ಶಿವಮೊಗ್ಗ: ನಿತ್ಯದಲ್ಲಿ ನಡೆಸುವ ಇಷ್ಟಲಿಂಗಾರ್ಚನೆಯ ಮೂಲಕ ಸಾಧ್ಯವಾಗುವ ಪ್ರಾಣಲಿಂಗ ಮತ್ತು ಭಾವಲಿಂಗಗಳ ಅನುಸಂಧಾನದ ಮಹಾಬೆಳಗಿನಲ್ಲಿ ತನ್ನನ್ನೇ ತಾನು ಲಿಂಗ ರೂಪದಲ್ಲಿ ಭಾವಿಸಿ ಲಿಂಗಾಂಗ ಸಾಮರಸ್ಯದ ಸ್ಥಿತಿಯನ್ನು ಹೊಂದುವುದೇ ಲಿಂಗತತ್ವ ದರ್ಶನ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.
ವಿಶ್ವವೆಲ್ಲವನ್ನೂ ತನ್ನೊಳಗೆ ಇಟ್ಟುಕೊಂಡಿರುವ ಆ ಬ್ರಹ್ಮತತ್ವವನ್ನೇ ಸನಾತನ ವೀರಶೈವ ಧರ್ಮದಲ್ಲಿ ಲಿಂಗ ರೂಪದಲ್ಲಿ ಪೂಜಿಸುವ ಇಷ್ಟಲಿಂಗದ ಅನುಸಂಧಾನವೆಂದರೆ ಅದು ಸರ್ವರನ್ನು ಹಾಗೂ ಸರ್ವವೆಲ್ಲವನ್ನು ತನ್ನ ಆತ್ಮವನ್ನಾಗಿ ಭಾವಿಸುವ ಸದ್ಭಾವನೆ. ಇಂತಹ ಸಮಷ್ಟಿಭಾವವು ಸರ್ವರಲ್ಲಿ ಸಿಂಚನವಾದಾಗ ಜಗತ್ತೆಲ್ಲವೂ ಶಾಂತಿಯಿಂದ ಬದುಕಬಲ್ಲದು. ಅಂತಯೇ ಪ್ರತಿಯೊಬ್ಬರೂ ಇಷ್ಟಲಿಂಗದ ಮೂಲ ಸ್ವರೂಪವನ್ನು ಅರಿತು ಪೂಜಿಸಿ ಜೀವನವನ್ನು ಸಾರ್ಥಕ ಗೊಳಿಸಿಕೊಳ್ಳುವುದರ ಜೊತೆಗೆ ಶಾಶ್ವತ ವಿಶ್ವಶಾಂತಿ ನೆಲಗೊಳ್ಳುವಂತೆ ಜಾಗೃತಿ ಸಂದೇಶ ನೀಡುವ ಮೂಲ ಆಶಯವೇ ಲಿಂಗತತ್ವ ದರ್ಶನವಾಗಿದೆ ಎಂದು ತಿಳಿಸಿದರು.
ನಮ್ಮ ದೇಶದ ಆಚಾರ್ಯರು, ಋಷಿ ಮಹರ್ಷಿಗಳು, ಸಾಧು ಸಂತರು, ಶರಣರು ಮತ್ತು ಪ್ರವಾದಿಗಳೆಲ್ಲರೂ ಈ ಜಗತ್ತಿನ ಮೂಲ ತತ್ವವನ್ನು ತಿಳಿದುಕೊಳ್ಳುವುದಕ್ಕಾಗಿ ವೇದಾಗಮಗಳ ಅಧ್ಯಯನ, ಚಿಂತನೆ, ತ್ಯಾಗ ಮತ್ತು ತಪಸ್ಸುಗಳ ಫಲವಾಗಿ ಕಂಡುಹಿಡಿದ ತತ್ವವೇ ಬ್ರಹ್ಮತತ್ತ್ವವು. ಯಾವುದು ಎಲ್ಲಕ್ಕಿಂತಲೂ ಬೃಹದಾಕಾರವಾಗಿರುವುದೋ ಅದುವೇ ಬ್ರಹ್ಮವು. ಅದುವೇ ವಿಶ್ವರೂಪದಲ್ಲಿ ಅಭಿವ್ಯಕ್ತಿಯಾಗಿದೆ. ಈ ಬ್ರಹ್ಮತತ್ವಕ್ಕೆ ಶಿವಾಗಮಗಳಲ್ಲಿ ಲಿಂಗತತ್ವ ಎಂದು ಕರೆಯಲಾಗಿದೆ. ಇದುವೇ ವೀರಶೈವ ಲಿಂಗಾಯತ ಸಮಾಜದ ಆರಾಧ್ಯ ದೈವವು. ಜಗದ್ಗುರು ಪಂಚಾಚಾರ್ಯರು, ಶಿವಾಚಾರ್ಯರು, ಸಂತರು, ಸಮಸ್ತ ಶರಣರು ಈ ಲಿಂಗ ತತ್ವವನ್ನು ಅರಿತುಕೊಂಡು ಆರಾಧಿಸಿ ಲಿಂಗಾಂಗ ಸಾಮರಸ್ಯ ರೂಪವಾದ ಮುಕ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.ತಾವರಕೆರೆ ಶಿಲಾಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ವಿವಿಧ ಸಂಘಟನೆಗಳ ಗಣ್ಯರಾದ ಎಸ್.ಎಸ್.ಜ್ಯೋತಿಪ್ರಕಾಶ, ಎಸ್.ಪಿ.ದಿನೇಶ, ಬಳ್ಳೇಕೆರೆ ಸಂತೋಷ, ಸಿ.ಜಿ.ಪರಮೇಶ್ವರಪ್ಪ ಇತರರು ಇದ್ದರು.