ಮನೆಗೆ ಗುಡ್ಡ ಕುಸಿದು ಕುಟುಂಬ ಅತಂತ್ರ: ಕೇಳುವವರೇ ಇಲ್ಲ!

KannadaprabhaNewsNetwork |  
Published : Jun 16, 2025, 03:38 AM ISTUpdated : Jun 16, 2025, 12:48 PM IST
ಮೇ ೩೦ ರ ಪ್ರಳಾಯಾಂತಕಾರಿ ಮಳೆ ಹಾನಿಗೊಳಗಾದವರ ನೋವು ಕೇಳುವವರಿಲ್ಲ .  .  . | Kannada Prabha

ಸಾರಾಂಶ

ಪುತ್ತೂರು ತಾಲೂಕು ಹಿರೆಬಂಡಾಡಿ ಗ್ರಾಮದ ಅತ್ತಾಜೆ ಎಂಬಲ್ಲಿನ ಮನೆಯಿದು. ಪತಿಯನ್ನು ಕಳೆದುಕೊಂಡು ಮೂವರು ಮಕ್ಕಳನ್ನು ಸಾಕುತ್ತಿರುವ ಗೀತಾ ಎಂಬಾಕೆಯ ಮನೆಯ ಪರಿಸ್ಥಿತಿ ಶೋಚನೀಯವಾಗಿದೆ.  

 ಉಪ್ಪಿನಂಗಡಿ  : ಸರ್ಕಾರಿ ವ್ಯವಸ್ಥೆ ನಿಷ್ಕ್ರಿಯವಾದರೆ ಜನ ಸಾಮಾನ್ಯರ ಬದುಕು ಹೇಗೆ ದುಸ್ತರವಾಗಬಲ್ಲದು ಎನ್ನುವುದಕ್ಕೆ ಮೇ 30 ರಂದು ಸುರಿದ ಪ್ರಳಯಾಂತಕಾರಿ ಮಳೆಯ ಸಂತ್ರಸ್ತರ ಅತಂತ್ರ ಬದುಕೇ ಸಾಕ್ಷಿಯಾಗಬಲ್ಲದು.

 ಘಟನೆ ಘಟಿಸಿ ೧೦ ದಿನ ಸಂದರೂ ಸಂತ್ರಸ್ತರಿಗೆ ನಯಾ ಪೈಸೆಯ ಸಹಾಯಹಸ್ತವಿಲ್ಲ. ಪರಿಹಾರ ವಿತರಣೆಯ ಮಾತೇ ಇಲ್ಲ. ಪುತ್ತೂರು ತಾಲೂಕು ಹಿರೆಬಂಡಾಡಿ ಗ್ರಾಮದ ಅತ್ತಾಜೆ ಎಂಬಲ್ಲಿನ ಮನೆಯಿದು. ಪತಿಯನ್ನು ಕಳೆದುಕೊಂಡು ಮೂವರು ಮಕ್ಕಳನ್ನು ಸಾಕುತ್ತಿರುವ ಗೀತಾ ಎಂಬಾಕೆಯ ಮನೆಯ ಪರಿಸ್ಥಿತಿ ಶೋಚನೀಯವಾಗಿದೆ. 

ಮಗ ಇನ್ನೇನು ದುಡಿಯಲು ಆರಂಭಿಸಿದ ಎನ್ನುವಾಗ ದುಡಿಮೆಯ ಸ್ಥಳದಲ್ಲಿ ವಾಹನ ಅಪಘಾತಕ್ಕೆ ಸಿಲುಕಿ ದೇಹ ಜರ್ಝರಿತವಾಗಿ ಗಾಯಗೊಂಡು ಚಿಕಿತ್ಸೆಯಲ್ಲಿ ಇರುವಾಗಲೇ ಪ್ರಾಕೃತಿಕ ವಿಕೋಪ ಎದುರಾಗಿದೆ. ರಾತ್ರಿ ಮನೆ ಮಂದಿ ಮನೆಯಲ್ಲಿ ಇರುವಾಗಲೇ ಗುಡ್ಡ ಜರಿತದ ಶಬ್ದ ಕೇಳಿ ಎಚ್ಚೆತ್ತು ಪರಿಶೀಲಿಸುವ ವೇಳೆ ಗುಡ್ಡ ಜರಿದು ಮನೆಗಪ್ಪಳಿಸಿ ಮನೆಯ ಹಿಂಬದಿ ಗೋಡೆ ಮುಂಭಾಗದ ಕೋಣೆಗೆ ಬಂದು ಬಿದ್ದಿತ್ತು. ಗೋಡೆ ಬಿದ್ದ ಕಾರಣಕ್ಕೆ ಹಿಂಭಾಗದ ಹಂಚಿನ ಛಾವಣಿಯು ತುಂಡರಿಸಲ್ಪಟ್ಟು ಇಡೀ ಮನೆಯೇ ಹಾನಿಗೀಡಾಗಿತ್ತು. ಮನೆಯ ಅಡುಗೆ ಕೋಣೆ , ಬಚ್ಚಲು ಮನೆ, ಎಲ್ಲವೂ ನಾಶಗೊಂಡ ಕಾರಣ ಅತಂತ್ರ ಸ್ಥಿತಿಗೆ ಇಡೀ ಕುಟುಂಬ ಸಿಲುಕಿತ್ತು. 

