮಾಡಿಸಿದ ಜಾಗಗಳೇ ಇಂತಹ ಡಾಬಾಗಳು. ಚಳ್ಳಕೆರೆ ನಗರ ಇತ್ತೀಚಿನ ವರ್ಷಗಳಲ್ಲಿ ಬಹಳ ವಿಸ್ತಾರವಾಗಿ ಬೆಳೆಯುತ್ತಿದೆ. ಪಾವಗಡ ರಸ್ತೆಯಲ್ಲಿ ದೊಡ್ಡೇರಿವರೆಗೂ, ಚಿತ್ರದುರ್ಗ ರಸ್ತೆಯಲ್ಲಿ ಇಮಾಂಪುರದವರೆಗೂ, ಬೆಂಗಳೂರು ರಸ್ತೆಯಲ್ಲಿ ನಿರ್ಮಲ ಲಾಡ್ಜ್ ದಾಟಿ ಸಿದ್ದಾಪುರದವರೆಗೂ, ಬಳ್ಳಾರಿ ರಸ್ತೆಯಲ್ಲಿ ವೆಂಕಟೇಶ್ವರ ನಗರ ದಾಟಿ ಮುಂದೆ ಹೈವೇ ಅಂಡರ್ ಪಾಸ್ ವರೆಗೂ ಬೆಳೆದಿದೆ.