ರಾಮನ ಹೆಸರಿನಲ್ಲಿ ಭಕ್ತರ ನಂಬಿಕೆಗೆ ಧಕ್ಕೆ । ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಕಾಂಗ್ರೆಸ್ ಚಾರ ಸಮಿತಿ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ
ಅಯೋಧ್ಯೆಯ ರಾಮ ಮಂದಿರದ ಹುಂಡಿ ಹಣದ ಕಳವು ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು. ಇಲ್ಲದಿದ್ದರೆ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಆಗ್ರಹಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಮನ ಭಕ್ತರು ಸಲ್ಲಿಸಿದ ದೇಣಿಗೆ ಕಳವಾಗಲು ಆದ ಆಡಳಿತಾತ್ಮಕ ವೈಫಲ್ಯಗಳಿಗೆ ಯಾರು ಹೊಣೆ? ದೇವಸ್ಥಾನದ ಹುಂಡಿ ಹಣದ ಸುರಕ್ಷತೆಯಲ್ಲಿ ಲೋಪಗಳಾಗಿದ್ದರೆ, ಅದರ ಬಗ್ಗೆ ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳು ಯಾವ ಕ್ರಮ ಕೈಗೊಂಡಿವೆ?. ಪ್ರಕರಣದ ಸಂಪೂರ್ಣ ಸತ್ಯ ದೇಶದ ಜನತೆಗೆ ತಿಳಿಯುವಂತೆ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲು ಸರ್ಕಾರ ಸಿದ್ಧವೇ? ಎಂದು ಪ್ರಶ್ನಿಸಿದರು.ತಪ್ಪಿತಸ್ಥರು ಯಾರೇ ಆಗಿರಲಿ, ಅವರ ವಿರುದ್ಧ ಯಾವುದೇ ರಾಜಕೀಯ ಅಥವಾ ಸಂಘಟನಾತ್ಮಕ ಪ್ರಭಾವವಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದೇ? ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಪ್ರಕರಣದ ಕುರಿತು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು. ಜೊತೆಗೆ, ಪ್ರಕರಣದ ನೈತಿಕ ಹೊಣೆಗಾರಿಕೆಯನ್ನು ಸ್ವೀಕರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ರಾಜ್ಯ ಕಾನೂನು ವಿಭಾಗದ ಜಂಟಿ ಕಾರ್ಯದರ್ಶಿ ಎಸ್.ವಿ.ನಾಗರಾಜ್ ಮಾತನಾಡಿ,‘ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ದೇಣಿಗೆ ಹಣ ಕಳವು ಪ್ರಕರಣವನ್ನು ಹಾಲಿ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಅಭಿಯಾನ ಆರಂಭಿಸಲಾಗುವುದು. ಕಾಣಿಕೆ ಹಣ ಕದ್ದವರು ಎಸ್ಐಆರ್ ಸಂದರ್ಭದಲ್ಲಿ ಮತದಾನದ ಹಕ್ಕು ಕದಿಯುವ ಸಾಧ್ಯತೆಯಿದೆ. ಹೀಗಾಗಿ, ಮತದಾರರನ್ನು ಎಚ್ಚರಿಸುವ ಅಭಿಯಾನವನ್ನು ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಪಂಜಿನ ಮೆರವಣಿಗೆ ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಕೂಡಾ ಆಯೋಜಿಸಲಾಗಿದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಗೌರಿಬಿದನೂರು ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಮಂಜಣ್ಣ, ಮಂಚೇನಹಳ್ಳಿ ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ತಿರುಮಳಪ್ಪ, ಕಾಂಗ್ರೆಸ್ ಕಾನೂನು ವಿಭಾಗದ ಜಿಲ್ಲಾಧ್ಯಕ್ಷ ಮುನಿಕೃಷ್ಣಪ್ಪ, ಶಿವಾರೆಡ್ಡಿ ಇದ್ದರು.