ಮಲಗಲೂ ಸ್ಥಳವಿಲ್ಲದ ಸ್ಥಿತಿಯಲ್ಲಿ ಮನೆ ಮಂದಿ ಪರಿಚಯಸ್ಥರ ಮನೆಗೆ ಹೋಗಿ ಮಲಗುವ ಅಸಹಾಯಕತೆ ಈ ಕುಟುಂಬದ್ದಾಗಿದೆ. ಘಟನೆಯ ಬಳಿಕ ಸ್ಥಳಕ್ಕೆ ಪಂಚಾಯಿತಿ ಅಧಿಕಾರಿಗಳು, ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ನಿರ್ಗಮಿಸಿದ್ದಾರೆ. 

ನಿರ್ಗಮಿಸುವ ವೇಳೆ ಈ ಮನೆಯಲ್ಲಿ ವಾಸ್ತವ್ಯ ಅಪಾಯಕಾರಿಯಾಗಿರುವುದರಿಂದ ವಾಸ್ತವ್ಯವನ್ನು ಬದಲಾಯಿಸಿ ಎಂದು ಸಲಹೆ ನೀಡಿದ್ದಾರೆ. ಭೇಟಿ ನೀಡಿ ನಿರ್ಗಮಿಸಿದ ಅಧಿಕಾರಿಗಳು ಘಟನೆ ಘಟಿಸಿ ಹತ್ತು ದಿನಗಳಾದರೂ ಪರಿಹಾರ ಕಾರ್ಯದತ್ತ ಗಮನಿಸದೇ ಇರುವುದು ಸಂತ್ರಸ್ತರ ನರಳಾಟ ಹೆಚ್ಚಿಸಿದೆ. ಈ ಬಾರಿಯ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ , ಪ್ರಾಕೃತಿಕ ವಿಕೋಪದ ಸಮಯದಲ್ಲಿ ಸಂತ್ರಸ್ತರಿಗೆ ತ್ವರಿತ ಪರಿಹಾರ ಧನವನ್ನು ವಿತರಿಸಬೇಕು. ಮನೆ ಹಾನಿಗೀಡಾದವರಿಗೆ ಗರಿಷ್ಠ ಪರಿಹಾರ ಒದಗಿಸಲು ಕಂದಾಯ ಇಲಾಖಾಧಿಕಾರಿಗಳು ಹೃದಯವೈಶಾಲ್ಯತೆಯಿಂದ ವರದಿ ತಯಾರಿಸಬೇಕೆಂದು ಸೂಚಿಸಿದ್ದರು.ಆದಾಗ್ಯೂ ಯಾವುದೇ ಪರಿಹಾರ ಧನವನ್ನು ಸಂತ್ರಸ್ತರಿಗೆ ವಿತರಿಸುವಲ್ಲಿ ಆಡಳಿತ ವ್ಯವಸ್ಥೆ ಯಾವುದೇ ಕ್ರಮ ಕೈಗೊಳ್ಳದಿರುವುದು ಕಳವಳಕಾರಿಯೆನಿಸಿದೆ.

 ಉಪ್ಪಿನಂಗಡಿ ಭಾಗದಲ್ಲಿ ಹಲವೆಡೆ ಗುಡ್ಡ ಕುಸಿದು ನಿಂತಿದೆ. ಇನ್ನು ಕೆಲವೆಡೆ ರಸ್ತೆಯಂಚಿನಲ್ಲಿ ಗುಡ್ಡ ಮೇಲಿನ ತೆಂಗಿನ ಮರ ಗುಡ್ಡ ಕುಸಿತದಿಂದ ಅಪಾಯಕಾರಿಯಾಗಿ ನಿಂತಿದ್ದು, ಯಾವುದೇ ಸಮಯದಲ್ಲಿ ಧರೆಗುರುಳುವ ಭೀತಿ ಎದುರಾಗಿದೆ. ಇನ್ನು ಕೆಲವೆಡೆ ಮನೆಗಳು ಕುಸಿತದ ಭೀತಿಗೆ ಸಿಲುಕಿದೆ. ಇದೆಲ್ಲವೂ ಈ ಬಾರಿಯ ಮಳೆಗಾಲದಲ್ಲಿ ಕುಸಿತಕ್ಕೊಳಗಾಗುವ ಸಾಧ್ಯತೆ ಖಚಿತವಾಗಿರುವುದರಿಂದ ಹಾನಿತಡೆಗಟ್ಟಲು ಆಡಳಿತ ವ್ಯವಸ್ಥೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ

PREV
Read more Articles on

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